ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ ₹70,000 ಕೋಟಿ ವೆಚ್ಚದ ಪ್ರೊಜೆಕ್ಟ್ 75(1) ಸಬ್‌ಮರೀನ್ ಒಪ್ಪಂದಕ್ಕೆ ಶೀಘ್ರದಲ್ಲೇ ಚಾಲನೆ ಸಿಗುವ ನಿರೀಕ್ಷೆಯಿದೆ. ಈ ಯೋಜನೆಯಡಿ, ಜರ್ಮನಿಯ ಥಿಸೆನ್‌ಕ್ರುಪ್ ಮರೈನ್ ಸಿಸ್ಟಮ್ ಮತ್ತು ಭಾರತದ ಮಝಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಸಹಭಾಗಿತ್ವದಲ್ಲಿ ಭಾರತೀಯ ನೌಕಾಪಡೆಗೆ 6 ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತದೆ.

ನವದೆಹಲಿ: ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಜರ್ಮನಿ ಜತೆಗಿನ 70 ಸಾವಿರ ಕೋಟಿ ರು. ವೆಚ್ಚದ ಪ್ರೊಜೆಕ್ಟ್ 75(1) ಸಬ್‌ಮರೀನ್ ಒಪ್ಪಂದ ಸದ್ಯದಲ್ಲೇ ಭದ್ರತೆಗೆ ಸಂಬಂಧಿಸಿದ ಸಚಿವ ಸಂಪುಟ ಸಭೆ ಮುಂದೆ ಚರ್ಚೆಗೆ ಬರುವ ನಿರೀಕ್ಷೆ ಇದೆ.

ಕ್ಯಾಬಿನೆಟ್‌ನ ಒಪ್ಪಿಗೆ ಸಿಕ್ಕರೆ ಮುಂದಿನ 6ರಿಂದ 8 ವಾರಗಳಲ್ಲಿ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂದು ಜರ್ಮನಿಯ ಭಾರತದ ರಾಯಭಾರಿ ಫಿಲಿಫ್ ಎಕರ್‌ಮನ್ ಹೇಳಿದ್ದಾರೆ. ಯೋಜನೆಯಡಿ ಭಾರತೀಯ ನೌಕಾಪಡೆಗೆ ಅತ್ಯಾಧುನಿಕ 6 ಸಾಂಪ್ರದಾಯಿಕ ಜಲಾಂತರ್ಗಾಮಿಗಳನ್ನು ಜರ್ಮನಿಯ ಕಂಪನಿ ನಿರ್ಮಿಸಿ ಕೊಡಲಿದೆ. ಇವು ಬಹುತೇಕ ಭಾರತದಲ್ಲೇ ನಿರ್ಮಾಣವಾಗಲಿವೆ. ಜರ್ಮನಿಯ ಥಿಸೆನ್‌ಕ್ರುಪ್ ಮರೈನ್ ಸಿಸ್ಟಮ್ ಮತ್ತು ಭಾರತದ ಸರ್ಕಾರಿ ಹಡಗು ನಿರ್ಮಾಣ ಕಂಪನಿ ಮಝಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿ. ಸಹಭಾಗಿತ್ವದಲ್ಲಿ ಈ ಸಬ್‌ಮರೀನ್ ನಿರ್ಮಾಣವಾಗಲಿವೆ.

ಹಲವು ವರ್ಷಗಳಿಂದ ಈ ಒಪ್ಪಂದ ಕುರಿತು ಚರ್ಚೆ ನಡೆಯುತ್ತಿದ್ದರೂ ವಾಣಿಜ್ಯ ಷರತ್ತುಗಳು ಹಾಗೂ ತಾಂತ್ರಿಕ ಕಾರಣಗಳಿಗಾಗಿ ನನೆಗುದಿಗೆ ಬಿದ್ದಿತ್ತು.