ಸ್ಮಾರ್ಟ್‌ಫೋನ್‌ಗಳಲ್ಲಿ 'ಸಂಚಾರ್ ಸಾಥಿ' ಆ್ಯಪ್ ಕಡ್ಡಾಯ ಅಳವಡಿಕೆಗೆ ಕೇಂದ್ರ ಸರ್ಕಾರ ಆದೇಶಿಸಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಇದು ಸೈಬರ್ ಸುರಕ್ಷತೆಗಾಗಿ ಎಂದು ಸರ್ಕಾರ ಹೇಳಿದರೆ, ಪ್ರತಿಪಕ್ಷಗಳು ಇದನ್ನು ಬೇಹುಗಾರಿಕೆ ತಂತ್ರ ಮತ್ತು ಖಾಸಗಿತನದ ಉಲ್ಲಂಘನೆ ಎಂದು ಆರೋಪಿಸಿವೆ.
ಪಿಟಿಐ ನವದೆಹಲಿ (ಡಿ.3): ಸೈಬರ್ ಸುರಕ್ಷತೆ ದೃಷ್ಟಿಯಿಂದ ಸ್ಮಾರ್ಟ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಆ್ಯಪ್ ಅನ್ನು ಕಡ್ಡಾಯವಾಗಿ ಮೊಬೈಲ್ ಉತ್ಪಾದಕರು ಇನ್ನು 3 ತಿಂಗಳಲ್ಲಿ ಅಳವಡಿಸಬೇಕು ಎಂಬ ಕೇಂದ್ರ ಸರ್ಕಾರದ ಆದೇಶ ವಿವಾದಕ್ಕೀಡಾಗಿದೆ. ಇದಕ್ಕೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ‘ಇದು ಜನರ ಮೇಲೆ ಬೇಹುಗಾರಿಕೆ ನಡೆಸುವ ತಂತ್ರ ಹಾಗೂ ಖಾಸಗಿತನಕ್ಕೆ ಧಕ್ಕೆ’ ಎಂದು ಕಿಡಿಕಾರಿವೆ.
ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ‘ಸಂಚಾರ ಸಾಥಿ ಆ್ಯಪ್ ಅನ್ನು ಡಿಲೀಟ್ ಮಾಡಬಹುದು. ಅಲ್ಲದೆ, ಅದು ಫೋನ್‌ನಲ್ಲಿದ್ದರೂ ರಿಜಿಸ್ಟರ್ ಆದರೆ ಮಾತ್ರ ಬಳಕೆಗೆ ಲಭ್ಯ. ಇಲ್ಲದಿದ್ದರೆ ಇಲ್ಲ. ಇದರ ಹಿಂದೆ ಯಾವುದೇ ಬೇಹುಗಾರಿಕೆ ತಂತ್ರವಿಲ್ಲ. ಕೇವಲ ಸೈಬರ್ ಸುರಕ್ಷತೆ ಉದ್ದೇಶದಿಂದ ಅಳವಡಿಕೆಗೆ ಸೂಚಿಸಲಾಗಿದೆ’ ಎಂದಿದ್ದಾರೆ. ಈ ಮೂಲಕ ಇದನ್ನು ಡಿಲೀಟ್ ಮಾಡದಂತೆ ಅಳವಡಿಸಬೇಕು ಎಂದು ಕೇಂದ್ರ ಸೂಚನೆ ನೀಡಿದೆ ಎಂಬ ವರದಿಗಳನ್ನು ಅವರು ನಿರಾಕರಿಸಿದ್ದಾರೆ.
ಆದಾಗ್ಯೂ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಕಾಂಗ್ರೆಸ್ ನೋಟಿಸ್ ನೀಡಿದೆ.
ಪ್ರತಿಪಕ್ಷಗಳ ಕಿಡಿ:
ಆ್ಯಪ್ ಅಳವಡಿಕೆಗೆ ಆದೇಶ ಮಾಡಿರುವುದನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ನಾಯಕಿ ಪ್ರಿಯಾಂಕಾ ವಾದ್ರಾ, ‘ಸಂಚಾರ್ ಸಾಥಿ ಒಂದು ಗೂಢಚಾರಿ ಅಪ್ಲಿಕೇಶನ್ ಆಗಿದ್ದು, ಇದು ಸ್ಪಷ್ಟವಾಗಿ ಹಾಸ್ಯಾಸ್ಪದವಾಗಿದೆ. ನಾಗರಿಕರಿಗೆ ಗೌಪ್ಯತೆಯ ಹಕ್ಕಿದೆ. ಇದು ಸ್ನೂಪಿಂಗ್ ಅಪ್ಲಿಕೇಶನ್ ಆಗಿದ್ದು, ತಕ್ಷಣವೇ ಇದನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ. ಆಪ್ ನಾಯಕ ಅರವಿಂದ ಕೇಜ್ರಿವಾಲ್ ಸೇರಿ ಅನೇಕರು ಇದೇ ಆಗ್ರಹ ಮಾಡಿದ್ದಾರೆ.
ಸಿಂಧಿಯಾ ಸ್ಪಷ್ಟನೆ:
ಈ ಬಗ್ಗೆ ಸ್ಪಷ್ಟನೆ ನಿಡಿದ ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾಮ ‘ಸಂಚಾರ್ ಸಾಥಿಯು ವಂಚನೆ ಕುರಿತು ದೂರು ನೀಡುವ, ನಿಮ್ಮ ಮೊಬೈಲ್ ಅನ್ನು ಕಳ್ಳತನದಿಂದ ರಕ್ಷಿಸುವ ಆ್ಯಪ್ ಆಗಿದೆ. ಬಳಕೆದಾರರು ಅಗತ್ಯವಿದ್ದರಷ್ಟೇ ಬಳಸಬಹುದು. ಬೇಡದಿದ್ದಲ್ಲಿ ಡಿಲೀಟ್ ಮಾಡಲು ಸ್ವತಂತ್ರರು’ ಎಂದರು.
‘ಎಲ್ಲ ಮೊಬೈಲ್ ಫೋನ್ ಕಂಪನಿಗಳು 90 ದಿನದೊಳಗೆ ಈ ಆ್ಯಪ್ ಅನ್ನು ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡುವ ದೂರಸಂಪರ್ಕ ಇಲಾಖೆಯ ಆದೇಶವನ್ನು ಪಾಲಿಸಬೇಕು. ಈ ಆ್ಯಪ್‌ನ ಇನ್‌ಸ್ಟಾಲ್ ಅಷ್ಟೇ ಕಡ್ಡಾಯ. ಒಂದು ವೇಳೆ ಗ್ರಾಹಕರಿಗೆ ಈ ಆ್ಯಪ್ ಬೇಡ ಅಂತ ಅನಿಸಿದರೆ ಅವರು ಡಿಲೀಟ್ ಮಾಡಬಹುದು’ ಎಂದರು.
ಇದಲ್ಲದೆ, ‘ಆ್ಯಪ್ ಇದ್ದ ಮಾತ್ರಕ್ಕೆ ಅದು ಆ್ಯಕ್ಟಿವ್ ಆಗಿದೆ ಎಂದರ್ಥವಲ್ಲ. ಅದು ಸಕ್ರಿಯವಾಗಲು ರಿಜಿಸ್ಟರ್ ಮಾಡಬೇಕು. ರಿಜಿಸ್ಟರ್ ಮಾಡದಿದ್ದರೆ ಅದು ಸಕ್ರಿಯಗೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಸಂಚಾರ್ ಸಾಥಿ ಆ್ಯಪ್ ಕಡ್ಡಾಯ ಎಂಬ ಆದೇಶದ ಬಗ್ಗೆ ಸರ್ಕಾರದೊಂದಿಗೆ ಆ್ಯಪಲ್ ಮತ್ತು ಸ್ಯಾಮ್ಸಂಗ್ ಚರ್ಚಿಸಲಿವೆ ಮತ್ತು ತಮಗೆ ಹಾಗೂ ಸರ್ಕಾರಕ್ಕೆ ಸಮ್ಮತವಾದ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸಲಿವೆ ಎಂದು ಮೂಲಗಳು ತಿಳಿಸಿವೆ.
ಆ್ಯಪಲ್ ಕಂಪನಿ ತನ್ನದೇ ಆದ ಆ್ಯಪ್‌ಗಳನ್ನಷ್ಟೇ ಮಾರಾಟಕ್ಕೆ ಮೊದಲು ಐಫೋನ್‌ನಲ್ಲಿ ಇನ್‌ಸ್ಟಾಲ್ ಮಾಡುತ್ತದೆ. ಸರ್ಕಾರಿ ಅಥವಾ ಮೂರನೇ ವ್ಯಕ್ತಿಯ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲ್ಲ ಎಂಬುದು ಆ ಕಂಪನಿಯ ನೀತಿ.
ಕೇಂದ್ರದ ಸೂಚನೆ ಏನು?
ಹೊಸದಾಗಿ ಬಿಡುಗಡೆಯಾಗುವ ಎಲ್ಲ ಸ್ಮಾರ್ಟ್ ಫೋನ್‌ಗಳಿಗೂ ‘ಸಂಚಾರ್ ಸಾಥಿ’ ಆ್ಯಪ್ ಅನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್ ಅಪ್ಡೇಟ್ ಮೂಲಕ ಈ ಆ್ಯಪ್ ಅನ್ನು ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಬೇಕಿದೆ.
ಆ್ಯಪ್ ಲಾಭವೇನು?
ಸಂಚಾರ್ ಸಾಥಿ ಆ್ಯಪ್ ಸೈಬರ್ ಭದ್ರತೆಗೆ ಅವಶ್ಯಕ. ಇದರಿಂದ ಅನುಮಾನಾಸ್ಪದ ಕರೆ ವರದಿಗೆ, ಐಎಂಇಐ ನಂಬರ್ ಪರಿಶೀಲನೆಗೆ, ಕದ್ದ ಮೊಬೈಲ್ ಫೋನ್ ಪತ್ತೆಗೆ ಹಾಗೂ ಬಳಕೆ ನಿರ್ಬಂಧಿಸಲು ಅನುಕೂಲ.

