ಪ್ರವಾದಿ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರ ಬಂಧನಕ್ಕೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ದೇಶಾದ್ಯಂತ ನಡೆದ ಹಿಂಸಾಚಾರ, ಭಾನುವಾರ ಸ್ವಲ್ಪ ತಣ್ಣಗಾಗಿದೆ. 

ಲಖನೌ (ಜೂ.13): ಪ್ರವಾದಿ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರ ಬಂಧನಕ್ಕೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ದೇಶಾದ್ಯಂತ ನಡೆದ ಹಿಂಸಾಚಾರ, ಭಾನುವಾರ ಸ್ವಲ್ಪ ತಣ್ಣಗಾಗಿದೆ. ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದೆಡೆ ಭಾನುವಾರ ಪರಿಸ್ಥಿತಿ ಶಾಂತವಾಗಿತ್ತು. ಈ ನಡುವೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಲ್ಲಿ ಈವರೆಗೆ 400ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 

ನೂಪುರ್‌ ಶರ್ಮಾ ಬಂಧನಕ್ಕೆ ಒತ್ತಾಯಿಸಿ ಹಲವು ರಾಜ್ಯಗಳಲ್ಲಿ ಭಾನುವಾರ ಪ್ರತಿಭಟನೆ ನಡೆದಿದೆಯಾದರೂ, ಸಣ್ಣಪುಟ್ಟಕಲ್ಲುತೂರಾಟದ ಘಟನೆ ಹೊರತುಪಡಿಸಿದರೆ ದೊಡ್ಡ ಮಟ್ಟದ ಹಿಂಸಾಚಾರ ನಡೆದಿಲ್ಲ. ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್‌್ತ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹಿಂಸಾಚಾರ ಸಂಬಂಧ ಉತ್ತರಪ್ರದೇಶದಲ್ಲಿ 304, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ 100 ಜನರನ್ನು ಬಂಧಿಸಲಾಗಿದೆ. ರಾಂಚಿಯಲ್ಲಿ ಸಾವಿರಾರು ಜನರ ವಿರುದ್ಧ 25 ಎಫ್‌ಐಆರ್‌ ದಾಖಲಿಸಲಾಗಿದೆ.

ನೂಪುರ್ ಶರ್ಮ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ, ಕರ್ನಾಟಕದಲ್ಲೂ ಹಿಂಸಾಚಾರ

ರಾಂಚಿಯಲ್ಲಿ ಗುಂಡೇಟಿಗೆ ಗಾಯಗೊಂಡಿದ್ದ ಇಬ್ಬರ ಸಾವು: ಪ್ರವಾದಿ ಮೊಹಮ್ಮದರಿಗೆ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರ ಬಂಧನಕ್ಕೆ ಆಗ್ರಹಿಸಿ ಶುಕ್ರವಾರ ನಡೆದ ಪ್ರತಿಭಟನೆಗಳು ಇಬ್ಬರನ್ನು ಬಲಿ ಪಡೆದಿವೆ. ದೇಶದ 10 ರಾಜ್ಯಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆದಿದ್ದವು. ಆದರೆ ಶನಿವಾರ ಬಹುತೇಕ ಕಡೆ ಸ್ಥಿತಿ ಶಾಂತವಾಗಿತ್ತು. ಶನಿವಾರ ಪ.ಬಂಗಾಳದ ಹೌರಾದಲ್ಲಿ ಮಾತ್ರ ಹಿಂಸಾಚಾರ ನಡೆದಿದೆ ಹಾಗೂ ಕಾಶ್ಮೀರದ ಚೀನಾಬ್‌ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. 

ಆದರೆ ಶುಕ್ರವಾರ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಹಿಂಸಾಚಾರದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಇಬ್ಬರು ಶನಿವಾರ ನಸುಕಿನ ಜಾವ, ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಈ ನಡುವೆ, 12 ಪೊಲೀಸರು ಹಾಗೂ 12 ನಾಗರಿಕರು ಸೇರಿ 24 ಮಂದಿ ಈ ಗಲಭೆ ವೇಳೆ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೌರಾದಲ್ಲಿ ಮತ್ತೆ ಕಲ್ಲೆಸೆತ: ಪ್ರವಾದಿ ಅವಹೇಳನ ವಿರೋಧಿಸಿ ನೂಪುರ್‌ ಶರ್ಮಾ ಅವರ ಬಂಧನಕ್ಕೆ ಆಗ್ರಹಿಸಿ ಪಶ್ಚಿಮ ಬಂಗಾಳದಲ್ಲಿ 2ನೇ ದಿನವೂ ಹಿಂಸಾಚಾರ ಮುಂದುವರೆದಿದೆ. ಹೌರಾದಲ್ಲಿ ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ಕಾಶ್ಮೀರದ ಚೀನಾಬ್‌ನಲ್ಲಿ ಕರ್ಫ್ಯೂ: ಕಾಶ್ಮೀರದ ಚೀನಾಬ್‌ನಲ್ಲಿ ಶನಿವಾರ ಪ್ರವಾದಿ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಇಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಶುಕ್ರವಾರ ಕರ್ಫ್ಯೂ ಹೇರಲಾಗಿದ್ದ ದೋಡಾ ಹಾಗೂ ಕಿಶ್ತ್‌ವಾರ್‌ ಶಾಂತವಾಗಿವೆ.

Protest against Nupur ಹಿಂಸೆಗೆ ತಿರುಗಿದ ಪ್ರತಿಭಟನೆ, NSA ಅಡಿ ಪ್ರಕರಣ ದಾಖಲಿಸಲು ಮುಂದಾದ ಯುಪಿ ಪೊಲೀಸ್!

ನೂಪುರ್‌ ಶಿರಚ್ಛೇದಕ್ಕೆ ಕರೆ-ಇಬ್ಬರ ವಿರುದ್ಧ ಕೇಸು: ಪ್ರವಾದಿ ಮೊಹಮ್ಮದ್‌ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರ ಶಿರಚ್ಛೇದ ಮಾಡಬೇಕೆಂದು ಕೆಲ ಮುಸ್ಲಿಂ ನಾಯಕರು ಕರೆ ನೀಡತೊಡಗಿದ್ದಾರೆ. ಶಿರಚ್ಛೇದ ಮಾಡಿದಂತೆ ವಿಡಿಯೋ ಸೃಷ್ಟಿಸಿದ್ದ ಯೂಟ್ಯೂಬರ್‌ ಫೈಸಲ್‌ ವಾನಿ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಅಂತೆಯೇ, ಶಿರಚ್ಛೇದ ಮಾಡುವಂತೆ ಕರೆ ನೀಡಿದ್ದ ಮೌಲಿ ಆದಿಲ್‌ ಗನಿ ಎಂಬ ಮೌಲ್ವಿ ವಿರುದ್ಧ ಕೇಸು ದಾಖಲಿಸಿದ್ದಾರೆ.