ನವದೆಹಲಿ[ನ.28]: ಮಹಾತ್ಮಾ ಗಾಂಧೀಜಿ ಅವರ ಹಂತಕ ನಾಥೂರಾಮ್‌ ಗೋಡ್ಸೆಯನ್ನು ಪುನಃ ‘ದೇಶಭಕ್ತ’ ಎಂದು ಕರೆದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ವಿವಾದಕ್ಕೀಡಾಗಿದ್ದಾರೆ.

ಲೋಕಸಭೆಯಲ್ಲಿ ಬುಧವಾರ ಅವರು ಈ ರೀತಿ ಹೇಳಿದ್ದು, ಪ್ರತಿಪಕ್ಷಗಳ ಪ್ರತಿಭಟನೆಗೆ ಕಾರಣವಾಯಿತು. ಎಸ್‌ಪಿಜಿ ತಿದ್ದುಪಡಿ ಮಸೂದೆ ಚರ್ಚೆ ನಡೆಯುತ್ತಿರುವ ವೇಳೆ ಡಿಎಂಕೆ ಸಂಸದ ಎ. ರಾಜಾ ಅವರು, ‘ತಾನೇಕೆ ಗಾಂಧೀಜಿಯನ್ನು ಕೊಂದೆ’ ಎಂಬ ಬಗ್ಗೆ ಗೋಡ್ಸೆ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದರು.

‘ಗಾಂಧಿಯ ಮೇಲೆ 32 ವರ್ಷದ ದ್ವೇಷವನ್ನು ತಾನು ಹೊಂದಿದ್ದೆ. ಹೀಗಾಗಿ ಅವರನ್ನು ಕೊಂದೆ’ ಎಂದು ಗೋಡ್ಸೆ ನೀಡಿದ ಹೇಳಿಕೆಯನ್ನು ಅವರು ಉದಾಹರಿಸಿದರು. ಆಗ ಮಧ್ಯಪ್ರವೇಶಿಸಿದ ಸಾಧ್ವಿ ಪ್ರಜ್ಞಾ, ‘ದೇಶಭಕ್ತನ ಉದಾಹರಣೆಯನ್ನು ನೀವು ನೀಡಲಾಗದು’ ಎಂದು ರಾಜಾ ಅವರನ್ನು ತಡೆದರು. ಆಗ ಸಿಡಿದೆದ್ದ ಪ್ರತಿಪಕ್ಷಗಳ ಸದಸ್ಯರು ಕೂಗಾಟ ಆರಂಭಿಸಿದರು.

ಬಿಜೆಪಿ ಸದಸ್ಯರೇ ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಸಾಧ್ವಿ ಅವರನ್ನು ಸುಮ್ಮನೆ ಕೂರಿಸಿದರು. ಕಳೆದ ಲೋಕಸಭೆ ಚುನಾವಣೆ ವೇಳೆ ಕೂಡ ಸಾಧ್ವಿ ಅವರು ಗೋಡ್ಸೆಯನ್ನು ‘ದೇಶಭಕ್ತ’ ಎಂದು ಕರೆದು ವಿವಾದಕ್ಕೀಡಾಗಿದ್ದರು. ಈ ನಡುವೆ, ಸಾಧ್ವಿ ಮೇಲೆ ಬಿಜೆಪಿ ಶಿಸ್ತುಕ್ರಮ ಜರುಗಿಸಬೇಕು. ಇಲ್ಲದೇ ಹೋದರೆ ಬಿಜೆಪಿ ನೀತಿ ಕೂಡ ‘ಗೋಡ್ಸೆ ದೇಶಭಕ್ತ’ ಎಂದೇ ಆಗುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ.