ನಿಗದಿಗಿಂತ ಹೆಚ್ಚು ಸಲ ಕರೆಂಟ್‌ ತೆಗೆದರೆ ಗ್ರಾಹಕರಿಗೆ ಪರಿಹಾರ| ವಿದ್ಯುತ್‌ ಗ್ರಾಹಕರ ಹಕ್ಕು ರಕ್ಷಣೆಗೆ ಕೇಂದ್ರ ಸರ್ಕಾರದ ನಿಯಮ| 30 ದಿನದೊಳಗೆ ವಿದ್ಯುತ್‌ ಸಂಪರ್ಕ ನೀಡುವುದು ಕಡ್ಡಾಯ| ಎಸ್ಕಾಂಗಳು ನೀಡುವ ಎಲ್ಲಾ ಸೇವೆಗಳಿಗೂ ಕಾಲಮಿತಿ ನಿಗದಿ| ಕರೆಂಟ್‌ ತೆಗೆಯುವ ಮುನ್ನ ವೈಯಕ್ತಿಕ ಮಾಹಿತಿ ಕಳಿಸಬೇಕು

ನವದೆಹಲಿ(ಡಿ.22): ವಿದ್ಯುತ್‌ ವಿತರಣಾ ಕಂಪನಿಗಳು (ಎಸ್ಕಾಂ) ಗ್ರಾಹಕರನ್ನು ಶೋಷಿಸುತ್ತವೆ, ಬೇಕಾಬಿಟ್ಟಿಸೇವೆ ನೀಡುತ್ತವೆ ಮತ್ತು ಪದೇಪದೇ ವಿದ್ಯುತ್‌ ಕಡಿತಗೊಳಿಸಿ ಸರಿಯಾದ ಸೇವೆ ನೀಡದಿದ್ದರೂ ದುಬಾರಿ ಬಿಲ್‌ ವಸೂಲಿ ಮಾಡುತ್ತವೆ ಎಂಬ ದೂರು ದೇಶಾದ್ಯಂತ ಇದೆ. ಇದಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರ ವಿದ್ಯುತ್‌ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಹೊಸ ನಿಯಮಾವಳಿ ಬಿಡುಗಡೆ ಮಾಡಿದ್ದು, ಅದರಡಿ ನಿಗದಿಗಿಂತ ಹೆಚ್ಚು ಸಮಯ ಕರೆಂಟ್‌ ತೆಗೆದರೆ ಎಸ್ಕಾಂಗಳು ಗ್ರಾಹಕರಿಗೆ ದಂಡದ ರೂಪದಲ್ಲಿ ಪರಿಹಾರ ನೀಡಬೇಕಿದೆ.

ಕೇಂದ್ರ ಇಂಧನ ಸಚಿವ ಆರ್‌.ಕೆ.ಸಿಂಗ್‌ ಸೋಮವಾರ ‘ವಿದ್ಯುತ್‌ ನಿಯಮಗಳು (ಗ್ರಾಹಕರ ಹಕ್ಕುಗಳು)’ ಹೆಸರಿನ ಹೊಸ ನೀತಿಯನ್ನು ಬಿಡುಗಡೆ ಮಾಡಿ, ‘ದೇಶದೆಲ್ಲೆಡೆ ವಿದ್ಯುತ್‌ ವಿತರಣಾ ಕಂಪನಿಗಳು ಏಕಸ್ವಾಮ್ಯ ಹೊಂದಿವೆ. ಒಂದು ಕಡೆ ಒಂದೇ ಕಂಪನಿ ಸೇವೆ ನೀಡುವುದರಿಂದ ಗ್ರಾಹಕರಿಗೆ ಆಯ್ಕೆ ಇಲ್ಲದಂತಾಗಿದೆ. ಹೀಗಾಗಿ ವಿದ್ಯುತ್‌ ವಿತರಣಾ ಕಂಪನಿಗಳು ಗ್ರಾಹಕರ ಹಕ್ಕುಗಳನ್ನು ರಕ್ಷಿಸದ ಬಗ್ಗೆ ದೂರುಗಳಿವೆ. ಅದನ್ನು ಹೋಗಲಾಡಿಸಲು ಹೊಸ ನಿಯಮಾವಳಿ ಜಾರಿಗೊಳಿಸಲಾಗುತ್ತಿದೆ’ ಎಂದು ಹೇಳಿದರು.

ಹೊಸ ನಿಯಮಗಳಲ್ಲಿ ಕೆಲವನ್ನು ಕೇಂದ್ರ ಸರ್ಕಾರ ಸಷ್ಟವಾಗಿ ಹೇಳಿದೆ. ಇನ್ನು ಕೆಲ ನಿಯಮಗಳನ್ನು ರಾಜ್ಯಗಳ ವಿದ್ಯುತ್‌ ನಿಯಂತ್ರಣ ಆಯೋಗಗಳು ಅಂತಿಮಗೊಳಿಸಬೇಕು ಎಂದು ತಿಳಿಸಿದೆ.

ಹೊಸ ನಿಯಮದ ಪ್ರಮುಖ ಅಂಶಗಳು

- ಎಸ್ಕಾಂಗಳು ನಿಗದಿಗಿಂತ ಹೆಚ್ಚು ಬಾರಿ ಅಥವಾ ಹೆಚ್ಚು ಸಮಯ ವಿದ್ಯುತ್‌ ನಿಲುಗಡೆ ಮಾಡಿದರೆ ಗ್ರಾಹಕರಿಗೆ ದಂಡದ ರೂಪದಲ್ಲಿ ಪರಿಹಾರ ನೀಡಬೇಕು. ಈ ಪರಿಹಾರ ತನ್ನಿಂತಾನೇ ಪಾವತಿಯಾಗಬೇಕು. ಎಷ್ಟುಸಮಯ ವಿದ್ಯುತ್‌ ನಿಲುಗಡೆ ಮಾಡಬಹುದು ಎಂಬುದನ್ನು ಆಯೋಗಗಳು ನಿರ್ಧರಿಸಬೇಕು.

- ವಿದ್ಯುತ್‌ ಕಡಿತಗೊಳಿಸುವ ಮುನ್ನ ಎಲ್ಲಾ ಗ್ರಾಹಕರಿಗೂ ಎಸ್‌ಎಂಎಸ್‌ ಮುಂತಾದ ರೂಪದಲ್ಲಿ ವೈಯಕ್ತಿಕವಾಗಿ ಸಂದೇಶ ರವಾನಿಸಬೇಕು.

- ಹಿರಿಯ ನಾಗರಿಕರಿಗೆ ಅರ್ಜಿ ಸ್ವೀಕಾರ, ಬಿಲ್‌ ಪಾವತಿ ಸೇರಿದಂತೆ ಎಲ್ಲಾ ಸೇವೆಯನ್ನೂ ಎಸ್ಕಾಂಗಳು ಮನೆ ಬಾಗಿಲಿಗೇ ನೀಡಬೇಕು.

- ಗ್ರಾಹಕರಿಗೆ ಸೇವೆ ನೀಡಲು 24 ಗಂಟೆ ಉಚಿತ ಕಾಲ್‌ಸೆಂಟರ್‌, ವೆಬ್‌ಸೈಟ್‌, ಆ್ಯಪ್‌, ಕೇಂದ್ರೀಕೃತ ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಹೊಂದಿರಬೇಕು.

- ಗ್ರಾಹಕರು ನೀಡುವ ಯಾವುದೇ ರೀತಿಯ ದೂರುಗಳನ್ನು ಗರಿಷ್ಠ 45 ದಿನದೊಳಗೆ ಪರಿಹರಿಸಬೇಕು.

- ಮೆಟ್ರೋ ನಗರಗಳಲ್ಲಿ ಗರಿಷ್ಠ 7 ದಿನದೊಳಗೆ, ಮುನ್ಸಿಪಲ್‌ ಪ್ರದೇಶದಲ್ಲಿ 15 ದಿನದೊಳಗೆ ಹಾಗೂ ಗ್ರಾಮೀಣ ಭಾಗದಲ್ಲಿ 30 ದಿನದೊಳಗೆ ಗ್ರಾಹಕರು ಕೋರುವ ಹೊಸ ವಿದ್ಯುತ್‌ ಸಂಪರ್ಕ, ಬದಲಾವಣೆ, ರದ್ದತಿ ಸೇವೆ ನೀಡಬೇಕು.

- ಮೀಟರ್‌ ಇಲ್ಲದೆ ಯಾವುದೇ ಹೊಸ ಸಂಪರ್ಕ ನೀಡುವಂತಿಲ್ಲ. ಮೀಟರ್‌ಗಳು ಸ್ಮಾರ್ಟ್‌ ಪ್ರಿ-ಪೇಮೆಂಟ್‌ ಮೀಟರ್‌ ಆಗಿರಬೇಕು ಅಥವಾ ಸಾಮಾನ್ಯ ಪ್ರಿ-ಪೇಮೆಂಟ್‌ ಮೀಟರ್‌ ಆಗಿರಬೇಕು.

- ಗ್ರಾಹಕರಿಗೆ ದಿನದ 24 ಗಂಟೆ ನಿರಂತರ ವಿದ್ಯುತ್‌ ನೀಡಬೇಕು. ಆದರೆ, ಕೃಷಿ ಮುಂತಾದ ಚಟುವಟಿಕೆಗಳಿಗೆ ನೀಡುವ ವಿದ್ಯುತ್‌ನ ಅವಧಿ ಕಡಿತಗೊಳಿಸಲು ಆಯೋಗಕ್ಕೆ ಅಧಿಕಾರವಿದೆ.

- ಮನೆಯಲ್ಲೇ ವಿದ್ಯುತ್‌ ಉತ್ಪಾದಿಸುವ ಗ್ರಾಹಕರೂ ವಿದ್ಯುತ್‌ ಗ್ರಾಹಕರೆಂದೇ ಪರಿಗಣಿಸಲ್ಪಡಬೇಕು. ಅವರಿಗೆ ಸಾಮಾನ್ಯ ಗ್ರಾಹಕರಿಗಿರುವ ಎಲ್ಲಾ ಹಕ್ಕುಗಳಿರುತ್ತವೆ.