ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಗಡುವು ಸಮೀಪಿಸುತ್ತಿದ್ದರೂ, ಕಾಮಗಾರಿಯಲ್ಲಿ ನಿಧಾನಗತಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಇಲಾಖೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಗತಿ ವರದಿ ಕೇಳಿದ್ದು, ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಿಸಿದೆ.
ಬೆಂಗಳೂರು (ಅ.17): ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ವ್ಯಾಪಕವಾಗಿ ಹರಡಿರುವ ಭಯಾನಕ ಗುಂಡಿಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಗಡುವಿನ (Dead Line) ನಂತರವೂ ಕಳಪೆ ಪ್ರಗತಿ ಕಂಡುಬಂದಿರುವ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಇಲಾಖೆಯು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳಿಂದ ವರದಿ ಕೇಳಿದೆ.
ಅಕ್ಟೋಬರ್ 31ರೊಳಗೆ ಬೆಂಗಳೂರಿನ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಬಿಎ ಅಧಿಕಾರಿಗಳಿಗೆ ನಿಗದಿತ ಅವಧಿ (Dead Line) ನೀಡಿದ್ದರು. ಆದರೆ, ಮುಖ್ಯಮಂತ್ರಿಯವರ ಆದೇಶಕ್ಕೂ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ರಸ್ತೆಗಳು ಇನ್ನೂ ಅಪಾಯಕಾರಿ ಗುಂಡಿಗಳಿಂದ ತುಂಬಿವೆ. ಬೆಂಗಳೂರಿನಲ್ಲಿ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ನಿಗದಿತ ವೇಗದಲ್ಲಿ ಆಗುತ್ತಿಲ್ಲ.
ಇದರಿಂದಾಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿಗಳ ಗಡುವು ಸಮೀಪಿಸುತ್ತಿದ್ದರೂ ಕೆಲಸದ ಪ್ರಗತಿ ಕಳಪೆಯಾಗಿರುವ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಗತಿ ವರದಿ ಕೇಳಿದ ನಗರಾಭಿವೃದ್ಧಿ ಇಲಾಖೆ:
ನಗರಾಭಿವೃದ್ಧಿ ಇಲಾಖೆಯು ಪತ್ರದಲ್ಲಿ, ಮುಖ್ಯಮಂತ್ರಿಗಳು ನಿಗದಿಪಡಿಸಿದ್ದ ಅವಧಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಎಷ್ಟು ನಡೆದಿದೆ, ಪ್ರಸ್ತುತ ಪ್ರಗತಿಯೇನು ಮತ್ತು ಉಳಿದ ಕೆಲಸವನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಕೈಗೊಂಡಿರುವ ಕ್ರಮಗಳೇನು ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದೆ. ಅಕ್ಟೋಬರ್ 31ರೊಳಗೆ ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವಂತೆ ಸಿಎಂ ಆದೇಶಿಸಿದ್ದರು. ಆದರೆ, ಅಧಿಕಾರಿಗಳು ಆ ಆದೇಶವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಈ ಬಗ್ಗೆ ತುರ್ತು ಕ್ರಮ ಕೈಗೊಂಡು ಕಾಮಗಾರಿ ನಡೆಸಬೇಕು' ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ನಗರಾಭಿವೃದ್ಧಿ ಇಲಾಖೆಯ ವರದಿ ಕೇಳಿರುವುದು ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಿಸಿದೆ. ಮುಖ್ಯಮಂತ್ರಿಗಳ ಆದೇಶವನ್ನು ನಿರ್ಲಕ್ಷಿಸಿದ ಅಧಿಕಾರಿಗಳ ವಿರುದ್ಧ ಗಡುವು ಮುಗಿದ ನಂತರ ಸೂಕ್ತ ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಮುಂದಿನ ಕೆಲವೇ ದಿನಗಳಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಮತ್ತಷ್ಟು ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ.
