ಪ್ಯಾರಿಸ್ನಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬೆಳವಣಿಗೆ ಇದೀಗ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ದೆಹಲಿ (ಅ.21) ಆಮ್ ಆದ್ಮಿ ಪಾರ್ಟಿ ಗಂಭೀರ ಆರೋಪ ಮಾಡಿ ರಾಜಕೀಯ ಕೋಲಾಹಲ ಸೃಷ್ಟಿಸಿದೆ. ಪ್ಯಾರಿಸ್ನಿಂದ ಮರಳಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 3 ಗಂಟೆಗಳ ಕಾಲ ಭಗಂವತ್ ಮಾನ್ ಪೊಲೀಸರ ವಶದಲ್ಲಿದ್ದರು. 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಯಾವುದೇ ಮುಖ್ಯಮಂತ್ರಿಯನ್ನು ಪೊಲೀಸ್ ವಶಕ್ಕೆ ಪಡೆಯಲು ಕನಿಷ್ಠ ಕಾನೂನು ಪ್ರಕ್ರಿಯೆಗಳಿವೆ. ಆದರೆ ಇದ್ಯಾವುದರ ಪರಿವೇ ಇಲ್ಲದೆ ಮುಖ್ಯಮಂತ್ರಿಯನ್ನೇ ಬಿಜೆಪಿ ಸರ್ಕಾರ ಪೊಲೀಸ್ ವಶದಲ್ಲಿರಿಸಿದೆ ಎಂದು ಆಮ್ ಆದ್ಮಿ ಪಾರ್ಟಿ ಗಂಭೀರ ಆರೋಪ ಮಾಡಿದೆ.
ಪೊಲೀಸರ ವಶಕ್ಕೆ ಪಡೆದು ಪಂಜಾಬ್ ಅವಮಾನಿಸಿದ ಬಿಜೆಪಿ
ಆಮ್ ಆದ್ಮಿ ಪಾರ್ಟಿ ಮಾಧ್ಯಮ ವಕ್ತಾರ ಬಾಲ್ತೆಜ್ ಪನ್ನು ಗಂಭೀರ ಆರೋಪ ಮಾಡಿದ್ದಾರೆ. ಭಗವಂತ್ ಸಿಂಗ್ ಮಾನ್ ಪ್ಯಾರಿಸ್ನಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದಾರೆ. ತಕ್ಷಣವೆ ದೆಹಲಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಮಾನ್ ವಶಕ್ಕೆ ಪಡೆದಿದ್ದಾರೆ. ಯಾವ ಕಾರಣವೂ ನೀಡಿಲ್ಲ, ಯಾವು ಸೂಚನೆ ಇಲ್ಲ. ನೇರವಾಗಿ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಮಾನ್ ಅವರ ಲಗೇಜ್ ಬ್ಯಾಗ್ ಇನ್ನು ಬಂದಿರಲಿಲ್ಲ. ಇದೇ ಕಾರಣ ಮುಂದಿಟ್ಟು ಮಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ 50 ಸಾವಿರ ರೂಪಾಯಿ ಚಲನ್ ವಿಧಿಸಿದ್ದಾರೆ ಎಂದು ಬಾಲ್ತೇಜ್ ಪನ್ನು ಆರೋಪಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯನ್ನು ಬಿಜೆಪಿ ಸರ್ಕಾರ ಪೊಲೀಸ್ ವಶಕ್ಕೆ ಪಡೆದು ಪಂಜಾಬ್ ಜನತೆಯನ್ನು ಅವಮಾನಿಸಿದೆ. ಭಗವಂಕತ್ ಮಾನ್ ಹಾಗೂ ಪಂಜಾಬ್ ಜನತೆಯ ಗೌರವಕ್ಕೆ ಧಕ್ಕೆ ತರುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. 3 ಗಂಟೆಗಳ ಬಳಿಕ 50 ಸಾವಿರ ರೂಪಾಯಿ ದಂಡ ಪಾವತಿಸಿ ಬಳಿಕ ಹೊರಡುವಾಗ ದೆಹಲಿ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ. ಮೇಲಿನಿಂದ ತೀವ್ರ ಒತ್ತಡವಿದೆ. ಹೀಗಾಗಿ ವಶಕ್ಕೆ ಪಡೆದಿದ್ದೇವೆ ಎಂದರು. ಈ ಮೂಲಕ ಬಿಜೆಪಿ ಸರ್ಕಾರದ ಸರ್ವಾಧಿಕಾರಿ, ಎದುರಾಳಿಗಳನ್ನು ಮುಗಿಸುವ ತಂತ್ರ ಬಯಲಾಗಿದೆ ಎಂದು ಬಾಲ್ತೇಜ್ ಪನ್ನು ಹೇಳಿದ್ದಾರೆ. 50 ಸಾವಿರ ರೂಪಾಯಿ ದಂಡ, 3 ಗಂಟೆ ಪೊಲೀಸ್ ವಶಕ್ಕೆ ಪಡೆದಿದ್ದು ಯಾಕೆ ಅನ್ನೋದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಆದರೆ ಮೇಲಿನ ಒತ್ತಡ ಎಂದಿದ್ದಾರೆ. ಇದು ಬಿಜೆಪಿ ಸರ್ಕಾರದ ಆಡಳಿತ ಎಂದು ಬಾಲ್ತೇಜ್ ಪನ್ನು ಗಂಭೀರ ಆರೋಪ ಮಾಡಿದ್ದಾರೆ.
ಪ್ಯಾರಿಸ್ ಭೇಟಿಗೆ ಹೈಕೋರ್ಟ್ ಅನುಮತಿ
ಭಗಂವತ್ ಸಿಂಗ್ ಮಾನ್ ಪ್ಯಾರಿಸ್ ಭೇಟಿಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿತ್ತು. ಕೇಂದ್ರ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಪಂಜಾಬ್ ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ್ದ ಭಗಂವತ್ ಸಿಂಗ್ ಮಾನ್ಗೆ ಅನುಮತಿ ಸಿಕ್ಕಿತ್ತು ಎಂದು ಬಾಲ್ತೇಜ್ ಪನ್ನು ಹೇಳಿದ್ದಾರೆ. ಹೈಕೋರ್ಟ್ ಅನುಮತಿ ಪಡೆದು ಪ್ಯಾರಿಸ್ಗೆ ತೆರಳಿದ್ದಾರೆ. ಯಾವ ನಿಯಮ ಉಲ್ಲಂಘನೆ ಆಗಿಲ್ಲ. ವಿನಾಕಾರಣ ಬಿಜೆಪಿ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಬಾಲ್ತೇಜ್ ಪನ್ನು ಹೇಳಿದ್ದಾರೆ.
ಯಾವುದೇ ಸಿಎಂರನ್ನು ಈ ರೀತಿ ವಶಕ್ಕೆ ಪಡೆದಿದ್ದಾರಾ?
ರಾಜ್ಯದ ಮುಖ್ಯಮಂತ್ರಿಯನ್ನು ವಶಕ್ಕೆ ಪಡೆಯಲು ಕೋರ್ಟ್ ಅನುಮತಿ ಬೇಕು. ಇಲ್ಲೀವರೆಗೆ ಯಾವುದಾದರು ಮುಖ್ಯಮಂತ್ರಿಯನ್ನು ಈ ರೀತಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದೀರಾ? ಇದು ಅವಮಾನವಲ್ಲದೆ ಮತ್ತೇನು? ಮೋದಿ ಸರ್ಕಾರ ಭಗವಂತ್ ಮಾನ್ ವಿದೇಶ ಪ್ರಯಾಣಕ್ಕೆ ನಿರ್ಬಂಧ ವಿಧಿಸುತ್ತಲೇ ಇದೆ. ಎಲ್ಲಿ ವಿದೇಶಕ್ಕೆ ಹೋಗಿ ಬಂಡವಾಳ ತಂದು ಪಂಜಾಬ್ ಅಭಿವೃದ್ಧಿ ಮಾಡುತ್ತಾರೆ ಅನ್ನೋ ಆತಂಕ ಮೋದಿಗೆ ಇದೆ. ಹೀಗಾಗಿ ಒಂದಲ್ಲ ಒಂದು ಕಾರಣ ನೀಡಿ ಭಗವಂತ್ ಮಾನ್ ಮೇಲೆ ಮುಗಿಬೀಳುತ್ತಿದ್ದಾರೆ ಎಂದು ಬಾಲ್ತೇಜ್ ಪನ್ನು ಆರೋಪಿಸಿದ್ದಾರೆ.


