Prophet Comments Row : ಕಲ್ಲು ತೂರಿದವರ ಮೇಲೆ ಮುಗಿಬಿದ್ದ ಬುಲ್ಡೋಜರ್, ರಾಂಚಿಯಲ್ಲಿ ಇಬ್ಬರ ಸಾವು!
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಶನಿವಾರ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದರಿಂದ ಹೊಸದಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಬೇಕಾಯಿತು.
ನವದೆಹಲಿ (ಜೂನ್ 11): ಪ್ರವಾದಿ (Prophet) ಮೊಹಮದ್ ಪೈಗಂಬರ್ ಕುರಿತಾಗಿ ಮಾತನಾಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ (Nupur Sharma) ಅವರನ್ನು ಬಂಧನ ಮಾಡುವಂತೆ ಆಗ್ರಹಿಸಿ ಶುಕ್ರವಾ ದೇಶವ್ಯಾಪಿ ಪ್ರತಿಭಟನೆ ನಡೆದಿತ್ತು. ಉತ್ತರ ಪ್ರದೇಶ (Uttar Pradesh) ರಾಜ್ಯವೊಂದರಲ್ಲೇ ಈ ಪ್ರಕಣರಣದಲ್ಲಿ 237 ಮಂದಿಯನ್ನು ಬಂಧಿಸಲಾಗಿದೆ. ಪ್ರಯಾಗ್ ರಾಜ್ ನಲ್ಲಿ 68, ಹತ್ರಾಸ್ ನಲ್ಲಿ 48, ಅಂಬೇಡ್ಕರ್ ನಗರದಲ್ಲಿ 28, ಮೊರಾದಾಬಾದ್ ನಲ್ಲಿ 25 ಹಾಗೂ ಫಿರೋಜಾಬಾದ್ ನಲ್ಲಿ8 ಜನರನ್ನು ಬಂಧಿಸಲಾಗಿದೆ. ಇನ್ನು ಪ್ರತಿಭಟನೆಯ ವೇಳೆ ರಾಂಚಿಯಲ್ಲಿಇಬ್ಬರ ಸಾವಾಗಿದ್ದು, ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ ಎಂದು ರಾಂಚಿಯ (Ranchi) ರಾಜೇಂದ್ರ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಖಚಿತಪಡಿಸಿದೆ.
ವಿವಾದದ ಕುರಿತಾಗಿ ಈವರೆಗೂ ಆಗಿರುವ ಟಾಪ್ 10 ಬೆಳವಣಿಗೆಗಳು ಇಲ್ಲಿವೆ
1. ಪ್ರತಿ ಶುಕ್ರವಾರದ ನಂತರ ಶನಿವಾರ ಬರುತ್ತದೆ ನೆನಪಿರಲಿ ಎಂದ ಯುಪಿ ಅಧಿಕಾರಿ: ಉತ್ತರ ಪ್ರದೇಶದಲ್ಲಿ ಗಲಭೆಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗದ್ದು ಗಲಭೆಯಲ್ಲಿದ್ದ ಯಾರೊಬ್ಬರನ್ನೂ ಬಿಡಬೇಡಿ ಎಂದು ಸ್ವತಃ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದರ ನಡುವೆ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ಮೃತ್ಯುಂಜಯ್ ಕುಮಾರ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, "ಪ್ರತಿ ಶುಕ್ರವಾರದ ಬಳಿಕ ಶನಿವಾರ ಬರುತ್ತದೆ ಎನ್ನುವುದನ್ನು ಗಲಭೆಕೋರರು ತಿಳಿದುಕೊಂಡಿರಬೇಕು' ಎಂದು ಬರೆದು, ಬುಲ್ಡೋಜರ್ ಮೂಲಕ ಗಲಭೆಕೋರರ ಮನೆಯನ್ನು ಧ್ವಂಸ ಮಾಡುತ್ತಿರುವ ಚಿತ್ರವನ್ನು ಪ್ರಕಟಿಸಿದ್ದಾರೆ.
2. ರಾಂಚಿಯಲ್ಲಿ ಇಬ್ಬರ ಸಾವು: ಶುಕ್ರವಾರ ರಾಂಚಿಯಲ್ಲಿ (Ranchi) ನಡೆದ ಹಿಂಸಾಚಾರದಲ್ಲಿ ಇಬ್ಬರು ಪ್ರಾಣ ಪಡೆದುಕೊಂಡಿದ್ದಾರೆ. ಒಟ್ಟು 20 ಮಂದಿ ಗಾಯಗೊಂಡಿದ್ದು, ಇದರಲ್ಲಿ 10 ಮಂದಿ ಪೊಲೀಸ್ ಆಗಿದ್ದಾರೆ. ಗಾಯಗೊಂಡವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.
3. ಉತ್ತರ ಪ್ರದೇಶದ ಶಹ್ರಾನ್ ಪುರದಲ್ಲಿ ಬುಲ್ಡೋಜರ್ ಅಬ್ಬರ: ಅಕ್ರಮವಾಗಿ ಮನೆ ಕಟ್ಟಿದ್ದಲ್ಲದೆ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತಂದಿದ್ದ ಇಬ್ಬರು ಕಲ್ಲುತೂರಾಟಗಾರರ ಮನೆಯನ್ನು ಉತ್ತರ ಪ್ರದೇಶದ ಶಹ್ರಾನ್ ಪುರದಲ್ಲಿ ಬುಲ್ಡೋಜರ್ (bulldozer) ಬಳಸಿ ಧ್ವಂಸ ಮಾಡಲಾಗಿದೆ. ಈ ಆರೋಪಿಗಳನ್ನು ಮುಜಮ್ಮಿಲ್ ಹಾಗೂ ಅಬ್ದುಲ್ ವಾಕಿರ್ ಎಂದು ಗುರುತಿಸಲಾಗಿದೆ. ದಾಖಲೆ ಪತ್ರಗಳೊಂದಿಗೆ ಶನಿವಾರ ಮನೆಯ ಮುಂದೆ ಬಂದು ನಿಂತ ಜಿಲ್ಲಾಡಳಿತ, ಕಟ್ಟಡವನ್ನು ಧ್ವಂಸ ಮಾಡಿದೆ. ಕಾನ್ಪುರದಲ್ಲಿಯೂ ಬುಲ್ಡೋಜರ್ ತನ್ನ ಅಬ್ಬರ ತೋರಿದೆ.
4. ಹೌರಾ (Howrah) ಜಿಲ್ಲೆಯಲ್ಲಿ ಶನಿವಾರ ಉದ್ವಿಗ್ನ ವಾತಾವರಣ: ಪಶ್ಚಿಮ ಬಂಗಾಳದ (West Bengal) ಹೌರಾ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದರಿಂದ ಉದ್ವಿಗ್ನ ವಾತಾವರಣ ಕಂಡುಬಂದಿದೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಬೇಕಾಯಿತು. ಜಿಲ್ಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಕಾನೂನು ಅಧಿಕಾರಿಗಳ ನಡುವಿನ ಘರ್ಷಣೆಗಳ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚುವುದು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಘಟನೆಗಳು ನಡೆದಿವೆ. ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳು ಸರ್ಕಾರ ವರ್ಗಾವಣೆ ಮಾಡಿದೆ.
5. ಮುರ್ಷಿದಾಬಾದ್ ಜಿಲ್ಲೆಯಲ್ಲಿ ಇಂಟರ್ನೆಟ್ ಕಟ್: ಹೌರಾದಲ್ಲಿ ಹಿಂಸಾಚಾರದ ನಂತರ, ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯಲು ಪಶ್ಚಿಮ ಬಂಗಾಳ ಸರ್ಕಾರವು ಶನಿವಾರ ಮುರ್ಷಿದಾಬಾದ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಜೂನ್ 14 ರವರೆಗೆ ಸ್ಥಗಿತಗೊಳಿಸಿದೆ, ಅಲ್ಲಿ ಈಗಾಗಲೇ ಅಂತಹ ನಿರ್ಬಂಧವು ಜಾರಿಯಲ್ಲಿದೆ.
6. ಪಶ್ವಿಮ ಬಂಗಾಳ ಕಾಶ್ಮೀರವಾದಂತಾಗಿದೆ: ಹೌರಾ ಹಾಗೂ ಮುರ್ಷಿದಾಬಾದ್ ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣದ ಹಿನ್ನಲೆಯಲ್ಲಿ ಮಾತನಾಡಿರುವ ರಾಜ್ಯ ಬಿಜೆಪಿ ಮುಖ್ಯಸ್ಥ ಸಕಂತಾ ಮಜುಂದಾರ್, ಪಶ್ಚಿಮ ಬಂಗಾಳ ದಿನ ಕಳೆದಂತೆ ಕಾಶ್ಮೀರವಾಗಿ ಬದಲಾಗುತ್ತಿದೆ. "ಮೊದಲು, ಅವರು ನನ್ನನ್ನು ನನ್ನ ಮನೆಯಲ್ಲಿ ತಡೆದು ಗೃಹಬಂಧನದಲ್ಲಿ ಇರಿಸಿದರು. ಬಳಿಕ, ನಾನು ನಿವಾಸದಿಂದ ಹೊರಗೆ ಬರಲು ಅವಕಾಶ ನೀಡಿದರು. ಬಳಿಕ ವಿದ್ಯಾಸಾಗರ ಸೇತುವೆಯಲ್ಲಿ ನನ್ನನ್ನು ಮತ್ತೊಮ್ಮೆ ಬಂಧಿಸಿದರು. 144 ಸೆಕ್ಷನ್ ಇರುವ ಕಾರಣಕ್ಕಾಗಿ ಬಂಧಿಸಿರುವುದಾಗಿ ಹೇಳುತ್ತಿದ್ದಾರೆ' ಎಂದು ಸುಕಂತಾ ಹೇಳಿದ್ದಾರೆ.
7. ಕರ್ನಾಟಕದಲ್ಲಿ ಸೂಕ್ತ ಭದ್ರತೆ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದ್ದಾರೆ. ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ರಾಜ್ಯದ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರವಾದಿಗೆ ಅವಮಾನ, ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರ, ಪ್ರತಿಭಟನೆ!
8. ಶಾಂತಿಯುತ ಪ್ರತಿಭಟನೆ ಮಾತ್ರ, ಹಿಂಸಾಚಾರವಾಗಿಲ್ಲ: ಶುಕ್ರವಾರ ದೇಶವ್ಯಾಪಿ ನಡೆದಿರುವುದು ಶಾಂತಿಯುತ ಪ್ರತಿಭಟನೆ ಮಾತ್ರ, ಹಿಂಸಾಚಾರವಾಗಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಎಲ್ಲೂ ಹಿಂಸಾಚಾರವಾಗಿಲ್ಲ ಎನ್ನುವುದನ್ನು ಸರ್ಕಾರವೇ ಖಚಿತಪಡಿಸಲಿ. ಹಾಗೇನಾದರೂ ಆಗಿದ್ದಲ್ಲಿ, ಮುಂದೆ ಅದಾಗದಂತೆ ಎಚ್ಚರ ವಹಿಸಲಿ ಎಂದು ಹೇಳಿದ್ದಾರೆ.
9. ಜಾರ್ಖಂಡ್ ಸರ್ಕಾರದಿಂದ ಉನ್ನತ ಮಟ್ಟದ ತನಿಖೆ: ರಾಂಚಿಯಲ್ಲಿ ಶುಕ್ರವಾರ ನಡೆದ ಹಿಂಸಾಚಾರದ ಕುರಿತು ಉನ್ನತ ಮಟ್ಟದ ತನಿಖೆಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಆದೇಶ ನೀಡಿದ್ದಾರೆ. ಇದಕ್ಕಾಗಿ ದ್ವಿಸದಸ್ಯ ಸಮಿತಿ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾದಿ ನಿಂದನೆ ವಿರುದ್ಧ ಕರ್ನಾಟಕದಲ್ಲೂ ತೀವ್ರ ಆಕ್ರೋಶ: ಬಿಗು ವಾತಾವರಣ
10. ಮಹಾರಾಷ್ಟ್ರದಲ್ಲಿಯೂ ಬಂಧನ: ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಅನುಮತಿಯಿಲ್ಲದೆ ಗುಂಪುಗೂಡಿದ ಹಾಗೂ ಪ್ರತಿಭಟನೆ ನಡೆಸಿದ ಆರೋಪದಲ್ಲಿ 100ಕ್ಕೂ ಅಧಿಕ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.