ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಮದ್ಯಪಾನ ಮಾಡಿ ಬಂದಿದ್ದಾರೆ ಎಂದು ವಿಪಕ್ಷಗಳು ಗಂಭೀರ ಆರೋಪ. ಸಿಎಂಗೆ ಮದ್ಯಪಾನ ಪತ್ತೆ ಪರೀಕ್ಷೆ ನಡೆಸಬೇಕೆಂದು ಕಾಂಗ್ರೆಸ್ ಮತ್ತು ಅಕಾಲಿದಳ ಆಗ್ರಹಿಸಿದವು, ಆದರೆ ಸ್ಪೀಕರ್ ಬೇಡಿಕೆ ತಿರಸ್ಕರಿಸಿದ್ದರಿಂದ ವಿಪಕ್ಷಗಳು ಸಭಾತ್ಯಾಗ
ಚಂಡೀಗಢ: ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಸರ್ಕಾರದ ಮುಖ್ಯಮಂತ್ರಿ ಭಗವಂತ್ ಮಾನ್ ಮದ್ಯ ಸೇವಿಸಿ ಸದನಕ್ಕೆ ಬರುತ್ತಾರೆ, ಈ ಹಿನ್ನೆಲೆಯಲ್ಲಿ ಅವರನ್ನು ಮದ್ಯಪಾನ ಪತ್ತೆ ಪರೀಕ್ಷೆ (ಆಲ್ಕೋಹಾಲ್ ಟೆಸ್ಟ್)ಗೆ ಒಳಪಡಿಸಬೇಕು ಎಂದು ವಿಪಕ್ಷಗಳು ಆಗ್ರಹಿಸಿದ ಅಪರೂಪದ ಘಟನೆಗೆ ಪಂಜಾಬ್ ವಿಧಾನಸಭೆ ಶುಕ್ರವಾರ ಸಾಕ್ಷಿಯಾಗಿದೆ.
ಕಾರ್ಮಿಕರ ದಿನದ ಹಿನ್ನೆಲೆಯಲ್ಲಿ 1 ದಿನದ ವಿಶೇಷ ಅಧಿವೇಶನವನ್ನು ಸರ್ಕಾರ ಕರೆದಿತ್ತು. ಈ ವೇಳೆ ಕಾಂಗ್ರೆಸ್ ಶಾಸಕ ಸುಖ್‌ಪಾಲ್ ಸಿಂಗ್ ಖಾರಿಯಾ ಅವರು ಅಧಿವೇಶನದಲ್ಲಿ ಮೊಬೈಲ್ ಬಳಸುತ್ತಿದ್ದುದನ್ನು ಗಮನಿಸಿದ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಖಾರಿಯಾ, ಮುಖ್ಯಮಂತ್ರಿಗಳು ಮದ್ಯಪಾನ ಮಾಡಿ ಅಧಿವೇಶನಕ್ಕೆ ಬರುತ್ತಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರೂ ಬೆಂಬಲಿಸಿ, ಸಿಎಂ ಸೇರಿ ಎಲ್ಲಾ ಶಾಸಕರು ಮದ್ಯಪಾನ ಪತ್ತೆ ಪರೀಕ್ಷೆಗೆ ಒಳಪಡಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆಗೆ ಅಕಾಲಿದಳವೂ ಬೆಂಬಲ ವ್ಯಕ್ತಪಡಿಸಿ ಸಾರ್ವಜನಿಕ ಡೋಪ್ ಟೆಸ್ಟ್‌ಗೆ ಆಗ್ರಹಿಸಿತು.
ಗದ್ದಲ ಹಿನ್ನೆಲೆಯಲ್ಲಿ ಕೆಲಕಾಲ ಕಲಾಪವನ್ನು ಮುಂದೂಡಿದರೂ ಮತ್ತೆ ಪ್ರತಿಪಕ್ಷಗಳಿಂದ ಅದೇ ಬೇಡಿಕೆ ಮಂಡನೆಯಾಯಿತು. ಆದರೆ, ಈ ಬೇಡಿಕೆಯನ್ನು ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ತಿರಸ್ಕರಿಸಿದ್ದು, ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿ ಆಕ್ರೋಶ ಹೊರಹಾಕಿದವು.

