ಸಚಿವ ಪ್ರಹ್ಲಾದ್ ಜೋಶಿ ಗಣಿ ಟೂರ್: ಕಲ್ಲಿದ್ದಲು ಕೊರತೆ ನೀಗಿಸಲು ಯತ್ನ!
* ಕಲ್ಲಿದ್ದಲು ಕೊರತೆ ನೀಗಿಸಲು ಪ್ರಹ್ಲಾದ್ ಜೋಶಿ ಪ್ರಯತ್ನ
* ಸಚಿವ ಪ್ರಹ್ಲಾದ್ ಜೋಶಿ ಗಣಿ ಟೂರ್
* ಎರಡು ದಿನಗಳ ಕಾಲ ಛತ್ತೀಸ್‌ಗಢ, ಜಾರ್ಖಂಡ್ ಪ್ರವಾಸ
* ಕಲ್ಲಿದ್ದಲು ಉತ್ಪಾದನೆ ಹೆಚ್ಚಳಕ್ಕೆ ಗಣಿ ಕಂಪನಿಗಳಿಗೆ ಸೂಚನೆ
ರಾಂಚಿ(ಅ.14): ದೇಶಾದ್ಯಂತ ಉಷ್ಣ ವಿದ್ಯುತ್ ಸ್ಥಾವರಗಳಿಗೆ(Power Plant) ಕಲ್ಲಿದ್ದಲು(Coal) ಪೂರೈಕೆ ಕುಸಿತವಾಗಿ ಸಮಸ್ಯೆ ಗಂಭೀರವಾದ ಬೆನ್ನಲ್ಲೇ, ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ(Pralhad Joshi), ಪ್ರಮುಖ ಗಣಿಗಳಿಗೆ ಭೇಟಿ ನೀಡುವ ಮೂಲಕ ಪರಿಸ್ಥಿತಿಯ ಅವಲೋಕನ ಆರಂಭಿಸಿದ್ದಾರೆ.
ಬುಧವಾರ ಛತ್ತೀಸ್‌ಗಢಕ್ಕೆ(Chhattisgarh) ಭೇಟಿ ನೀಡಿದ ಸಚಿವ ಜೋಶಿ, ಅಲ್ಲಿ ಗವ್ರಾ, ದಿಪ್ಕಾ ಮತ್ತು ಕಸ್ಮುಂಡಾ ಗಣಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಿಪ್ಕಾ ಗಣಿ(Dipka coal mine) ವಾರ್ಷಿಕ 35 ದಶಲಕ್ಷ ಟನ್ ಕಲ್ಲಿದ್ದಲು(Coal) ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ದೇಶದ ದೊಡ್ಡ ಗಣಿಗಳಲ್ಲಿ ಒಂದಾಗಿದೆ. ಭೇಟಿ ವೇಳೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಸಚಿವ ಜೋಶಿ, ಉತ್ಪಾದನೆ ಇನ್ನಷ್ಟುಹೆಚ್ಚಿಸಲು ಸೂಚನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ದೇಶದಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ಕಳೆದ ಕೆಲವು ದಿನಗಳಿಂದ ನಿತ್ಯ 19.4 ಲಕ್ಷ ಟನ್‌ಗಳಷ್ಟು ಕಲ್ಲಿದ್ದಲು ಉತ್ಪಾದನೆ ಮಾಡಲಾಗುತ್ತಿದ್ದು, ಮುಂದಿನ ಐದು ದಿನಗಳಲ್ಲಿ ಅದನ್ನು 2 ದಶಲಕ್ಷ ಟನ್‌ಗಳಿಗೆ ಹೆಚ್ಚಿಸುವುದಾಗಿ ತಿಳಿಸಿದರು.
ಜೋಶಿ, ಗುರುವಾರ ಜಾರ್ಖಂಡ್‌ನ ರಾಂಚಿ ಸೇರಿ ಹಲವು ಗಣಿಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಗಣಿ ಪ್ರದೇಶಗಳ ಭೇಟಿ ಬಳಿಕ, ಕಲ್ಲಿದ್ದಲು ಕಂಪನಿಗಳೊಂದಿಗೆ ಸಭೆ ಕೂಡ ನಡೆಸಲಿದ್ದಾರೆ.
ನಮ್ಮಲ್ಲೀಗ ಸುಮಾರು 22 ದಿನಗಳಿಗಾಗುವಷ್ಟುಕಲ್ಲಿದ್ದಲು ದಾಸ್ತಾನಿದೆ. ಆದ್ರೆ ಮಳೆಯಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ವಿದ್ಯುತ್ ಉತ್ಪಾದಕ ಕಂಪನಿಗಳಿಗೆ ಬೇಡಿಕೆ ಇರುವಷ್ಟು ಕಲ್ಲಿದ್ದಲನ್ನು ಪೂರೈಸಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ.
ಪ್ರಹ್ಲಾದ್ ಜೋಶಿ, ಕೇಂದ್ರ ಕಲ್ಲಿದ್ದಲು ಖಾತೆ ಸಚಿವ
ಕಲ್ಲಿದ್ದಲು ಪೂರೈಕೆ ಹೆಚ್ಚಳ: ಒಂದೇ ದಿನದಲ್ಲಿ 20 ಲಕ್ಷ ಟನ್ ಪೂರೈಕೆ!
ಕಲ್ಲಿದ್ದಲು ಸಮಸ್ಯೆ(Coal Crisis) ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಮತ್ತು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಪ್ರಯತ್ನಗಳ ಬೆನ್ನಲ್ಲೇ, ಮಂಗಳವಾರ ದೇಶಾದ್ಯಂತ ಇರುವ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ 20 ಲಕ್ಷ ಟನ್‌ಗಳಷ್ಟು ಕಲ್ಲಿದ್ದಲು ಪೂರೈಕೆಯಾಗಿದೆ(Coal). ಇದು ಕಲ್ಲಿದ್ದಲಿನ ಕೊರತೆಯಿಂದಾಗಿ ವಿದ್ಯುತ್ ಕಡಿತ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ತಲುಪಿದ್ದ ರಾಜ್ಯ ಸರ್ಕಾರಗಳಿಗೆ ತುಸು ನೆಮ್ಮದಿ ತಂದಿದೆ.
Happy to share that cumulative coal supplies to thermal power plants from all sources including @CoalIndiaHQ recorded more than 2 million tonnes yesterday. We are increasing coal dispatch to power plants further to ensure sufficient coal stocks at power plants.
— Pralhad Joshi (@JoshiPralhad) October 13, 2021
ಈ ಕುರಿತು ಟ್ವೀಟರ್ ಮೂಲಕ ಮಾಹಿತಿ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ‘ಕೋಲ್ ಇಂಡಿಯಾ(Coal India) ಸೇರಿದಂತೆ ವಿವಿಧ ಮೂಲಗಳಿಂದ ಉಷ್ಣ ವಿದ್ಯುತ್ ಸ್ಥಾವರಗಳಿಗೆ(Power Plant) ಮಂಗಳವಾರ 20 ಲಕ್ಷ ಟನ್ ಕಲ್ಲಿದ್ದಲು ಪೂರೈಸಲಾಗಿದೆ. ಎಲ್ಲಾ ಉಷ್ಣ ವಿದ್ಯುತ್ ಸ್ಥಾವರಗಳಲ್ಲೂ ಅಗತ್ಯ ಪ್ರಮಾಣದ ಸಂಗ್ರಹ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಅವುಗಳಿಗೆ ಮಾಡುವ ಪೂರೈಕೆ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಿದ್ದೇವೆ. ಕಲ್ಲಿದ್ದಲು ಆಧರಿತ ಉಷ್ಣಸ್ಥಾವರ ಮತ್ತು ಜನಸಾಮಾನ್ಯರಿಗೆ ನಾವು ಭರವಸೆ ನೀಡುವುದೆಂದರೆ, ವಿದ್ಯುತ್ ಉತ್ಪಾದನೆಗೆ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದ ಕಲ್ಲಿದ್ದಲು ಪೂರೈಸಲು ನಮ್ಮ ಸಚಿವಾಲಯ ಬದ್ಧ’ ಎಂದು ಹೇಳಿದ್ದಾರೆ.