ಪಶ್ಚಿಮ ಬಂಗಾಳ ಪ್ರವಾಸದ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭದ್ರತೆ ಮತ್ತು ಶಿಷ್ಟಾಚಾರದಲ್ಲಿ ಗಂಭೀರ ಲೋಪಗಳು ಕಂಡುಬಂದಿವೆ. ಈ 'ಬ್ಲೂ ಬುಕ್' ಉಲ್ಲಂಘನೆಗಳ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿ ವರದಿ ಕೇಳಿದೆ.
ಕೋಲ್ಕತ್ತಾ/ನವದೆಹಲಿ (ಮಾ.9): ಪಶ್ಚಿಮ ಬಂಗಾಳ ಪ್ರವಾಸದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭದ್ರತೆ ಹಾಗೂ ಶಿಷ್ಟಾಚಾರದಲ್ಲಿ ಸಂಭವಿಸಿರುವ ನಿಯಮ ಉಲ್ಲಂಘನೆಗಳ ಕುರಿತು ಕೇಂದ್ರ ಸರ್ಕಾರವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಭಾನುವಾರ ಸಂಜೆ 5 ಗಂಟೆಯೊಳಗೆ ಸಮಗ್ರ ವರದಿ ನೀಡುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸೂಚಿಸಿದ್ದರು ಎಂದು ವರದಿಯಾಗಿದೆ.
ಏನಿದು 'ಬ್ಲೂ ಬುಕ್' ನಿಯಮ ಉಲ್ಲಂಘನೆ?
ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಭದ್ರತೆ ಹಾಗೂ ಶಿಷ್ಟಾಚಾರಕ್ಕೆ ಸಂಬಂಧಿಸಿದ ನಿಯಮಗಳನ್ನು 'ಬ್ಲೂ ಬುಕ್' ಎಂದು ಕರೆಯಲಾಗುತ್ತದೆ. ಈ ನಿಯಮಗಳ ಪ್ರಕಾರ ಕೆಲವು ಗಂಭೀರ ಲೋಪಗಳು ಸಂಭವಿಸಿವೆ ಎಂದು ಕೇಂದ್ರ ಆರೋಪಿಸಿದೆ:
ಗೈರುಹಾಜರಿ: ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮುಖ್ಯ ಕಾರ್ಯದರ್ಶಿ ಅಥವಾ ಡಿಜಿಪಿ ಯಾರೂ ಬಾರದಿರುವುದು ಶಿಷ್ಟಾಚಾರದ ಉಲ್ಲಂಘನೆ ಎನ್ನಲಾಗಿದೆ. ಕೇವಲ ಸಿಲಿಗುರಿ ಮೇಯರ್ ಗೌತಮ್ ದೇಬ್ ಮಾತ್ರ ಹಾಜರಿದ್ದರು.
ಮೂಲಭೂತ ಸೌಕರ್ಯದ ಕೊರತೆ: ರಾಷ್ಟ್ರಪತಿಗಳಿಗಾಗಿ ವ್ಯವಸ್ಥೆ ಮಾಡಿದ್ದ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಅಶುಚಿಯಾದ ರಸ್ತೆ: ರಾಷ್ಟ್ರಪತಿಗಳು ಸಂಚರಿಸುವ ಮಾರ್ಗದಲ್ಲಿ ಕಸದ ರಾಶಿ ಬಿದ್ದಿತ್ತು ಎಂದು ಕೇಂದ್ರ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.
ಸ್ಥಳ ಬದಲಾವಣೆ: ಬುಡಕಟ್ಟು ಸಮುದಾಯದ ಕಾರ್ಯಕ್ರಮದ ಸ್ಥಳವನ್ನು ಬಿಧಾನ್‌ನಗರದಿಂದ ಗೋಷಾಯಿಪುರಕ್ಕೆ ಬದಲಾಯಿಸಿದ್ದರಿಂದ ಜನಸಂಖ್ಯೆ ತೀರಾ ವಿರಳವಾಗಿತ್ತು.
ಮೌನ ಮುರಿದ ರಾಷ್ಟ್ರಪತಿ: ಮಮತಾ ಬಗ್ಗೆ ಮಾರ್ಮಿಕ ನುಡಿ
ಕಾರ್ಯಕ್ರಮದಲ್ಲಿ ಜನರ ಸಂಖ್ಯೆ ಕಡಿಮೆ ಇರುವುದನ್ನು ಕಂಡು ರಾಷ್ಟ್ರಪತಿಗಳು ಅಸಮಾಧಾನ ವ್ಯಕ್ತಪಡಿಸಿದರು. "ಮಮತಾ ಬ್ಯಾನರ್ಜಿ ಅವರು ನನ್ನ ತಂಗಿಯಿದ್ದಂತೆ. ನಾನು ಕೂಡ ಬಂಗಾಳದ ಮಗಳೇ. ಅವರು ನನ್ನ ಮೇಲೆ ಅಸಮಾಧಾನಗೊಂಡಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಆದರೆ ಅದು ಮುಖ್ಯವಲ್ಲ, ನೀವೆಲ್ಲರೂ ಚೆನ್ನಾಗಿರಿ," ಎಂದು ರಾಷ್ಟ್ರಪತಿಗಳು ಮಾರ್ಮಿಕವಾಗಿ ಹೇಳಿದರು. ಅಲ್ಲದೆ, "ಬಹುಶಃ ರಾಜ್ಯ ಸರ್ಕಾರಕ್ಕೆ ಬುಡಕಟ್ಟು ಜನರ ಕಲ್ಯಾಣ ಇಷ್ಟವಿಲ್ಲದ ಕಾರಣ ಈ ರೀತಿ ಮಾಡಿರಬಹುದು," ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಮತ್ತು ಉಪರಾಷ್ಟ್ರಪತಿ ಆಕ್ರೋಶ
ಈ ಘಟನೆಯನ್ನು "ಅಪಮಾನಕಾರಿ ಮತ್ತು ಹಿಂದೆಂದೂ ಕಾಣದ ಘಟನೆ" ಎಂದು ಪ್ರಧಾನಿ ಮೋದಿ ಕರೆದಿದ್ದಾರೆ. ತೃಣಮೂಲ ಕಾಂಗ್ರೆಸ್ ಸರ್ಕಾರವು ರಾಷ್ಟ್ರಪತಿಗಳಿಗೆ ಅವಮಾನ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಉನ್ನತ ಸಾಂವಿಧಾನಿಕ ಹುದ್ದೆಗೆ ನೀಡಬೇಕಾದ ಗೌರವವನ್ನು ಯಾವಾಗಲೂ ಕಾಪಾಡಿಕೊಳ್ಳಬೇಕು, ಇಂತಹ ಲೋಪಗಳು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚನೆ
ಈ ಲೋಪಗಳಿಗೆ ನೇರ ಹೊಣೆಗಾರರಾದ ದಾರ್ಜಿಲಿಂಗ್ ಜಿಲ್ಲಾಧಿಕಾರಿ, ಸಿಲಿಗುರಿ ಪೊಲೀಸ್ ಕಮಿಷನರ್ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆಯೂ ವಿವರ ನೀಡುವಂತೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಸೂಚಿಸಿದೆ.


