ಪ್ರಯಾಗ್‌ರಾಜ್‌ನ ವಾರ್ಷಿಕ ಮಾಘ ಮೇಳದಲ್ಲಿ, ಮೌನಿ ಅಮವಾಸ್ಯೆಯಂದು ಪುಣ್ಯ ಸ್ನಾನಕ್ಕೆ ತೆರಳುತ್ತಿದ್ದ ಸ್ವಾಮಿ ಅವಿಮುಕ್ತೇಶ್ವರಾನಂದರ ಪಲ್ಲಕ್ಕಿ ಮೆರವಣಿಗೆಯನ್ನು ಪೊಲೀಸರು ತಡೆದಿದ್ದಾರೆ. ಈ ಘಟನೆಯು ಸ್ವಾಮೀಜಿ, ಶಿಷ್ಯರು ಮತ್ತು ಪೊಲೀಸರ ನಡುವೆ ನೂಕಾಟ-ತಳ್ಳಾಟಕ್ಕೆ ಕಾರಣವಾಯಿತು.
ಉತ್ತರ ಪ್ರದೇಶದಲ್ಲಿ ಧರ್ಮ-ಅಧಿಕಾರದ ನಡುವೆ ದೊಡ್ಡ ಮಹಾಯುದ್ಧ ಶುರುವಾಗಿದ್ದು, ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಡುವೆ ವಾಕ್ಸಮರ ತಾರಕಕ್ಕೆ ಹೋಗಿದೆ.
ಪ್ರಯಾಗ್‌ರಾಜ್ ಮಾಘ ಮೇಳ ಇದು ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಮುಖವಾದ ವಾರ್ಷಿಕ ಧಾರ್ಮಿಕ ಮೇಳ ಎನಿಸಿಕೊಂಡಿದೆ. ಇದು ವಾರ್ಷಿಕ ಧಾರ್ಮಿಕ ಮೇಳವಾಗಿದೆ. ಇದನ್ನು ಪ್ರತಿ ವರ್ಷ ಮಾಘ ಮಾಸದಲ್ಲಿ (ಜನವರಿ-ಫೆಬ್ರವರಿ) ಆಚರಿಸಲಾಗುತ್ತದೆ. 2026ರ ಮಾಘ ಮೇಳ ಜನವರಿ 3ರಿಂದ ಫೆಬ್ರವರಿ 15 ರವರೆಗೆ ನಡೆಯುತ್ತಿದೆ. ತ್ರಿವೇಣಿ ಸಂಗಮದಲ್ಲಿ (ಗಂಗಾ, ಯಮುನಾ ಮತ್ತು ಅದೃಶ್ಯ ಸರಸ್ವತಿ ನದಿಗಳ ಸಂಗಮ) ಮಾಘ ಮೇಳ ನಡೆಯುತ್ತದೆ.
ಮಾಘ ಮೇಳದ ಮುಖ್ಯ ಉದ್ದೇಶ
ಮಾಘ ಮೇಳದ ಮುಖ್ಯ ಅಂಶವೆಂದರೆ, ಆತ್ಮ ಶುದ್ಧೀಕರಣ ಮತ್ತು ಮೋಕ್ಷಕ್ಕಾಗಿ ಭಕ್ತರು ಪವಿತ್ರ ಸ್ನಾನ ಮಾಡುತ್ತಾರೆ. ಬಸಂತ ಪಂಚಮಿ ದಿನದಂದು 1 ಕೋಟಿಗೂ ಹೆಚ್ಚು ಭಕ್ತರು ಸ್ನಾನ ಮಾಡಿದ್ದಾರೆ. ಮಕರ ಸಂಕ್ರಾಂತಿ ದಿನದಂದು 36 ಲಕ್ಷಕ್ಕೂ ಹೆಚ್ಚು ಭಕ್ತರು ಸೇರಿಕೊಂಡಿದ್ದರು. ಈ ಸಂದರ್ಭದಲ್ಲಿ ಸಾಧು-ಸಂತರು, ಧಾರ್ಮಿಕ ಚರ್ಚೆಗಳು, ದಾನ-ಧರ್ಮ ಕಾರ್ಯ ನಡೆಯುತ್ತವೆ.
ಸ್ವಾಮಿ ಅವಿಮುಕ್ತೇಶ್ವರಾನಂದ Vs ಯುಪಿ ಸಿಎಂ ಯೋಗಿ ಟಾಕ್ಫೈಟ್
ಇನ್ನು ಇದೆಲ್ಲದರ ನಡುವೆ ಜನವರಿ 18ರಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಮೌನಿ ಅಮವಾಸ್ಯೆಯಂದು ಪುಣ್ಯ ಸ್ನಾನ ಮಾಡಲು ತೆರಳುತ್ತಿದ್ದ ಸ್ವಾಮೀಜಿಗೆ ಸ್ಥಳೀಯ ಆಡಳಿತ ವಿಐಪಿ ವ್ಯವಸ್ಥೆಗೆ ಬ್ರೇಕ್ ಹಾಕಿತ್ತು. ಇದಷ್ಟೇ ಅಲ್ಲದೇ ಸ್ವಾಮಿ ಅವಿಮುಕ್ತೇಶ್ವರಾನಂದ ಪಲ್ಲಕ್ಕಿ ಮೆರವಣಿಗೆಗೆ ಪ್ರಯಾಗ್‌ರಾಜ್ ಪೊಲೀಸರ ತಡೆಯೊಡ್ಡಿದ್ದರು. ಆದರೆ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಪಲ್ಲಕ್ಕಿ ಬಿಟ್ಟು ಕೆಳಗಿಳಿಯಲು ಹಿಂದೇಟು ಹಾಕಿದ್ದರು. ಈ ವೇಳೆ ಮಾಘ ಮೇಳದಿಂದ ಪವಿತ್ರ ಸ್ನಾನಕ್ಕೆ ಶ್ರೀಗಳಿಗೆ ಖಾಕಿ ಪಡೆ ಅವಕಾಶ ನೀಡಲಿಲ್ಲ. ಹೀಗಾಗಿ ಅವಿಮುಕ್ತೇಶ್ವರಾನಂದ ಶಿಷ್ಯರು-ಪೊಲೀಸರ ನಡುವ ನೂಕಾಟ, ತಳ್ಳಾಟ ನಡೆದಿತ್ತು. ಈ ಸಂದರ್ಭದಲ್ಲಿ ಪೊಲೀಸರು ಭಕ್ತರು, ಶಿಷ್ಯರ ಮೇಲೆ ಹಲ್ಲೆ ಮಾಡಿದ್ದಾರೆಂದು ಗಂಭೀರ ಆರೋಪ ಕೇಳಿ ಬಂದಿದ್ದು, ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಸ್ವಾಮೀಜಿಗಳ ಕೆಂಡಕಾರಿದ್ದಾರೆ. ಯೋಗಿ ಸರ್ಕಾರದ ವಿರುದ್ಧ ಅವಿಮುಕ್ತೇಶ್ವರಾನಂದ ಶ್ರೀ 10 ದಿನ ಧರಣಿ ನಿನ್ನೆಗೆ ಧರಣಿ ಕೊನೆಗೊಳಿಸಿದ್ದರು. ಇದಾದ ಬಳಿಕ ಪುಣ್ಯ ಸ್ನಾನ ಮಾಡದೇ ಶ್ರೀಗಳು ಹಿಂತಿರುಗಿದ್ದರು.


