ಚಂಡೀಗಢ(ಜ.17): ಪೌರತ್ವ ತಿದ್ದುಪಡಿ ಕಾಯ್ದೆ ತಾರತಮ್ಯ ಮತ್ತು ದೇಶದ ಸಂವಿಧಾನದ ಜಾತ್ಯತೀತ ತತ್ವದ ವಿರುದ್ಧವಾಗಿದ್ದು, ಈ ಕಾಯ್ದೆಯನ್ನು ತಕ್ಷಣ ರದ್ದುಗೊಳಿಸುವಂತೆ ಕೋರಿ ಪಂಜಾಬ್ ವಿಧಾನಸಭೆ ಧ್ವನಿ ಮತದ ನಿರ್ಣಯ ಅಂಗೀಕರಿಸಿದೆ. 

ಪಂಜಾಬ್ ಸಿಎಂ ಕ್ಯಾ. ಅಮರಿಂದರ್ ಸಿಂಗ್ ಈ ಕಾಯ್ದೆಯನ್ನು 1930ರ ದಶಕದಲ್ಲಿ ಜರ್ಮನಿಯ ಹಿಟ್ಲರನ ಜನಾಂಗೀಯ ಮತ್ತು ಧಾರ್ಮಿಕ ಶುದ್ಧೀಕರಣ ವಾದಕ್ಕೆ ಹೋಲಿಸಿದ್ದಾರೆ.

ಮೋದಿ ಸರ್ಕಾರ ಇತಿಹಾಸದಿಂದ ಯಾವುದೇ ಪಾಠಗ ಕಲಿತಿಲ್ಲ ಎಂಬುದು ಸಿಎಎ ಜಾರಿಯಿಂದಲೇ ಸ್ಷಪ್ಟವಾಗುತ್ತದೆ ಎಂದು ಅಮರೀಂದರ್ ಸಿಂಗ್  ನಿರ್ಣಯ ಮೇಲಿನ ಚರ್ಚೆಯ ವೇಳೆ ಬೇಸರ ವ್ಯಕ್ತಪಡಿಸಿದರು.

CAA ವಿರೋಧಿಸಿ ಸುಪ್ರೀಂ ಕದ ತಟ್ಟಿದ ಕೇರಳ: ಕೇಂದ್ರಕ್ಕೆ ಸೆಡ್ಡು ಹೊಡೆದ ಮೊದಲ ರಾಜ್ಯ!

ನಾಗರಿಕರ ರಾಷ್ಟ್ರೀಯ ನೋಂದಣಿ ಎಂಬುದು ಪೌರತ್ವ ತಿದ್ದುಪಡಿ ಕಾಯ್ದೆಯ ಒಂದು ಭಾಗವಾಗಿರುವುದರಿಂದ ಜನರಲ್ಲಿ ಈ ಬಗ್ಗೆ ಸಾಕಷ್ಟು ಆತಂಕವಿದೆ. ಈ ಆತಂಕಗಳನ್ನು ನಿವಾರಿಸುವವರೆಗೆ ಮತ್ತು ಅದಕ್ಕೆ ಸಂಬಂಧಿಸಿದ ತಿದ್ದುಪಡಿ ತರುವವರೆಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ ಕೆಲಸ ಕಾರ್ಯಗಳನ್ನು ತಡೆಹಿಡಿಯಬೇಕು ಎಂದು ನಿರ್ಣಯದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.
 

ಸಿಎಎ ಅನ್ನು ಸಂವಿಧಾನದ 14 ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಎಂದು ಕರೆದಿರುವ ಈ ನಿರ್ಣಯವನ್ನು ಕ್ಯಾಬಿನೆಟ್ ಸಚಿವ ಬ್ರಹ್ಮ ಮೊಹಿಂದ್ರಾ ಸದನದಲ್ಲಿ ಮಂಡಿಸಿದರು. ಸ್ಪೀಕರ್ ರಾಣಾ ಕೆಪಿ ಸಿಂಗ್ ನಿರ್ಣಯವನ್ನು ಧ್ವನಿ ಮತಕ್ಕೆ ಹಾಕಿದರು. 

ಈ ಕಾಯ್ದೆ ಧಾರ್ಮಿಕ ತಾರತಮ್ಯವೆಸಗುವುದರಿಂದ ಕಾಯ್ದೆಯನ್ನು ರದ್ದುಗೊಳಿಸುವಂತೆ ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.