ವೈದ್ಯರು ಮೆದುಳು ನಿಷ್ಕ್ರಿಯವಾಗಿದೆ ಎಂದು ಹೇಳಿದ್ದ 50 ವರ್ಷದ ಮಹಿಳೆಯನ್ನು ಆಂಬ್ಯುಲೆನ್ಸ್‌ನಲ್ಲಿ ಮನೆಗೆ ಕರೆತರುವಾಗ, ವಾಹನವು ರಸ್ತೆಗುಂಡಿಗೆ ಬಿದ್ದಿದೆ. ಈ ಆಘಾತದಿಂದಾಗಿ ಮಹಿಳೆ ಮತ್ತೆ ಉಸಿರಾಡಲು ಆರಂಭಿಸಿ, ನಂತರದ ಚಿಕಿತ್ಸೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಅಚ್ಚರಿಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸಾಮಾನ್ಯವಾಗಿ ರಸ್ತೆಗುಂಡಿಗಳು ಜನರಿಗೆ ತೊಂದರೆ ನೀಡುವ ಸಮಸ್ಯೆಯಾಗಿ ಪರಿಗಣಿಸಲ್ಪಡುತ್ತವೆ. ಆದರೆ ಇದೇ ಗುಂಡಿಯೊಂದು ಮಹಿಳೆಯೊಬ್ಬರ ಜೀವ ಉಳಿಸಲು ಕಾರಣವಾದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ಬರೇಲಿ–ಹರಿದ್ವಾರ ರಾಷ್ಟ್ರೀಯ ಹೆದ್ದಾರಿ (NH-74)ಯಲ್ಲಿನ ಗುಂಡಿಗೆ ಆಂಬ್ಯುಲೆನ್ಸ್ ಬಿದ್ದ ಕಾರಣ, ವೈದ್ಯರು ಮೆದುಳು ನಿಷ್ಕ್ರೀಯವಾಗಿದೆ ಎಂದು ಹೇಳಿದ್ದ ಮಹಿಳೆ ಅಚ್ಚರಿಯ ರೀತಿಯಲ್ಲಿ ಮತ್ತೆ ಜೀವಂತವಾಗಿರುವ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಘಟನೆ ಉತ್ತರ ಪ್ರದೇಶದ ಪಿಲಿಭಿಟ್ ಜಿಲ್ಲೆಯಲ್ಲಿ ನಡೆದಿದ್ದು 50 ವರ್ಷದ ವಿನೀತಾ ಶುಕ್ಲಾ ಮರುಜೀವ ಪಡೆದ ಮಹಿಳೆಯಾಗಿದ್ದಾರೆ. ವಿನೀತಾ ಅವರು ಪಿಲಿಭಿಟ್‌ನ ನ್ಯಾಯಾಂಗ ನ್ಯಾಯಾಲಯಗಳ ನಕಲು ವಿಭಾಗದಲ್ಲಿ ಹಿರಿಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 22ರಂದು ಮನೆಯಲ್ಲೇ ಕೆಲಸ ಮಾಡುತ್ತಿದ್ದ ವೇಳೆ ಅವರು ಹಠಾತ್ತನೆ ಪ್ರಜ್ಞೆ ತಪ್ಪಿ ಬಿದ್ದರು.

ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಆದರೆ ನಿರೀಕ್ಷೆ ಇಲ್ಲ

ಕುಟುಂಬದವರು ತಕ್ಷಣವೇ ಅವರನ್ನು ಪಿಲಿಭಿಟ್‌ನ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಆದರೆ ಅವರ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚು ಸೌಲಭ್ಯಗಳಿರುವ ಬರೇಲಿಯ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದರು. ಬಳಿಕ ಅವರನ್ನು ಬರೇಲಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಆದರೆ ವೈದ್ಯರು ವಿನೀತಾ ಅವರ ಮೆದುಳು ಕಾರ್ಯನಿರ್ವಹಣೆ ಬಹುತೇಕ ನಿಂತಿದೆ ಎಂದು ತಿಳಿಸಿ, ಬದುಕುಳಿಯುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಕುಟುಂಬಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬದವರು ಭಾರೀ ನೋವಿನಲ್ಲಿ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳನ್ನು ಕೂಡ ಆರಂಭಿಸಿದ್ದರಂತೆ ಈ ಬಗ್ಗೆ ವಿನೀತಾ ಅವರ ಪತಿ ಕುಲದೀಪ್ ಕುಮಾರ್ ಶುಕ್ಲಾ ಹೇಳಿದ್ದಾರೆ.

ಮನೆಗೆ ಕರೆತರುತ್ತಿದ್ದಾಗ ಸಂಭವಿಸಿದ ಅಚ್ಚರಿ ಘಟನೆ

ಬದುಕುಳಿಯುವ ಯಾವುದೇ ಭರವಸೆಯಿಲ್ಲದ ಹಿನ್ನೆಲೆಯಲ್ಲಿ ಫೆಬ್ರವರಿ 24ರಂದು ವಿನೀತಾ ಅವರನ್ನು ಆಂಬ್ಯುಲೆನ್ಸ್ ಮೂಲಕ ಮನೆಗೆ ಕರೆತರುತ್ತಿದ್ದರು. ಈ ವೇಳೆ ಬರೇಲಿ–ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯ ಹಫೀಜ್‌ಗಂಜ್ ಸಮೀಪದ ಹಾನಿಗೊಳಗಾದ ರಸ್ತೆಯಲ್ಲಿ ಆಂಬ್ಯುಲೆನ್ಸ್ ದೊಡ್ಡ ಗುಂಡಿಗೆ ದೊಪ್ಪನೆ ಬಿತ್ತು. ಗುಂಡಿಗೆ ಬಿದ್ದ ಪರಿಣಾಮ ಆಂಬ್ಯುಲೆನ್ಸ್‌ಗೆ ತೀವ್ರ ಜರ್ಕ್ ಉಂಟಾಯಿತು. ಆ ಕ್ಷಣಗಳಲ್ಲೇ ಅಚ್ಚರಿಯ ರೀತಿಯಲ್ಲಿ ವಿನೀತಾ ಮತ್ತೆ ಉಸಿರಾಟ ಆರಂಭಿಸಿದರು. ಈ ಅನಿರೀಕ್ಷಿತ ಬೆಳವಣಿಗೆ ಕುಟುಂಬದವರಿಗೆ ಅಚ್ಚರಿ ಮೂಡಿಸಿತು.

‘ಪವಾಡಕ್ಕಿಂತ ಕಡಿಮೆ ಇಲ್ಲ’

ಈ ಬಗ್ಗೆ ಮಾತನಾಡಿದ ವಿನೀತಾ ಅವರ ಪತಿ ಕುಲದೀಪ್ ಕುಮಾರ್ ಶುಕ್ಲಾ, “ಆಂಬ್ಯುಲೆನ್ಸ್ ಗುಂಡಿಗೆ ಡಿಕ್ಕಿ ಹೊಡೆದ ಬಳಿಕ ನನ್ನ ಪತ್ನಿ ಮತ್ತೆ ಉಸಿರಾಡಲು ಆರಂಭಿಸಿದರು. ನಾನು ತಕ್ಷಣವೇ ಮನೆಯವರಿಗೆ ಕರೆ ಮಾಡಿ ಅಂತ್ಯಕ್ರಿಯೆಯ ಸಿದ್ಧತೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ತಿಳಿಸಿದೆ. ಇದು ಪವಾಡಕ್ಕಿಂತ ಕಡಿಮೆ ಅಲ್ಲ,” ಎಂದು ಹೇಳಿದ್ದಾರೆ.

ಮತ್ತೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

ಅದಾದ ಬಳಿಕ ವಿನೀತಾ ಅವರನ್ನು ತಕ್ಷಣವೇ ಪಿಲಿಭಿಟ್‌ನ ನ್ಯೂರೋಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರು. ಕೆಲವು ದಿನಗಳ ಚಿಕಿತ್ಸೆ ಬಳಿಕ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ವಿನೀತಾ ಇದೀಗ ಎಚ್ಚರವಾಗಿದ್ದು ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಿದ್ದಾರೆ ಎಂದು ಅವರ ಪತಿ ತಿಳಿಸಿದ್ದಾರೆ. ಸೋಮವಾರ ಅವರು ಮನೆಗೆ ಮರಳಿದ್ದಾರೆ.

ವೈದ್ಯಕೀಯ ವಿವರಣೆ

ನ್ಯೂರೋಸಿಟಿ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ. ರಾಕೇಶ್ ಸಿಂಗ್ ಅವರು, ಚಿಕಿತ್ಸೆ ಆರಂಭಿಸುವ ಮೊದಲು ಬರೇಲಿಯ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ಹೇಳಿದರು. ಆ ಸಮಯದಲ್ಲಿ ವಿನೀತಾ ಅವರ ಮೆದುಳಿನ ಕಾಂಡದ ಪ್ರತಿವರ್ತನೆಗಳು ಕಾಣಿಸದ ಸ್ಥಿತಿಯಲ್ಲಿದ್ದು, ಗ್ಲಾಸ್ಗೋ ಕೋಮಾ ಮಾಪಕದಲ್ಲಿ ಕೇವಲ 3 ಅಂಕ ಮಾತ್ರ ದಾಖಲಾಗಿತ್ತು. ಸಾಮಾನ್ಯವಾಗಿ ಈ ಮಾಪಕದಲ್ಲಿ 15 ಅಂಕಗಳು ಇದ್ದರೆ ಆರೋಗ್ಯಕರ ಪ್ರತಿಕ್ರಿಯೆ ಎನ್ನಲಾಗುತ್ತದೆ.

ಇದಲ್ಲದೆ ಅವರ ಕಣ್ಣುಗಳ ಕರ್ಣಿಕೆಗಳು ಹಿಗ್ಗಿದ್ದವು. ಪರೀಕ್ಷೆಗಳ ವೇಳೆ ಅವರ ರಕ್ತಪ್ರವಾಹ ಮತ್ತು ದುಗ್ಧರಸ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ನರವಿಷ ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆ ನೀಡಿದ ಪರಿಣಾಮ ಅವರು ಚೇತರಿಸಿಕೊಳ್ಳಲು ಸಾಧ್ಯವಾಯಿತು ಎಂದು ವೈದ್ಯರು ಹೇಳಿದ್ದಾರೆ.

ಒಟ್ಟಿನಲ್ಲಿ, ವೈದ್ಯರು ಬದುಕುಳಿಯುವ ಭರವಸೆಯೇ ಇಲ್ಲ ಎಂದು ಹೇಳಿದ್ದ ಮಹಿಳೆ, ಆಂಬ್ಯುಲೆನ್ಸ್ ಗುಂಡಿಗೆ ಡಿಕ್ಕಿ ಹೊಡೆದ ನಂತರ ಮತ್ತೆ ಉಸಿರಾಡಲು ಆರಂಭಿಸಿ ಬದುಕುಳಿದಿರುವುದು ವೈದ್ಯಕೀಯ ಕ್ಷೇತ್ರದಲ್ಲೇ ಅಪರೂಪದ ಹಾಗೂ ಆಶ್ಚರ್ಯಕಾರಿ ಘಟನೆ ಎಂದು ಹೇಳಲಾಗುತ್ತಿದೆ.