ರಾಷ್ಟ್ರಪತಿ ದ್ರೌಪದಿ ಮುರ್ಮು 71 ಮಂದಿಗೆ 2025ರ ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು. ನಟ ಅಜಿತ್, ನಿರ್ದೇಶಕ ಶೇಖರ್ ಕಪೂರ್, ಪತ್ರಕರ್ತ ಎ. ಸೂರ್ಯಪ್ರಕಾಶ್ ಪದ್ಮಭೂಷಣ ಪಡೆದರು. ವೈದ್ಯೆ ವಿಜಯಲಕ್ಷ್ಮೀ ದೇಶಮಾನೆ, ಭೀಮವ್ವ ಶಿಳ್ಳೆಕ್ಯಾತ, ಹಾಸನ ರಘು ಸೇರಿದಂತೆ ಹಲವರು ಪದ್ಮಶ್ರೀ ಪಡೆದರು. ಒಟ್ಟು 139 ಪ್ರಶಸ್ತಿಗಳಲ್ಲಿ ಉಳಿದವುಗಳನ್ನು ಮುಂದಿನ ಸಮಾರಂಭದಲ್ಲಿ ನೀಡಲಾಗುವುದು.
ನವದೆಹಲಿ (ಏ.28): ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 2025 ರ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ವರ್ಷದ ಮೊದಲ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 71 ವ್ಯಕ್ತಿಗಳಿಗೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಯಿತು. ಉಳಿದ ವ್ಯಕ್ತಿಗಳಿಗೆ ಶೀಘ್ರದಲ್ಲೇ ಪ್ರತ್ಯೇಕ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಸೋಮವಾರ ನಡೆದ ಸಮಾರಂಭದಲ್ಲಿ 4 ಪದ್ಮವಿಭೂಷಣ, 10 ಪದ್ಮಭೂಷಣ ಮತ್ತು 57 ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಯಿತು.
ಕಲಾ ಕ್ಷೇತ್ರದಲ್ಲಿ ದಕ್ಷಿಣ ಭಾರತದ ಚಲನಚಿತ್ರ ನಟ ಅಜಿತ್ ಮತ್ತು ನಿರ್ದೇಶಕ ಶೇಖರ್ ಕಪೂರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಗಜಲ್ ಗಾಯಕ ಪಂಕಜ್ ಉದಾಸ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಅವರ ಪತ್ನಿ ಫರೀದಾ ಪ್ರಶಸ್ತಿಯನ್ನು ಪಡೆದರು.
ಕರ್ನಾಟಕದ ವೈದ್ಯೆ ಡಾ. ವಿಜಯಲಕ್ಷ್ಮೀ ದೇಶಮಾನೆ, ಗೊಂಬೆಯಾಟದ ಅಜ್ಜಿ ಎಂದೇ ಫೇಮಸ್ ಆಗಿರುವ ಕೊಪ್ಪಳದ 96 ವರ್ಷದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಡಾ.ಹಾಸನ ರಘು ಅವರು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.
ವಯೋಲಿನ್ ದಿಗ್ಗಜ ಡಾ. ಲಕ್ಷ್ಮೀನಾರಾಯಣ ಸುಬ್ರಮಣ್ಯಂ ರಾಷ್ಟ್ರಪತಿಗಳಿಂದ ದೇಶದ 2ನೇ ಅತ್ಯುನ್ನತ ನಾಗರೀಕ ಪುರಸ್ಕಾರ ಪದ್ಮವಿಭೂಷಣ ಗೌರವ ಸ್ವೀಕರಿಸಿದರೆ, ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷ, ಪತ್ರಕರ್ತ ಕರ್ನಾಟಕದ ಎ.ಸೂರ್ಯಪ್ರಕಾಶ್ ರಾಷ್ಟ್ರಪತಿಗಳಿಂದ ಪದ್ಮಭೂಷಣ ಗೌರವ ಪಡೆದರು.
ಕ್ರಿಕೆಟಿಗ ಆರ್. ಅಶ್ವಿನ್ ಅವರಿಗೆ ಪದ್ಮಶ್ರೀ, ಹಾಕಿ ಆಟಗಾರ ಶ್ರೀಜೇಶ್ ಅವರಿಗೆ ಪದ್ಮಭೂಷಣ, ಕುವೈತ್‌ನ ಯೋಗ ಶಿಕ್ಷಕಿ ಶೇಖಾ ಅಲಿ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಗಣರಾಜ್ಯೋತ್ಸವಕ್ಕೂ ಮುನ್ನ ಸರ್ಕಾರ 2025 ರ 139 ಪದ್ಮ ಪ್ರಶಸ್ತಿಗಳನ್ನು ಘೋಷಿಸಿತ್ತು. ಈ ಪೈಕಿ ಶಾರದಾ ಸಿನ್ಹಾ, ಒಸಾಮು ಸುಜುಕಿ ಸೇರಿದಂತೆ 13 ವ್ಯಕ್ತಿಗಳಿಗೆ ಮರಣೋತ್ತರವಾಗಿ ಪ್ರಶಸ್ತಿಗಳನ್ನು ನೀಡಲಾಗಿದೆ.
ಪದ್ಮಭೂಷಣ ಅನಂತ್ ನಾಗ್‌ಗೆ ಶುಭ ಕೋರಿದ ಅಲ್ಲು ಅರ್ಜುನ್; ಆದ್ರೆ ಬಾಲಕೃಷ್ಣಗೆ ಹೇಳಿದ್ದೇನು?
ಪದ್ಮಭೂಷಣ ಪ್ರಶಸ್ತಿಗೆ 19 ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ 113 ವ್ಯಕ್ತಿಗಳಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ 23 ಮಹಿಳೆಯರು ಸೇರಿದ್ದಾರೆ. ಇವರಲ್ಲಿ 10 ವಿದೇಶಿಯರು/ಎನ್‌ಆರ್‌ಐ/ಪಿಐಒ/ಒಸಿಐ ವರ್ಗದ ವ್ಯಕ್ತಿಗಳು ಕೂಡ ಸೇರಿದ್ದಾರೆ.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯದ 9 ಮಂದಿಗೆ ಪದ್ಮ ಗೌರವ!
