ಸರ್ಕಾರಿ ಶಾಲೆಯ ಪೈಟಿಂಗ್ ಹಗರಣವೊಂದು ಬಯಲಾಗಿದೆ. ಕೇವಲ 4 ಲೀಟರ್ ಪೈಂಟ್ ಬಳಿಯಲು ಬರೋಬ್ಬರಿ 443 ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಪೈಟಿಂಗ್ ಬಿಲ್ ಬರೋಬ್ಬರಿ 3.38 ಲಕ್ಷ ರೂಪಾಯಿ
ಭೋಪಾಲ್ (ಜು.06) ಸರ್ಕಾರದಿಂದ ಹಣ ಬಿಡುಗಡೆಯಾಗಿ ಮಾಡುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ರಹಿತ ಯಾವುದಿದೆ ಅನ್ನೋದು ಹುಡುಕುವ ಪರಿಸ್ಥಿತಿ ಎದುರಾಗಿದೆ. ಪ್ರತಿ ಯೋಜನೆಯಲ್ಲಿ ಒಂದಲ್ಲಾ ಒಂದು ರೀತಿಯ ಭ್ರಷ್ಟಾಚಾರ ಆರೋಪಗಳು ಕೇಳಿಬರುತ್ತಿದೆ. ಇದೀಗ ಸರ್ಕಾರಿ ಶಾಲೆಗೆ ಪೈಟಿಂಗ್‌ನಲ್ಲೂ ಭ್ರಷ್ಟಾಚಾರ ಬಯಲಾಗಿದೆ. ಶಾಲೆಗೆ ಪೈಟಿಂಗ್ ಮಾಡಿದ್ದು 4 ಲೀಟರ್ ಪೈಂಟ್. ಆದರೆ ಇದನ್ನು ಬರೋಬ್ಬರಿ 443 ಕಾರ್ಮಿಕರು ಬಳಿದಿದ್ದಾರೆ. ಇದಕ್ಕೆ 3.38 ಲಕ್ಷ ರೂಪಾಯಿ ಬಿಲ್ ಮಾಡಲಾಗಿದೆ. ಈ ಬಿಲ್ ಹೊರಬರುತ್ತಿದ್ದಂತೆ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಪ್ರಕರಣದ ತನಿಖೆಗೆ ಸರ್ಕಾರ ಆದೇಶಿಸಿದೆ. ಇದು ಮಧ್ಯಪ್ರದೇಶದಲ್ಲಿ ನಡೆದ ಹಗರಣ.
ನುರಿತ ಪೈಂಟರ್ ಸೇರಿ 443 ಕಾರ್ಮಿಕರು
ಮಧ್ಯಪ್ರದೇಶದ ಶೆಹಡೂಲ್‌ನಲ್ಲಿನ ಸರ್ಕಾರಿ ಶಾಲೆಯಲ್ಲಿ ಈ ಹಗರಣ ನಡೆದಿದೆ. ಸರ್ಕಾರಿ ಶಾಲೆ ಮುಖ್ಯೋಪಾದ್ಯಾಯ ಈ ಪೈಟಿಂಗ್ ಕುರಿತು ಮಾತನಾಡಲು ನಿರಾಕರಿಸಿದ್ದಾರೆ. ಎರಡು ಸರ್ಕಾರಿ ಶಾಲೆಯಲ್ಲಿ ಒಟ್ಟು 3.38 ಲಕ್ಷ ರೂಪಾಯಿ ಹಗರಣ ನಡೆದಿದೆ. ಒಂದು ಶಾಲೆಯಲ್ಲಿ ಕೇವಲ 4 ಲೀಟರ್ ಪೈಂಟ್ ಬಳಸಿ ಕಾಮಗಾರಿ ಪೂರ್ಣಗೊಳಿಸಿದ್ದರೆ, ಮತ್ತೊಂದು ಶಾಲೆಯಲ್ಲಿ 20 ಲೀಟರ್ ಪೈಂಟ್ ಬಳಸಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಆದರೆ ಕಾರ್ಮಿಕರ ಸಂಖ್ಯೆ ಎಲ್ಲೂ 200ಕ್ಕಿಂತ ಕಡಿಮೆ ಇಲ್ಲ. ಒಟ್ಟು 3.38 ಲಕ್ಷ ರೂಪಾಯಿ ಬಿಲ್ ಕೂಡ ಮಾಡಿದ್ದಾರೆ.
ಕಾಂಟ್ರಾಕ್ಟರ್ ಬಿಲ್ ನೋಡಿ ಅಚ್ಚರಿ
ಸಕಂಡಿ ಸರ್ಕಾರಿ ಶಾಲೆಯಲ್ಲಿ 168 ಕಾರ್ಮಿಕರು, 65 ನುರಿತು ಪೈಂಟರ್ ಸೇರಿ ಕೇವಲ 4 ಲೀಟರ್ ಪೈಟಿಂಗ್ ಬಳಸಿ ಶಾಲೆಯ ಗೋಡೆಗೆ ಬಣ್ಣ ಬಳಿದಿದ್ದಾರೆ. ಈ ಶಾಲೆಯ ಬಿಲ್ 1,06,984 ರೂಪಾಯಿ. ಇನ್ನು ನಿಪಾನಿಯಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ 20 ಲೀಟರ್ ಆಯಿಲ್ ಪೈಂಟ್ ಬಳಸಿ ಗೋಡೆಗೆ ಬಣ್ಣ ಬಳಿಯಲಾಗಿದೆ. ಇಲ್ಲಿ 275 ಕಾರ್ಮಿಕರು, 150 ನುರಿತ ಪೈಂಟರ್ ಬಣ್ಣ ಬಳಿದಿದ್ದಾರೆ. ಈ ಶಾಲೆಯ ಬಿಲ್ 2,31,685 ರೂಪಾಯಿ. ಎರಡೂ ಶಾಲೆಯಲ್ಲಿ ಪೈಟಿಂಗ್ ಮಾಡಿದ ಗುತ್ತಿಗೆದಾರ ಒಬ್ಬರೇ. ಖಾಸಗಿ ಗುತ್ತಿಗೆದಾರ ಸುಧಾಕರ್ ನಿರ್ಮಾಣ ಸಂಸ್ಥೆ ಈ ಎರಡು ಶಾಲೆಗೆ ಪೈಂಟ್ ಬಳಿದಿದೆ. ಬಳಿಕ ಲಕ್ಷ ಲಕ್ಷ ರೂಪಾಯಿ ಬಿಲ್ ಹಾಕಿದೆ.
ಕಾಂಟ್ರಾಕ್ಟರ್ ಬಿಲ್‌ಗೆ ಪ್ರಿನ್ಸಿಪಲ್ ಸಹಿ
ಪೈಟಿಂಗ್, ಕಾರ್ಮಿಕರು, ಬಿಲ್ ನೋಡಿದರೆ ಎಂತವರಿಗೂ ಇದರಲ್ಲಿ ಭಾರಿ ಹಗರಣ ನಡೆದಿದೆ ಅನ್ನೋದರಲ್ಲಿ ಅನುಮಾನ ಬರದು. ಆದರೆ ಇಲ್ಲಿ ಕಾಂಟ್ರಾಕ್ಟರ್ ನೀಡಿದ ಬಿಲ್‌ಗೆ ಎರಡೂ ಶಾಲೆಯ ಮುಖ್ಯೋಪಾದ್ಯಯರು ಸಹಿ ಹಾಕಿದ್ದಾರೆ.
ಸಂಪೂರ್ಣ ಬಿಲ್ ಪಾವತಿ
ಮುಖ್ಯೋಪಾಧ್ಯಯರು ಸಹಿ ಹಾಕಿದ ಬಿಲ್‌ನ್ನು ಜಿಲ್ಲಾ ಖಜಾಂಚಿ ಸಹಿ ಹಾಕಿ ಅನುಮೋದನೆ ನೀಡಿದ್ದಾರೆ. ಇಷ್ಟು ಮೊತ್ತ, ಪೈಂಟ್, ಕಾರ್ಮಿಕರು ಯಾವುದನ್ನು ನೋಡದೆ, ಯಾವುದನ್ನು ಪರಿಶೀಲಿಸದೆ ಅನುಮೋದನೆ ನೀಡಿದ್ದಾರೆ. ಹೀಗಾಗಿ ಸಂಪೂರ್ಣ ಮೊತ್ತ ಕಾಂಟ್ರಾಕ್ಟರ್ ಖಾತೆಗೆ ಪಾವತಿಯಾಗಿದೆ. ಇದರಲ್ಲಿ ಯಾರಿಗೆ ಎಷ್ಟು ತಲುಪಿದೆ ಅನ್ನೋದು ಇದೀಗ ತನಿಖೆಯಿಂದ ಬಹಿರಂಗವಾಗಬೇಕಿದೆ.
ಈ ಕಡತ ನೋಡಿದ ಜಿಲ್ಲಾಧಿಕಾರಿ ಕೇದರ್ ಸಿಂಗ್‌ಗೆ ಅಚ್ಚರಿಯಾಗಿದೆ. ಕಣ್ಣಿಗೆ ರಾಚುವಂತೆ ಭ್ರಷ್ಟಾಚಾರ ನಡೆದರೂ ಯಾವುದೇ ಅಡೆ ತಡೆ ಇಲ್ಲದೆ ಸಹಿ ಹಾಕಿ ಅನುಮೋದನೆ ನೀಡಿದ್ದು ಹೇಗೆ? ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಈ ಹಗರಣದ ತನಿಖೆಗೆ ಆದೇಶ ನೀಡಿದ್ದಾರೆ.
