Asianet Suvarna News Asianet Suvarna News

2 ಕಿಲೋಮೀಟರ್‌ ಪಾದಯಾತ್ರೆ ಮಾಡಿ ಪುರಿ ಜಗನ್ನಾಥನ ದರ್ಶನ ಮಾಡಿದ ರಾಷ್ಟ್ರಪತಿ!

ಅಚ್ಚರಿಯ ನಡೆಯಲ್ಲಿ ಎಲ್ಲಾ ಪ್ರೊಟೋಕಾಲ್‌ಗಳನ್ನು ಧಿಕ್ಕರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಒಡಿಶಾದ ಪುರಿ ಜಗನ್ನಾಥ ದೇವಸ್ಥಾನಕ್ಕೆ 2 ಕಿಲೋಮೀಟರ್‌ ಪಾದಯಾತ್ರೆ ಮಾಡುವ ಮೂಲಕ ದರ್ಶನ ಮಾಡಿದ್ದಾರೆ.

President Droupadi Murmu  walks 2 km in Odisha Puri Jagannath temple san
Author
First Published Nov 10, 2022, 5:42 PM IST | Last Updated Nov 10, 2022, 5:44 PM IST

ಭುವನೇಶ್ವರ (ನ.10): ಬಹಳ ಅಚ್ಚರಿಯ ನಡೆಯಲ್ಲಿ ಎರಡು ದಿನಗಳ ಒಡಿಶಾ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂದಾಜು 2 ಕಿಲೋಮೀಟರ್‌ ಪಾದಯಾತ್ರೆ ಮಾಡುವ ಮೂಲಕ ಪುರಿ ಜಗನ್ನಾಥನ ದರ್ಶನ ಮಾಡಿದ್ದಾರೆ. ಗುರುವಾಆರ ತವರು ರಾಜ್ಯ ಒಡಿಶಾದ ಪುರಿಗೆ ಆಗಮಿಸಿದ ದ್ರೌಪದಿ ಮುರ್ಮು ದೇವಸ್ಥಾನದಿಂದ ಅಂದಾಜು 2 ಕಿಲೋಮೀಟರ್‌ ದೂರವಿದ್ದಾಗ ತಮ್ಮ ಭದ್ರತಾ ದಳವನ್ನು ನಿಲ್ಲಿಸಿದರು. ದೇವಸ್ಥಾನದ ಬಾಗಿಲಿನವರೆಗೆ ಕಾರಿನಲ್ಲಿ ಹೋಗುವ ಅವಕಾಶವಿದ್ದರೂ, ಪಾದಯಾತ್ರೆ ಮಾಡಿಕೊಂಡು ಹೋಗುವ ನಿರ್ಧಾರ ಮಾಡಿದರು. ದೇವಸ್ಥಾನದ ಸನಿಹ ಬಂದಾಗ ತಮ್ಮ ಸಿಬ್ಬಂದಿಗೆ ಕಾರ್‌ಅನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಬಳಿಕ ಕಾರ್‌ನಿಂದ ಇಳಿದು ಸಾಮಾನ್ಯ ಭಕ್ತರಂತೆ ದೇವರ ದರ್ಶನಕ್ಕೆ ತೆರಳಿದರು. ಅವರ ಈ ನಿರ್ಧಾರ ಸ್ವತಃ ರಾಷ್ಟ್ರಪತಿ ಭವನ ಸಿಬ್ಬಂದಿಗೆ ಹಾಗೂ ಅಕ್ಕಪಕ್ಕದಲ್ಲಿ ನಿಂತಿದ್ದ ಜನರಿಗೆ ಅಚ್ಚರಿ ತಂದವು. ದ್ರೌಪದಿ ಮುರ್ಮು ನಡೆದುಕೊಂಡು ಹೋಗುತ್ತಿದ್ದರೆ, ಇತರ ಭಕ್ತಾದಿಗಳು ಜೈ ಜಗನ್ನಾಥ್‌ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.


ರಾಷ್ಟ್ರಪತಿ ದ್ರೌಪದಿ ಮುರ್ಮು ತನ್ನ ಅಧಿಕಾರಿಗಳನ್ನು ಅಚ್ಚರಿಗೊಳಿಸಿದ್ದು ಇದೇ ಮೊದಲಲ್ಲ. ಜಾರ್ಖಂಡ್‌ಗೆ ತನ್ನ ಪ್ರವಾಸದ ಸಮಯದಲ್ಲಿ, ಅಧ್ಯಕ್ಷರು ಸಂತಾಲಿಯಲ್ಲಿ ಕೆಲವು ಮಹಿಳೆಯರೊಂದಿಗೆ ಯಾವ ಭದ್ರತಾ ಪೂರ್ವಸಿದ್ಧತೆಯಲ್ಲದೆ ಮಾತುಕತೆಗೆ ಮುಂದಾಗಿದ್ದರು. ಇದಕ್ಕೂ ಮುನ್ನ ರಾಜ್ಯಪಾಲ ಗಣೇಶಿ ಲಾಲ್ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಗೌರವ ವಂದನೆ ಕೂಡ ಸಲ್ಲಿಸಲಾಯಿತು.

ಜುಲೈನಲ್ಲಿ ದೇಶದ 2ನೇ ಮಹಿಳಾ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರು ತವರು ರಾಜ್ಯ ಒಡಿಶಾಗೆ ಇದು ಮೊದಲ ಭೇಟಿಯಾಗಿದೆ. ದ್ರೌಪದಿ ಮುರ್ಮು ಭೇಟಿಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರಾಜಧಾನಿ ವಲಯದ ಎಲ್ಲಾ ಕಚೇರಿಗಳು, ಶಾಲಾ-ಕಾಲೇಜುಗಳಿಗೆ ಅರ್ಧದಿನದ ರಜೆಯನ್ನು ಘೋಷಿಸಿತ್ತು.

Tamil Nadu Politics: ರಾಜ್ಯಪಾಲರನ್ನು ವಜಾ ಮಾಡಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದ ಡಿಎಂಕೆ

2 ಕಿಲೋಮೀಟರ್‌ ನಡೆದರು: ರಾಷ್ಟ್ರಪತಿಗಳು ಪುರಿಗೆ ಆಗಮಿಸಿ ಜಗನ್ನಾಥನ ದರ್ಶನ ಪಡೆದು ಆಶೀರ್ವಾದ ಪಡೆದರು. ಬಿರುಬಿಸಿಲಿನಲ್ಲಿ 2 ಕಿಲೋಮೀಟರ್‌ ಪಾದಯಾತ್ರೆಯನ್ನು ರಾಷ್ಟ್ರಪತಿ ಮಾಡಿದರು. ಈ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಜೊತೆಗಿದ್ದರು. ಧರ್ಮೇಂದ್ರ ಪ್ರದಾನ್‌ ಕೂಡ ರಾಷ್ಟ್ರಪತಿಯವರೊಂದಿಗೆ ನಡೆಯುತ್ತಿದ್ದರು. ರಾಷ್ಟ್ರಪತಿಗಳ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಜನರು ಜೈ ಜಗನ್ನಾಥ್-ಜೈ ಜಗನ್ನಾಥ್ ಎಂಬ ಘೋಷಣೆಗಳನ್ನು ಕೂಗುತ್ತಿರುವುದನ್ನು ಸೆರೆಹಿಡಿಯಲಾಗಿದೆ.

ಸಿಕ್ಕಿಂ ಸಂಸ್ಕೃತಿಯ ನೃತ್ಯ ಮಾಡಿದ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

ಮಯೂರ್‌ಭಂಜ್‌ನ ನಿವಾಸಿ ದ್ರೌಪದಿ ಮುರ್ಮು: ಪುರಿ ಜಗನ್ನಾಥ ದೇವರ ದರ್ಶನಕ್ಕಾಗಿ ನಿಂತಿದ್ದ ಭಕ್ತಾದಿಗಳ ಜೊತೆಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಿದರು. ದ್ರೌಪದಿ ಮುರ್ಮು ಒಡಿಶಾ ಮೂಲದವರಾಗಿದ್ದು, ಇಲ್ಲಿನ ಮಯೂರ್‌ಭಂಜ್‌ ಜಿಲ್ಲೆಯ ಬೈಡಾಪೋಸಿ ಗ್ರಾಮದವರಾಗಿದ್ದಾರೆ. ಬುಡಕಟ್ಟು ಜನಾಂಗ ಸಂತಾಲ್‌ ಕುಟುಂಬದ ವ್ಯಕ್ತಿಯಾಗಿದ್ದಾರೆ. ತಮ್ಮ ವೃತ್ತಿಜೀವನವನ್ನು ದ್ರೌಪದಿ ಮುರ್ಮು ಟೀಚರ್‌ ಆಗಿ ಆರಂಭಿಸಿದ್ದರು. ಆ ಬಳಿಕ ಒಡಿಶಾದ ನೀರಾವರಿ ಇಲಾಖೆಯಲ್ಲಿ ಜೂನಿಯರ್‌ ಅಸಿಸ್ಟೆಂಟ್‌ ಅಥವಾ ಕ್ಲರ್ಕ್‌ ಆಗಿಯೂ ಕೆಲಸ ಮಾಡಿದ್ದರು. ಇದೇ ವೃತ್ತಿಯಿಂದ ಬರುತ್ತಿದ್ದ ಸಂಬಳದಲ್ಲಿ ತಮ್ಮ ದೊಡ್ಡ ಕುಟುಂಬವನ್ನು ಸಂಭಾಳಿಸುತ್ತಿದ್ದ ದ್ರೌಪದಿ ಮುರ್ಮು, ಮಗಳು ಇತಿ ಮುರ್ಮು ಅವರನ್ನು ಇದೇ ಹಣದಲ್ಲಿ ವಿದ್ಯಾಭ್ಯಾಸ ಕೊಡಿಸಿದ್ದರು.

Latest Videos
Follow Us:
Download App:
  • android
  • ios