23 ತಿಂಗಳ ಮಗು ವೇದಾಂಶ್ ಅಪರೂಪದ ಎಸ್‌ಎಂಎ ಟೈಪ್-1 ಕಾಯಿಲೆಯಿಂದ ಬಳಲುತ್ತಿದ್ದು, 9 ಕೋಟಿ ರೂ. ಚಿಕಿತ್ಸಾ ವೆಚ್ಚದ ಅಗತ್ಯವಿತ್ತು. ಲಾಲ್‌ಬಾಗ್‌ಚಾ ರಾಜಾ ಬಳಿ ದೇಣಿಗೆ ಸಂಗ್ರಹಿಸುತ್ತಿದ್ದ ಯುವಕರ ಬ್ಯಾನರ್ ನೋಡಿದ ಅನಂತ್ ಅಂಬಾನಿ ಕಾರು ನಿಲ್ಲಿಸಿ ಸಂಪೂರ್ಣ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ.
ಮುಂಬೈ (ನ.3): 23 ತಿಂಗಳ ಪುಟ್ಟ ಕಂದ ಅಪರೂಪದ ಹಾಗೂ ಪ್ರಾಣಾಪಾಯ ತಂದೊಡ್ಡುವ ಭೀಕರ ಕಾಯಿಲೆಯಿಂದ ಬಳಲುತ್ತಿದ್ದು, ಆತನ 9 ಕೋಟಿ ರೂಪಾಯಿ ಮೌಲ್ಯದ ಚಿಕಿತ್ಸೆಗೆ ಸ್ವತಃ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ (Anant Ambani) ಅಭಯ ನೀಡಿದ್ದಾರೆ. ಗಣೇಶೋತ್ಸವದ ವೇಳೆ ಲಾಲ್‌ಬಾಗ್‌ಚಾ ರಾಜಾ ಮಂಟಪದ ಬಳಿ ಸಹಾಯ ಕೋರಿ ನಿಂತಿದ್ದ ಯುವಕರ ಬ್ಯಾನರ್ ಕಂಡು ಕಾರು ನಿಲ್ಲಿಸಿದ ಅನಂತ್ ಅಂಬಾನಿ, ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುವುದಾಗಿ ವಾಗ್ದಾನ ಮಾಡಿದ್ದರು. ಈಗ ಅವರ ಕುಟುಂಬದೊಂದಿಗೆ ಅನಂತ್ ಅಂಬಾನಿ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಅನಂತ್ ಅಂಬಾನಿ ಮಾತು ಕೇಳಿ ತಾಯ ಕಣ್ಣೀರಿಟ್ಟಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುಂಬೈ ನಿವಾಸಿ 22 ತಿಂಗಳ ಪ್ರಾಯದ ವೇದಾಂಶ್ ಸಿಂಗ್ (Vedansh Singh) ಎಂಬ ಮಗು 'ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಟೈಪ್-1' (SMA Type 1) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈತನ ಚಿಕಿತ್ಸೆಗೆ ಬರೋಬ್ಬರಿ ₹9 ಕೋಟಿ ವೆಚ್ಚದ ಅತ್ಯಂತ ದುಬಾರಿ ಔಷಧ ಹಾಗೂ ಚಿಕಿತ್ಸೆಯ ಅಗತ್ಯವಿತ್ತು. ಇದನ್ನು ಭರಿಸಲಾಗದೆ ಕಂಗಾಲಾಗಿದ್ದ ಮಗುವಿನ ಬಡ ಕುಟುಂಬದ ನೆರವಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 4.6 ಲಕ್ಷ ಫಾಲೋವರ್ಸ್ ಹೊಂದಿರುವ ಮಯೂರೇಶ್ ಗುಜಾರ್ (Mayuresh Gujar, 26) ಎಂಬ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಅವರ ತಂಡ ಧಾವಿಸಿತ್ತು.
ಬೀದಿಬೀದಿಗಳಲ್ಲಿ ನಿಂತು 2.2 ಕೋಟಿ ಸಂಗ್ರಹಿಸಿಒದ್ದ ತಂಡ
ಮಯೂರೇಶ್ ಹಾಗೂ ಅವರ ಯುವಕರ ತಂಡವು ಕಳೆದ ಒಂದು ತಿಂಗಳಿನಿಂದ ದಿನಕ್ಕೆ 6 ರಿಂದ 7 ಗಂಟೆಗಳ ಕಾಲ ರಸ್ತೆಗಿಳಿದು ಪ್ರಚಾರ ಬ್ಯಾನರ್ ಹಿಡಿದು ಸಾರ್ವಜನಿಕರಲ್ಲಿ ದೇಣಿಗೆ ಸಂಗ್ರಹಿಸುತ್ತಿತ್ತು.
ಪರೇಲ್ ಮತ್ತು ಲಾಲ್‌ಬಾಗ್‌ಚಾ ರಾಜಾ ಗಣೇಶ ವಿಸರ್ಜನೆ/ಆಗಮನ ಮಂಟಪಗಳು, ಬಾಬುಲ್ನಾಥ್ ದೇವಸ್ಥಾನ, ದಾದರ್‌ನ ಸಿದ್ಧಿ ವಿನಾಯಕ ದೇವಸ್ಥಾನ, ಶ್ರೀ ಸ್ವಾಮಿ ಸಮರ್ಥ ದೇವಸ್ಥಾನ, ಮಹಾಲಕ್ಷ್ಮಿ ದೇವಸ್ಥಾನ, ಇಸ್ಕಾನ್ ಮಂದಿರ, ಮಾಹಿಮ್‌ನ ಸೆಂಟ್ ಮೈಕೆಲ್ ಚರ್ಚ್ ಹಾಗೂ ಪ್ರಸಿದ್ಧ ದಹಿ ಹಂಡಿ ಕಾರ್ಯಕ್ರಮಗಳಲ್ಲಿ ಬ್ಯಾನರ್ ಹಿಡಿದು ನಿಂತು ಅರಿವು ಮೂಡಿಸಿದ್ದರು. ಈ ಶ್ರಮದಿಂದಾಗಿ ಇಷ್ಟರವರೆಗೆ ಬರೋಬ್ಬರಿ ₹2.22 ಕೋಟಿ ಹಣ ಸಂಗ್ರಹವಾಗಿತ್ತು. ಆದರೆ ₹9 ಕೋಟಿಯ ಬೃಹತ್ ಮೊತ್ತವನ್ನು ತಲುಪುವುದು ಸವಾಲಾಗಿತ್ತು.
ಕಳೆದ ಸೆಪ್ಟೆಂಬರ್ 20 ರಂದು ರಾತ್ರಿ 10 ಗಂಟೆಯಿಂದ ಮಯೂರೇಶ್ ಮತ್ತು ಅವರ ತಂಡ ಲಾಲ್‌ಬಾಗ್‌ಚಾ ರಾಜಾ ಗೇಟ್ ಬಳಿ ದೇಣಿಗೆ ಸಂಗ್ರಹಣೆಯ ಬ್ಯಾನರ್ ಹಿಡಿದು ನಿಂತಿತ್ತು. ಮರುದಿನ (ಸೆಪ್ಟೆಂಬರ್ 21) ಮುಂಜಾನೆ 5:18 ರ ಸುಮಾರಿಗೆ ಉದ್ಯಮಿ ಅನಂತ್ ಅಂಬಾನಿ ಅವರು ದೇವಸ್ಥಾನದಲ್ಲಿ ದರ್ಶನ ಮುಗಿಸಿ ತಮ್ಮ ಐಷಾರಾಮಿ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಆಗ ಗೇಟ್ ಬಳಿ ಮಗು ವೇದಾಂಶ್‌ನ ಬ್ಯಾನರ್ ಹಿಡಿದು ನಿಂತಿದ್ದ ಮಯೂರೇಶ್ ಅವರತ್ತ ಅನಂತ್ ಅಂಬಾನಿ ಅವರ ಕಣ್ಣು ಬಿದ್ದಿದೆ. ತಕ್ಷಣವೇ ತಮ್ಮ ಕಾರನ್ನು ನಿಲ್ಲಿಸಿದ ಅನಂತ್ ಅಂಬಾನಿ, ಮಯೂರೇಶ್ ಅವರನ್ನು ಹತ್ತಿರಕ್ಕೆ ಕರೆದು ವಿಷಯವೇನೆಂದು ವಿಚಾರಿಸಿದ್ದಾರೆ.
ಈ ಘಟನೆಯನ್ನು ನೆನಪಿಸಿಕೊಂಡು ಭಾವುಕರಾದ ಮಯೂರೇಶ್ ಗುಜಾರ್
"ಅಷ್ಟೊಂದು ಬ್ಯುಸಿ ಇರುವ ಅನಂತ್ ಅಂಬಾನಿ ಅವರು ತಮ್ಮ ಕಾರು ನಿಲ್ಲಿಸಿ ನನ್ನನ್ನು ಹತ್ತಿರಕ್ಕೆ ಕರೆದು 4 ರಿಂದ 5 ನಿಮಿಷಗಳ ಕಾಲ ಅತ್ಯಂತ ತಾಳ್ಮೆಯಿಂದ ನನ್ನ ಮಾತು ಆಲಿಸುತ್ತಾರೆ ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಮಗುವಿನ ರೋಗದ ಗಂಭೀರತೆಯನ್ನು ನಾನು ವಿವರಿಸುತ್ತಿದ್ದಂತೆಯೇ, ಅವರು ತಕ್ಷಣವೇ ಮಗುವಿನ ಸಂಪೂರ್ಣ ಚಿಕಿತ್ಸೆಯ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವುದಾಗಿ (Sponsor) ಭರವಸೆ ನೀಡಿದರು. ತಮ್ಮ ಅಧಿಕೃತ ತಂಡವನ್ನು ಸಂಪರ್ಕಿಸಲು ತಿಳಿಸಿದ ಅವರು, ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ನೋಡಿಕೊಳ್ಳುತ್ತೇವೆ ಎಂದರು. ಇದನ್ನು ಮಾತುಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ" ಎಂದು ಸಂತಸ ಹಂಚಿಕೊಂಡಿದ್ದಾರೆ.
ಸದ್ಯ 23 ತಿಂಗಳ ಪ್ರಾಯದ ಮಗು ವೇದಾಂಶ್‌ನನ್ನು ಮುಂಬೈಗೆ ಕರೆತಂದು ಅಂಬಾನಿ ಕುಟುಂಬದ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದಕ್ಕೂ ಮುನ್ನ ಅನಂತ್ ಅಂಬಾನಿ, ಮಗುವಿನ ತಾಯಿ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿ ಸಂತೈಸಿದ್ದು, ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುತ್ತೇನೆ ಎಂದಿದ್ದಾರೆ.
'ಈಗ ನಿಮ್ಮ ಮಗುವಿನ ಸಂಪೂರ್ಣ ಜವಾಬ್ದಾರಿ ನನ್ನದು. ನಾನು ಸಂಪೂರ್ಣ ಸಹಾಯ ಮಾಡುತ್ತೇನೆ. ವೈದ್ಯರು, ಚಿಕಿತ್ಸೆ ಎಲ್ಲವನ್ನೂ ನಾನು ಮಾಡುತ್ತೇನೆ. ಆದರೆ, ಮಗುವಿನ ಜೀವದ ಬಗ್ಗೆ ನೀವು ದೇವರಲ್ಲಿ ಪ್ರಾರ್ಥನೆ ಮಾಡಿ. ದೇವರನ್ನು ನಂಬಿ' ಎಂದು ಹೇಳಿದ್ದಾರೆ.






