ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನಿಲ್ ಜಕಾರ್ ಬಿಜೆಪಿ ಸೇರ್ಪಡೆ ರಾಜೀನಾಮೆ ನೀಡಿದ ಕೆಲ ದಿನಗಳಲ್ಲಿ ಬಿಜೆಪಿಗೆ ಶೋಕಾಸ್‌ ನೋಟಿಸ್‌ಗೂ ಕೇರ್‌ ಮಾಡದೆ ರಾಜೀನಾಮೆ

ನವದೆಹಲಿ(ಮೇ.19): ಪಂಜಾಬ್ ರಾಜಕೀಯ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ನವಜೋತ್ ಸಿಂಗ್ ಸಿಧು ಜೊತೆ ಮನಸ್ತಾಪ, ಕಾಂಗ್ರೆಸ್ ಜೊತೆ ಮುನಿಸಿಕೊಂಡು ಪಕ್ಷ ತೊರೆದಿದ್ದ ಮಾಜಿ ಅಧ್ಯಕ್ಷ ಸುನಿಲ್ ಜಕಾರ್ ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ.

ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಚರಣಜಿತ್ ಸಿಂಗ್ ಚನಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದ ಸುನಿಲ್ ಜಕಾರ್‌ಗೆ ಕಾಂಗ್ರೆಸ್ ಶೋಕಾಸ್ ನೋಟಿಸ್ ನೀಡಿತ್ತು. ಆದರೆ ನೋಟಿಸ್‌ಗೆ ಕ್ಯಾರೆ ಮಾಡದ ಸುನಿಲ್ ಜಕಾರ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದರು.

1988ರ ಹಲ್ಲೆ ಮಾಡಿ ಹತ್ಯೆ ಪ್ರಕರಣ : ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು

ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸುನಿಲ್ ಜಕಾರ್ ತಮ್ಮ ಸ್ಥಾನವನ್ನು ನವಜೋತ್ ಸಿಂಗ್ ಸಿಧುಗೆ ಬಿಟ್ಟುಕೊಟ್ಟಿದ್ದರು. ಬಳಿಕ ಕಾಂಗ್ರೆಸ್‌ನಲ್ಲಿ ಭಾರೀ ಬಣ ರಾಜಕೀಯ ಆರಂಭಗೊಂಡಿತ್ತು. ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಈ ರಾಜಕೀಯ ಸಂಚಲನಕ್ಕೆ ಆರಂಭ ಬರೆದಿತ್ತು.

ಕಾಂಗ್ರೆಸ್‌ನಲ್ಲಿ ತನನ್ನು ನಿರ್ಲಕ್ಷಿಸಲಾಯಿತು. ಪಕ್ಷದ ಕಾರ್ಯಕರ್ತನಾಗಿ, ನಾಯಕನಾಗಿ ಪಂಜಾಬ್‌ನಲ್ಲಿ ಪಕ್ಷ ಕಟ್ಟಲು ಶ್ರಮಿಸಿದ್ದೆ. ಆದರೆ ಕಾಂಗ್ರೆಸ್ ಪಕ್ಷ ಕಡೆಗಣಿಸಿತು. ಕಾಂಗ್ರೆಸ್ ಪಕ್ಷ ಪಂಜಾಬ್ ಜನತೆಯನ್ನು ಜಾತಿ ಆಧಾರದಲ್ಲಿ ಒಡೆಯುತ್ತಿದೆ. ಮತಗಳಿಕೆಗಾಗಿ ಈ ತಂತ್ರ ಅನುಸರಿಸುತ್ತಿದೆ. ಕಾಂಗ್ರೆಸ್ ನನ್ನನ್ನು ಪಕ್ಷದಿಂದ ಉಚ್ಚಾಟಿಸಬಹುದು. ಆದರೆ ನನ್ನನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುನಿಲ್ ಜಕಾರ್ ಹೇಳಿದ್ದಾರೆ.

ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಜೊತೆಗಿದ್ದೇನೆ. ನನ್ನ ಕುಟುಂಬ 3 ತಲೆಮಾರು ಕಾಂಗ್ರೆಸ್ ಜೊತೆಗಿದೆ. ಆದರೆ ಕಾಂಗ್ರೆಸ್ ನಡೆಸಿಕೊಂಡ ರೀತಿ ಕೆಟ್ಟದಾಗಿದೆ. ಕಾಂಗ್ರೆಸ್‌ನಲ್ಲಿ ಜಾತಿವಾದದ ಅಂಶ ಹೆಚ್ಚಿದೆ. ಮೂಲಭೂತ ಸಮಸ್ಯೆಗಳಿವೆ. ಪಕ್ಷದ ಏಳಿಗೆಗಾಗಿ ದುಡಿಯುವ ಸಾಮಾನ್ಯ ಕಾರ್ಯಕರ್ತನಿಗೆ ಬೆಲೆ ಇಲ್ಲ, ಜಾತಿ, ಪರಿವಾರವೇ ಕಾಂಗ್ರೆಸ್‌ಗೆ ಪ್ರಮುಖವಾಗಿದೆ. ಆದರೆ ಬಿಜೆಪಿಯಲ್ಲಿ ಪಕ್ಷದ ಕಾರ್ಯಕರ್ತರು ಯಾವುದೇ ಹುದ್ದೇಗೇರಲು ಸಾಧ್ಯವಿದೆ. ಎಲ್ಲರಿಗೂ ಸಮಾನ ಅವಕಾಶವಿದೆ ಎಂದು ಜಕಾರ್ ಹೇಳಿದ್ದಾರೆ.

ಪಂಜಾಬ್‌ ಕಾಂಗ್ರೆಸ್‌ ನಾಯಕ ಸುನೀಲ್‌ ಜಾಖಡ್‌ ರಾಜೀನಾಮೆ
ಒಂದು ಕಡೆ ಉದಯಪುರದಲ್ಲಿ ಕಾಂಗ್ರೆಸ್‌ ಪಕ್ಷ ಪಂಜಾಬ್‌ ಸೇರಿ ಇತ್ತೀಚಿನ ಚುನಾವಣೆಗಳಲ್ಲಿ ಸತತ ಸೋಲಿನ ಬಗ್ಗೆ ಆತ್ಮಾವಲೋಕನ ನಡೆಸುತ್ತಿದ್ದರೆ, ಇನ್ನೊಂದು ಕಡೆ ಪಂಜಾಬ್‌ ಕಾಂಗ್ರೆಸ್‌ ಹಿಂದಿನ ಅಧ್ಯಕ್ಷ ಸುನೀಲ್‌ ಜಾಖಡ್‌ ಅವರು ರಾಜೀನಾಮೆ ಘೋಷಿಸಿದ್ದಾರೆ. ಇದು ಪಕ್ಷಕ್ಕೆ ಮುಜುಗರ ಸೃಷ್ಟಿಸಿದೆ.

ದಿಲ್ಲಿ ಬಿಜೆಪಿ ನಾಯಕನ ಬಂಧನ, 3 ರಾಜ್ಯ ಪೊಲೀಸರ ಹೈಡ್ರಾಮಾ!

ಫೇಸ್‌ಬುಕ್‌ ಪೇಜ್‌ನಲ್ಲಿ ತಮ್ಮ ರಾಜೀನಾಮೆ ಪ್ರಕಟಿಸಿದ ಜಾಖಡ್‌, ‘ಗುಡ್‌ ಲಕ್‌ ಆ್ಯಂಡ್‌ ಗುಡ್‌ ಬೈ ಕಾಂಗ್ರೆಸ್‌. ಪಕ್ಷ ಬಿಡುತ್ತಿದ್ದೇನೆ. ನನ್ನ ಹೃದಯ ಒಡೆದು ಚೂರು ಮಾಡಿದಿರಿ’ ಎಂದು ಹೇಳಿದ್ದಾರೆ.

ಪಂಜಾಬ್‌ ವಿಧಾನಸಭೆ ಚುನಾವಣೆಗೂ ಮುನ್ನ ಜಾಖಡ್‌ ಅವರನ್ನು ಕೆಳಗಿಳಿಸಿ ನವಜೋತ್‌ ಸಿಧು ಅವರನ್ನು ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದು ಜಾಖಡ್‌ ಅಸಮಾಧಾನಕ್ಕೆ ಕಾರಣವಾಗಿತ್ತು ಹಾಗೂ ಅವರು ಪಕ್ಷದ ವಿದ್ಯಮಾನಗಳ ಬಗ್ಗೆ ಟೀಕಿಸುತ್ತಲೇ ಬಂದಿದ್ದರು. ಅಮರೀಂದರ್‌ ಸಿಂಗ್‌ರನ್ನು ಬದಲಿಸಿ ಹೊಸ ಪಂಜಾಬ್‌ ಮುಖ್ಯಮಂತ್ರಿ ಆಯ್ಕೆ ವೇಳೆ ‘ನನಗೆ 42 ಶಾಸಕರ ಬೆಂಬಲವಿತ್ತು. ಆದರೂ ಸಿಎಂ ಮಾಡಲಿಲ್ಲ’ ಎಂದಿದ್ದರು ಹಾಗೂ ಹೊಸ ಮುಖ್ಯಮಂತ್ರಿಯಾಗಿದ್ದ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ‘ಪಕ್ಷಕ್ಕೆ ಹೊರೆ’ ಎಂದು ಟೀಕಿಸಿದ್ದರು. ಹೀಗಾಗಿ ಏ.11ರಂದು ಅವರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಇದಕ್ಕೆ ಅವರು ಉತ್ತರಿಸಿರಲಿಲ್ಲ.