ಬೆಂಗಳೂರು(ಫೆ.28): ವಂಚಕ ಹಣಕಾಸು ವ್ಯವಹಾರಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ತನ್ನ ಸಮರ ಮುಂದುವರಿಸಿದೆ. ಹೆಚ್ಚಿನ ಬಡ್ಡಿ ದರ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಕೋಟ್ಯಂತರ ರು. ವಂಚನೆ ಮಾಡಿದ ಆರೋಪದ ಮೇಲೆ ಕಣ್ವ ಗ್ರೂಪ್‌ಗೆ ಸೇರಿದ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿನ 84.40 ಕೋಟಿ ರು. ಮೌಲ್ಯದ ಸ್ಥಿರಾಸ್ತಿಯನ್ನು ಇ.ಡಿ. ಜಪ್ತಿ ಮಾಡಿದೆ.

ಈವರೆಗೆ ಕಣ್ವ ಗ್ರೂಪ್‌ನ 255.17 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದೀಗ 84.4 ಕೋಟಿ ರು. ಜಪ್ತಿಯೊಂದಿಗೆ, ಒಟ್ಟು 339.57 ಕೋಟಿ ರು. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಂಡಂತಾಗಿದೆ.

ಎಲ್ಲೆಲ್ಲಿ ಜಪ್ತಿ?:

ಕಣ್ವ ಗ್ರೂಪ್‌ನ ನಿರ್ದೇಶಕ ಎನ್‌.ನಂಜುಂಡಯ್ಯ, ಮತ್ತವರ ಕುಟುಂಬ ಸದಸ್ಯರು, ಸಂಸ್ಥಾಪಕ ನಿರ್ದೇಶಕ ಎಸ್‌.ಹರೀಶ್‌ ಹಾಗೂ ಶ್ರೀ ಕಣ್ವ ಸೌಹಾರ್ದ ಕೋ-ಆಪರೇಟಿವ್‌ ಕ್ರೆಡಿಟ್‌ ಲಿ.ಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಕರ್ನಾಟಕದಲ್ಲಿ ನೆಲಮಂಗಲ, ಕೊರಟಗೆರೆ, ಚಿಕ್ಕಬಳ್ಳಾಪುರ, ಶ್ರೀರಂಗಪಟ್ಟಣ ಮತ್ತು ಬೆಂಗಳೂರಿನಲ್ಲಿನ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆಂಧ್ರಪ್ರದೇಶದಲ್ಲಿನ ಮಡಕಶಿರಾದಲ್ಲಿನ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ವಂಚನೆ ಏನು?:

ಕಣ್ವ ಗ್ರೂಪ್‌ನ ವಂಚನೆ ಬಗ್ಗೆ ಸಹಕಾರ ಸಂಘದ ರಿಜಿಸ್ಟ್ರಾರ್‌ ಅವರು ನೀಡಿದ ದೂರಿನ ಮೇರೆಗೆ ಇ.ಡಿ. ತನಿಖೆ ಕೈಗೊಂಡಿತ್ತು. ಈ ವೇಳೆ, ಜನರಿಗೆ ಹೆಚ್ಚಿನ ಬಡ್ಡಿಯ ಅಮಿಷವೊಡ್ಡಿ 650 ಕೋಟಿ ರು.ನಷ್ಟುಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಲಾಗಿದೆ. ಕಮಿಷನ್‌ ಏಜೆಂಟ್‌ಗಳಿಂದ ಸೂಕ್ತ ದಾಖಲೆಗಳಿಲ್ಲದೆ ಹಣ ಸಂಗ್ರಹಿಸಲಾಗಿದೆ. ನಿಯಮಗಳನ್ನು ಸಹ ಪಾಲನೆ ಮಾಡಿಲ್ಲ. ಸರಿಯಾದ ಖಾತೆಯನ್ನು ಸಹ ನಿರ್ವಹಣೆ ಮಾಡಿಲ್ಲ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಸಾರ್ವಜನಿಕರನ್ನು ಮೋಸಗೊಳಿಸುವ ಉದ್ದೇಶದಿಂದ ಅನಧಿಕೃತ ಸಂಗ್ರಹ ಕೇಂದ್ರ ತೆರೆಯಲಾಗಿದೆ ಮತ್ತು ಏಜೆಂಟ್‌ರ ಮೂಲಕ ಸುಮಾರು 13 ಸಾವಿರಕ್ಕೂ ಹೆಚ್ಚಿನ ಮಂದಿಯಿಂದ ಶ್ರೀಕಣ್ವ ಸೌಹಾರ್ದ ಕೋ-ಆಪರೇಟಿವ್‌ ಕ್ರೆಡಿಟ್‌ ಲಿ. ಕೋಟ್ಯಂತರ ರು. ಸಂಗ್ರಹಿಸಿದೆ. ಸಾರ್ವಜನಿಕರಿಗೆ ಶೇ.12ರಿಂದ ಶೇ.15ರಷ್ಟುಬಡ್ಡಿ ನೀಡುವುದಾಗಿ ನಂಬಿಸಿ ಹಣ ಪಡೆಯಲಾಗಿದೆ. ಆದರೆ, ಭರವಸೆ ನೀಡಿದ ಬಡ್ಡಿದರದಲ್ಲಿ ಹಣ ಪಾವತಿಸಿಲ್ಲ. ಅಲ್ಲದೇ, ಜನರಿಂದ ಸಂಗ್ರಹಿಸಿದ ಹಣವನ್ನು ಆರೋಪಿ ನಂಜುಂಡಯ್ಯ ತಮ್ಮ ಮತ್ತು ಕುಟುಂಬ ಸದಸ್ಯರ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗಸ್ಟ್‌ನಲ್ಲೇ ಮುಖ್ಯ ಆರೋಪಿ ನಂಜುಂಡಯ್ಯನನ್ನು ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.