Asianet Suvarna News Asianet Suvarna News

ಗೋಡ್ಸೆ ದೇಶಭಕ್ತ ಎಂದ ಪ್ರಜ್ಞಾಗೆ ಬಿಜೆಪಿ ತಪರಾಕಿ

ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದ ಸಾಧ್ವಿ ಪ್ರಗ್ಯಾ ಸಿಂಗ್‌ಗೆ ಬಿಜೆಪಿ ನಾಯಕರು ತರಾಟೆ ತೆಗೆದುಕೊಂಡಿದ್ದಾರೆ. 

Pragya Thakur's deshbhakt Godse remark creates uproar
Author
Bengaluru, First Published Nov 29, 2019, 7:23 AM IST

ನವದೆಹಲಿ [ನ.29]:  ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಂತಕ ನಾಥೂರಾಮ ಗೋಡ್ಸೆಯನ್ನು ದೇಶಭಕ್ತ ಎಂದು ಲೋಕಸಭೆಯಲ್ಲಿ ಹೊಗಳುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿರುವ ಭೋಪಾಲ್‌ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ಗೆ ಬಿಜೆಪಿ ಗುರುವಾರ ಬಿಸಿ ಮುಟ್ಟಿಸಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಮುಕ್ತಾಯದವರೆಗೂ ಸಾಧ್ವಿಗೆ ಪಕ್ಷದ ಸಂಸದೀಯ ಸಭೆಯಿಂದ ನಿರ್ಬಂಧ ಹೇರಿದೆ. ಮತ್ತೊಂದೆಡೆ ರಕ್ಷಣಾ ಸಲಹಾ ಸಮಿತಿಯಿಂದ ಪ್ರಜ್ಞಾರನ್ನು ಹೊರದಬ್ಬಿದೆ. ಗಾಂಧಿ ಹಂತಕ ಗೋಡ್ಸೆ ದೇಶಭಕ್ತ ಎಂಬ ಯಾವುದೇ ತತ್ವವನ್ನು ಖಂಡಿಸುವುದಾಗಿ ಹೇಳಿದೆ. ಇದರಿಂದಾಗಿ ಪ್ರಜ್ಞಾಗೆ ತೀವ್ರ ಮುಖಭಂಗ ಉಂಟಾಗಿದೆ.

ಮತ್ತೊಂದೆಡೆ, ಸಾಧ್ವಿ ಹೇಳಿಕೆ ವಿರುದ್ಧ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ. ಸರ್ಕಾರ ನೀಡಿದ ಉತ್ತರದಿಂದ ತೃಪ್ತರಾಗದ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿ, ಆಕ್ರೋಶ ಹೊರಹಾಕಿವೆ.

ಈ ನಡುವೆ, ಗೋಡ್ಸೆಯನ್ನು ಹೊಗಳಿದ ಸಾಧ್ವಿ ವಿರುದ್ಧ ಲೋಕಸಭೆಯಲ್ಲಿ ಖಂಡನಾ ನಿರ್ಣಯ ಮಂಡಿಸಲು ಕಾಂಗ್ರೆಸ್‌ ನೇತೃತ್ವದಲ್ಲಿ ಯುಪಿಎ ಪಕ್ಷಗಳು ಸಹಿ ಸಂಗ್ರಹ ಆರಂಭಿಸಿವೆ. ಕ್ಷಮೆ ಕೇಳುವವರೆಗೂ ಸಾಧ್ವಿ ಲೋಕಸಭೆಗೆ ಪ್ರವೇಶಿಸಲು ಬಿಡಬಾರದು ಎಂಬ ಅಂಶ ಈ ನಿರ್ಣಯದಲ್ಲಿದೆ.

ಗೋಡ್ಸೆಯನ್ನು ಮತ್ತೆ ‘ದೇಶಭಕ್ತ’ ಎಂದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ!...

ಇಷ್ಟೆಲ್ಲಾ ವಿವಾದದ ನಂತರ ಟ್ವೀಟರ್‌ನಲ್ಲಿ ಸ್ಪಷ್ಟನೆ ನೀಡಿರುವ ಸಾಧ್ವಿ, ಕ್ರಾಂತಿಕಾರಿ ಹೋರಾಟಗಾರ ಉಧಮ್‌ ಸಿಂಗ್‌ ಅವರಿಗೆ ಅವಮಾನ ಮಾಡಿದ್ದಕ್ಕಾಗಿ ತಾವು ಆ ರೀತಿ ಮಾತನಾಡಬೇಕಾಯಿತು. ಸುಳ್ಳುಗಳ ಬಿರುಗಾಳಿ ಎಷ್ಟುದೊಡ್ಡದಾಗಿರುತ್ತೆಂದರೆ, ಕೆಲವೊಮ್ಮೆ ಹಗಲನ್ನೂ ಇರುಳು ಮಾಡಿಬಿಡುತ್ತದೆ. ಆದರೆ ಸೂರ್ಯ ಮಾತ್ರ ತನ್ನ ಬೆಳಕನ್ನು ಕಳೆದುಕೊಳ್ಳುವುದಿಲ್ಲ. ಜನರು ಈ ಬಿರುಗಾಳಿಗೆ ಸಿಲುಕಬಾರದು ಎಂದು ತಿಳಿಸಿದ್ದಾರೆ.

ಬಿಜೆಪಿಯಿಂದಲೇ ಖಂಡನೆ:

ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲೂ ಗೋಡ್ಸೆಯನ್ನು ಸಾಧ್ವಿ ಹೊಗಳಿದ್ದರು. ಪಕ್ಷ ಛೀಮಾರಿ ಹಾಕಿದ ಬಳಿಕ ಕ್ಷಮಾಪಣೆ ಕೇಳಿದ್ದರು. ಸಾಧ್ವಿ ಹೇಳಿಕೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಕ್ರೋಶ ವ್ಯಕ್ತಪಡಿಸಿದ್ದರು. ‘ಇಂತಹ ಹೇಳಿಕೆಗಳು ಕೆಟ್ಟವು. ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತವೆ. ಸಾಧ್ವಿ ಕ್ಷಮೆ ಕೇಳಿದ್ದರೂ, ಆಕೆಯನ್ನು ನಾನೆಂದಿಗೂ ಸಂಪೂರ್ಣವಾಗಿ ಕ್ಷಮಿಸಲಾರೆ’ ಎಂದು ಮೋದಿ ಹೇಳಿದ್ದರು.

ಆದರೂ ಲೋಕಸಭೆಯಲ್ಲಿ ಡಿಎಂಕೆಯ ಎ. ರಾಜಾ ಅವರು ಬುಧವಾರ ವಿಷಯವೊಂದನ್ನು ಪ್ರಸ್ತಾಪಿಸಿದ ಸಂದರ್ಭದಲ್ಲಿ ಗೋಡ್ಸೆ ದೇಶಭಕ್ತ ಎಂದು ಸಾಧ್ವಿ ಹೇಳಿದ್ದರು. ಈ ಪದವನ್ನು ಸ್ಪೀಕರ್‌ ಓಂ ಬಿರ್ಲಾ ಕಡತದಿಂದ ತೆಗೆಸಿ ಹಾಕಿದ್ದರು. ಸಾಧ್ವಿ ಹೇಳಿಕೆ ವ್ಯಾಪಕ ಟೀಕೆಗೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ಎರಡು ಶಿಸ್ತುಕ್ರಮಗಳನ್ನು ಪ್ರಕಟಿಸಿದರು. ಗಾಂಧಿ ಹಂತಕ ನಾಥೂರಾಮ್‌ ಗೋಡ್ಸೆಯನ್ನು ದೇಶಭಕ್ತ ಎಂದು ಹೊಗಳುವ ಯಾವುದೇ ತತ್ವವನ್ನು ಪಕ್ಷ ಖಂಡಿಸುತ್ತದೆ ಎಂದು ಹೇಳಿದರು. ಬಿಜೆಪಿ ಎಂದಿಗೂ ಇಂತಹ ಹೇಳಿಕೆ ಹಾಗೂ ಸಿದ್ಧಾಂತಗಳನ್ನು ಬೆಂಬಲಿಸುವುದಿಲ್ಲ ಎಂದರು.

ಸಾಧ್ವಿ ವಿರುದ್ಧದ ಕ್ರಮಗಳನ್ನು ಸ್ವಾಗತಿಸಿರುವ ಬಿಜೆಪಿ ಮಿತ್ರಪಕ್ಷ ಜೆಡಿಯು, ಈ ವಿಷಯವನ್ನು ಲೋಕಸಭೆಯ ನೈತಿಕ ಸಮಿತಿಗೆ ಹಸ್ತಾಂತರಿಸಬೇಕು. ಆ ಸಮಿತಿಯ ಶಿಫಾರಸಿನ ಮೇರೆಗೆ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಸೇರಿದಂತೆ ಹಲವರನ್ನು ಸದನದಿಂದ ಉಚ್ಚಾಟಿಸಲಾಗಿತ್ತು ಎಂದು ಹೇಳಿದೆ.

ಈ ನಡುವೆ, ಲೋಕಸಭೆಯಲ್ಲಿ ಪ್ರತಿಭಟನೆ ನಿರತರಾಗಿದ್ದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್‌, ಗೋಡ್ಸೆಯನ್ನು ದೇಶಭಕ್ತ ಎಂಬ ಆಲೋಚನೆಯನ್ನು ನಾವು ಖಂಡಿಸುತ್ತೇವೆ. ಗಾಂಧೀಜಿ ಅವರ ಸಿದ್ಧಾಂತ ಹಿಂದೆ, ಈಗ, ಮುಂದೆಯೂ ದೇಶಕ್ಕೆ ಮಾರ್ಗದರ್ಶನವಾಗಿರುತ್ತದೆ ಎಂದು ಹೇಳಿದರು. ರಾಜನಾಥ್‌ ಉತ್ತರದಿಂದ ತೃಪ್ತವಾಗದ ಪ್ರತಿಪಕ್ಷಗಳಾದ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಡಿಎಂಕೆ, ಎಡಪಕ್ಷಗಳು, ಎನ್‌ಸಿಪಿ, ಎಂಐಎಂ ಸಭಾತ್ಯಾಗ ನಡೆಸಿದವು.

Follow Us:
Download App:
  • android
  • ios