Asianet Suvarna News Asianet Suvarna News

ಪೋಷಕರಂತೆ ಮುಂದೆ ನಿಂತು ಅನಾಥೆಯ ಮದುವೆ ಮಾಡಿದ ಪೊಲೀಸರು

ಪೋಷಕರು ಮತ್ತು ಕುಟುಂಬಸ್ಥರಿಂದ ಪರಿತ್ಯಕ್ತಳಾದ ಯುವತಿ ಹಾಗೂ ಯುವಕನಿಗೆ ಪೊಲೀಸರೇ ಪೋಷಕರ ಸ್ಥಾನದಲ್ಲಿ ಮುಂದೆ ನಿಂತು ಮದುವೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉತ್ತರಪ್ರದೇಶದ ಪ್ರತಾಪ್‌ಗಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 

Pratapgarh police did orphan girl marriage akb
Author
Bangalore, First Published Jul 20, 2022, 4:42 PM IST

ಪ್ರತಾಪಗಢ: ಪೊಲೀಸರೆಂದರೆ ಬಹುತೇಕರು ಮೂಗು ಮುರಿಯುವುದೇ ಹೆಚ್ಚು ಆದರೆ ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಅದಕ್ಕೆ ಉದಾಹರಣೆ ಈ ಘಟನೆ. ಪೋಷಕರು ಮತ್ತು ಕುಟುಂಬಸ್ಥರಿಂದ ಪರಿತ್ಯಕ್ತಳಾದ ಯುವತಿ ಹಾಗೂ ಯುವಕನಿಗೆ ಪೊಲೀಸರೇ ಪೋಷಕರ ಸ್ಥಾನದಲ್ಲಿ ಮುಂದೆ ನಿಂತು ಮದುವೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉತ್ತರಪ್ರದೇಶದ ಪ್ರತಾಪ್‌ಗಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 

ಹುಡುಗನ ಮನೆಯವರು ಸಹ ಕೆಲವು ಕಾರಣಗಳಿಂದ ಅವನನ್ನು ನಿರಾಕರಿಸಿದ್ದರು. ಹೀಗಾಗಿ 'ಸಾವನ್' ಮಾಸದ ಮೊದಲ ಸೋಮವಾರದ ನಿಮಿತ್ತ ಶಹಪುರ್ ಬೇಟಿ ಗ್ರಾಮದ ಬಾಬಾ ಅವಧೇಶ್ವರನಾಥ ಧಾಮದಲ್ಲಿ ಪೊಲೀಸರು ಈ ಅನಾಥ ಜೋಡಿಯ ಮದುವೆಗೆ ವ್ಯವಸ್ಥೆ ಮಾಡಿದ್ದರು. ಅವಧೇಶ್ವರನಾಥ ಧಾಮದಲ್ಲಿ ಶಿವನಿಗೆ ಪೂಜೆ ಸಲ್ಲಿಸಲು ಆಗಮಿಸಿದ ಭಕ್ತರು ಮದುವೆಗೆ ಅತಿಥಿಗಳಾಗಿ ಆಗಮಿಸಿ ದಂಪತಿಗಳಿಗೆ ಆಶೀರ್ವಾದ ಮಾಡಿದರು.

ಅಂದು ಸುನಾಮಿಯಿಂದ ಪಾರಾದ ಬಾಲಕಿ ಈಗ ಮಧುವಣಗಿತ್ತಿ... ಅನಾಥೆಯ ಮದುವೆಗೆ ನೆರವಾದ ಐಎಎಸ್‌ ಅಧಿಕಾರಿ

ಹತ್ತಿಗಾವ್‌ ಠಾಣೆ ಠಾಣಾಧಿಕಾರಿ ಸಂತೋಷ್ ಸಿಂಗ್ ಅವರ ನೇತೃತ್ವದಲ್ಲಿ ಬಾಬಾ ಅವದೇಶ್ವರ ನಾಥ್ ಧಾಮ್‌ನ ಕ್ಯಾಂಪಸ್‌ನಲ್ಲಿ ಖುಷ್ಬೂ ಮತ್ತು ವಿಜಯ್ ಅವರ ವಿವಾಹವನ್ನು ಅದ್ದೂರಿಯಾಗಿ ನಡೆಸಲಾಯಿತು. ಕೈಮ್ ಮಸ್ತಾಪುರ ಗ್ರಾಮದ ನಿವಾಸಿಗಳಾದ ವಧು-ವರರಿಬ್ಬರೂ ಕಳೆದ ಎರಡು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು. ಆದರೆ ವಧುವಿನ ಪೋಷಕರು ಕಳೆದೆರಡು ವರ್ಷಗಳ ಹಿಂದೆ ಆಕೆಯನ್ನು ಬಿಟ್ಟು ಹೋಗಿದ್ದರಿಂದ ಅವರು ಅನಾಥರಾಗಿದ್ದರು. 

ಹುಡುಗಿಯ ಸಂಬಂಧಿಕರು ಅವಳ ಮದುವೆಯನ್ನು ಮಾಡಲು ಸಾಧ್ಯವಿರಲಿಲ್ಲ, ಹೀಗಾಗಿ ದಂಪತಿಗಳು ಹತ್ತಿಗಾವ್ನ್ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಸಂಪರ್ಕಿಸಿ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದರು. ಹೀಗಾಗಿ ಇವರ ಮದುವೆ ಬಗ್ಗೆ ಠಾಣಾಧಿಕಾರಿ ಸಂತೋಷ್ ಸಿಂಗ್ ತಮ್ಮ ಸಿಬ್ಬಂದಿಗಳ ಜೊತೆಗೂಡಿ ವಿಶೇಷ ಕಾಳಜಿ ವಹಿಸಿದರು, ಅರ್ಚಕ ಮೋಹಿತ್ ಮಿಶ್ರಾ ಅವರನ್ನು ಕರೆಸಿ ದೇವಸ್ಥಾನದಲ್ಲಿ ಇಬ್ಬರ ವಿವಾಹವನ್ನು ನೆರವೇರಿಸಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಪೊಲೀಸರು ಮಾಡಿದರು.

ದೇವಸ್ಥಾನದ ಆವರಣದಲ್ಲಿ ವಿವಾಹವನ್ನು ನೆರವೇರಿಸುವ ಯೋಜನೆಯನ್ನು ದೇವಸ್ಥಾನದ ಸಮಿತಿಯ ಸದಸ್ಯರಿಗೆ ಪೊಲೀಸರು ತಿಳಿಸಿದಾಗ, ಅವರೂ ಸಹ ಈ ಉದಾತ್ತ ಕಾರ್ಯದಲ್ಲಿ ಕೈ ಜೋಡಿಸಲು ಉತ್ಸುಕರಾಗಿ ಪೊಲೀಸ್ ಅಧಿಕಾರಿಗಳಿಗೆ ಬೆಂಬಲ ನೀಡಲು ನಿರ್ಧರಿಸಿದರು. ನಂತರ ಮಂತ್ರ ಪಠಣ ಮತ್ತು ಶ್ಲೋಕಗಳ ಮಧ್ಯೆ ಸಂಪ್ರದಾಯಬದ್ಧವಾಗಿ ಎಲ್ಲಾ ವಿಧಿ ವಿಧಾನಗಳು ನೆರವೇರಿದವು.

ಅಂದು ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಈ ನಟಿ ಈಗ ಅನಾಥೆ!

ಅಲ್ಲದೇ ಇವರ ಮದುವೆಗೆ ಗ್ರಾಮಸ್ಥರು ಕೂಡ ನೆರವಾಗಿದ್ದು, ಕುಂದಾ ಗ್ರಾಮದ ಮಹಿಳಾ ಭಕ್ತರು ವಧುವಿಗೆ ಉಂಗುರ, ಮಂಗಳ ಸೂತ್ರ, ಸೀರೆ ಮತ್ತು ಇತರ ಅಗತ್ಯ ವಸ್ತುಗಳನ್ನು ತಂದು ಕೊಟ್ಟರು. ಇತರ ಭಕ್ತರು ದಂಪತಿಗಳಿಗೆ ಮದುವೆಗೆ ಬೇಕಾದ ಸಿಹಿ ತಿಂಡಿ, ಹಣ್ಣುಗಳು ಮತ್ತು ಪೂಜಾ ಸಾಮಗ್ರಿಗಳನ್ನು ನೀಡಿದರು. ಪೊಲೀಸರು ನವದಂಪತಿಗಳಿಗೆ ಉಡುಗೊರೆಗಳನ್ನು ನೀಡಿದರು ಮತ್ತು ಮಹಿಳಾ ಪೊಲೀಸರು ವಿಧಿ ವಿಧಾನಗಳನ್ನು ನೆರವೇರಿಸಿದರು. 
 

Follow Us:
Download App:
  • android
  • ios