ಈ ವರ್ಷದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಮೊದಲ ಬಾರಿಗೆ ಪ್ರಾಣಿಗಳು ಭಾಗವಹಿಸುತ್ತಿವೆ. ದೇಶರಕ್ಷಣೆಯಲ್ಲಿ ಅವುಗಳ ಕೊಡುಗೆಯನ್ನು ಗೌರವಿಸಲು, ಕರ್ನಾಟಕದ ಮುಧೋಳ ನಾಯಿ, ಲಡಾಖ್‌ನ ಅವಳಿ ಡುಬ್ಬದ ಒಂಟೆಗಳು ಮತ್ತು ಜನ್ಸ್ಕರ್ ಕುದುರೆಗಳು ಕರ್ತವ್ಯಪಥದಲ್ಲಿ ಯೋಧರೊಂದಿಗೆ ಹೆಜ್ಜೆ ಹಾಕಲಿವೆ.
- ಕರ್ನಾಟಕದ ಮುಧೋಳ ನಾಯಿ
- ಅವಳಿ ಡುಬ್ಬದ ಒಂಟೆ
- ಜನ್ಸ್ಕರ್ ಕುದುರೆಗಳು, ಹದ್ದು
- ಗಿಡುಗ ಪ್ರಮುಖ ಆಕರ್ಷಣೆದೇಶರಕ್ಷಣೆಯಲ್ಲಿ ಪ್ರಾಣಿಗಳ ಕೊಡುಗೆ ಪರಿಗಣಿಸಿ ಮೊದಲ ಸಲ ಕರ್ತವ್ಯಪಥದಲ್ಲಿ ಪ್ರಾಣಿಗಳ ಪಥಸಂಚಲನಕ್ಕೆ ಅವಕಾಶ
ನವದೆಹಲಿ: ಈ ವರ್ಷ ಗಣರಾಜ್ಯೋತ್ಸವದ ದಿನ ಕರ್ತವ್ಯಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಯೋಧರೊಂದಿಗೆ ಮೊದಲ ಬಾರಿ ಪ್ರಾಣಿಗಳೂ ಹೆಜ್ಜೆ ಹಾಕಲಿವೆ. ಈ ಮೂಲಕ, ದೇಶರಕ್ಷಣೆಯಲ್ಲಿ ನಿರತವಾಗಿರುವ ಅವುಗಳ ತ್ಯಾಗಕ್ಕೂ ಪ್ರಾತಿನಿಧ್ಯ ನೀಡಲು ನಿರ್ಧರಿಸಲಾಗಿದೆ. ಇದರಲ್ಲಿ ಈಗಾಗಲೇ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕದ ಮುಧೋಳ ತಳಿಯ ನಾಯಿಗಳು ಭಾಗವಹಿಸುವ ಸಾಧ್ಯತೆಯಿದೆ.
ಈ ವಿಷಿಷ್ಟ ಪಥಸಂಚಲನದ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಪಥಸಂಚಲನಕ್ಕೆ ತಾಲೀಮು ಆರಂಭವಾಗಿದ್ದು, ಕರ್ತವ್ಯ ಪಥದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿವೆ.
ಯಾವ ಪ್ರಾಣಿಗಳು?: ಅವಳಿ ಡುಬ್ಬದ ಒಂಟೆಗಳು, ಜನ್ಸ್ಕರ್ ಕುದುರೆಗಳು, ಹದ್ದು/ಗಿಡುಗ, ನಾಯಿಗಳು.
ಪ್ರಾಣಿಗಳ ಪಥಸಂಚಲನ ಹೇಗಿರುತ್ತೆ?
ಸೇನೆಯ ರಿಮೌಂಟ್ ಮತ್ತು ಪಶುವೈದ್ಯಕೀಯ ದಳದಿಂದ ಆರಿಸಲ್ಪಟ್ಟ ಈ ವಿಶಿಷ್ಟ ತುಕಡಿಯನ್ನು ಅವಳಿ ಡುಬ್ಬದ 2 ಬ್ಯಾಕ್ಟೀರಿಯನ್ ಒಂಟೆಗಳು ಮುನ್ನಡೆಸಲಿವೆ. ಈ ಒಂಟೆಗಳನ್ನು ಲಡಾಖ್‌ನ ಶೀತ ಮರುಭೂಮಿಯಲ್ಲಿನ ಕಾರ್ಯಾಚರಣೆಗೆಂದು ಇತ್ತೀಚೆಗಷ್ಟೇ ಸೇನೆಗೆ ಸೇರಿಸಿಕೊಳ್ಳಲಾಗಿತ್ತು. 250 ಕೇಜಿ ಭಾರ ಹೊತ್ತು ದುರ್ಗಮ ಸ್ಥಳಗಳಲ್ಲಿ ಇವು ಸಾಗಬಲ್ಲವು. ಉಳಿದಂತೆ ಈ ತುಕಡಿಯಲ್ಲಿ ಲಡಾಖ್‌ನಂಥ ಶೀತ ಪ್ರದೇಶದಲ್ಲಿರುವ 4 ಜನ್ಸ್ಕರ್ ತಳಿಯ ಕುದುರೆಗಳು, 4 ಹದ್ದು/ಗಿಡುಗ, 10 ಭಾರತೀಯ ತಳಿಯ ಸೇನಾ ನಾಯಿ, 6 ಸಾಂಪ್ರದಾಯಿಕ ಮಿಲಿಟರಿ ನಾಯಿಗಳು ಇರಲಿವೆ.
ಮುಧೋಳ ನಾಯಿ ಕೂಡ ಪರೇಡ್‌ಗೆ?
ಕರ್ನಾಟಕದ ಮುಧೋಳ ನಾಯಿ ಸೇರಿ ಹಲವು ವಿಶಿಷ್ಟ ತಳಿಯ ನಾಯಿಗಳು ಪಥಸಂಚಲನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಚುರುಕುತನಕ್ಕೆ ಮುಧೋಳ ನಾಯಿ ಹೆಸರುವಾಸಿಯಾಗಿದೆ. ಇದಲ್ಲದೆ ರಾಂಪುರ್ ಹೌಂಡ್, ಚಿಪ್ಪಿಪರೈ, ಕೊಂಬೈ ಮತ್ತು ರಾಜಪಾಳಯಂನಂತಹ ಸ್ಥಳೀಯ ನಾಯಿ ತಳಿಗಳು ಕೂಡ ಸೇನೆಯಲ್ಲಿದ್ದು ಅವೂ ಕೂಡ ಮುಧೋಳ ನಾಯಿ ಜತೆ ಕರ್ತವ್ಯ ಪಥಕ್ಕೆ ಇಳಿಯುವ ಸಾಧ್ಯತೆ ಇದೆ. ಮುಧೋಳ ಸೇರಿ ಹಲವು ತಳಿಯ ನಾಯಿಗಳಿಗೆ ಆರ್‌ವಿಸಿ ಕೇಂದ್ರ ಮತ್ತು ಮೇರಠ್‌ನ ಕಾಲೇಜಲ್ಲಿ ತರಬೇತಿ ನೀಡಿ, ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಇವು ಭಯೋತ್ಪಾದಕ ನಿಗ್ರಹ ಚಟುವಟಿಕೆಗಳಲ್ಲಿ ಯೋಧರಿಗೆ ಸಹಾಯ ಮಾಡುತ್ತವೆ.
ಹೊಸ ಕ್ರಮವೇಕೆ?
ಪಥಸಂಚಲನದಲ್ಲಿ ಈ ತುಕಡಿಯ ಸೇರ್ಪಡೆಯು, ಭಾರತೀಯ ಸೇನೆಯ ಸಂಪ್ರದಾಯ, ನಾವೀನ್ಯತೆ ಮತ್ತು ಕಾರ್ಯಾಚರಣಾ ಸ್ವಾವಲಂಬನೆಯನ್ನು ಪ್ರತಿನಿಧಿಸುತ್ತದೆ. ಈ ಬಗ್ಗೆ ಮಾತನಾಡಿರುವ ಅಧಿಕಾರಿಯೊಬ್ಬರು, ‘ಈ ಪ್ರಾಣಿಗಳು, ಸಿಯಾಚಿನ್‌ನ ಹಿಮಭರಿತ ಶಿಖರಗಳು, ಲಡಾಖ್‌ನ ಶೀತ ಮರುಭೂಮಿಗಳಿಂದ ಹಿಡಿದು, ವಿಪತ್ತು ಪೀಡಿತ ಪ್ರದೇಶಗಳವರೆಗೆ ಕರ್ತವ್ಯ, ಧೈರ್ಯ ಮತ್ತು ತ್ಯಾಗದ ಹೊರೆಯನ್ನು ಹೇಗೆ ಸದ್ದಿಲ್ಲದೆ ಹಂಚಿಕೊಳ್ಳುತ್ತವೆ ಎಂಬುದನ್ನು ಇದು ಪ್ರದರ್ಶಿಸುತ್ತದೆ’ ಎಂದು ಹೇಳಿದ್ದಾರೆ.
