Asianet Suvarna News Asianet Suvarna News

Shaurya Chakra Award: ಕನ್ನಡಿಗ ಹುತಾತ್ಮ ಯೋಧ ಕಾಶಿರಾಯ್‌ಗೆ ಶೌರ್ಯ ಪ್ರಶಸ್ತಿ

*  ತಮ್ಮ ಪ್ರಾಣ ಒತ್ತೆಯಿಟ್ಟು ತನ್ನ ಪಡೆ ರಕ್ಷಿಸಿದ್ದ ಕಾಶಿರಾಯ್ 
*  ಕಾಶಿರಾಯ್ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರು
*  ಕಾಶಿರಾಯ್ ಕರ್ನಾಟಕದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಉಕ್ಕಲಿ ಗ್ರಾಮದವರು

Posthumous Shaurya Chakra Award to Kannadiga Martyar Soldier Kashiraya grg
Author
Bengaluru, First Published Jan 26, 2022, 10:26 AM IST

ನವದೆಹಲಿ(ಜ.26):  2021ರ ಜುಲೈ 1ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಜತೆ ಹೋರಾಡಿಪ್ರಾಣತ್ಯಾಗ ಮಾಡಿದ ಕರ್ನಾಟಕದ(Karnataka) ಯೋಧ ಕಾಶಿರಾಯ್(Kashiraya) ಬಮ್ಮನಳ್ಳಿ ಅವರಿಗೆ ಕೇಂದ್ರ ಸರ್ಕಾರ(Central Government) ಮರಣೋತ್ತರವಾಗಿ ಶೌರ್ಯ(Shaurya Chakra Award) ಪ್ರಶಸ್ತಿ ಪ್ರಕಟಿಸಿದೆ.

ಹುತಾತ್ಮ ಕಾಶಿರಾಯ್‌ಗೆ ಶೌರ್ಯ ಪುರಸ್ಕಾರ: 

ಜಮ್ಮು- ಕಾಶ್ಮೀರದ(Jammu Kashmir) ಪುಲ್ವಾಮಾ(Pulwama) ಜಿಲ್ಲೆಯಲ್ಲಿ ಉಗ್ರರು(Terrorist) ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ 2021ರ ಜು.1ರಂದು ಸೇನಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ಕಾರ್ಯಾಚರಣೆ ಮುಂದಾಳತ್ವವನ್ನು 44ನೇ ರಾಷ್ಟ್ರೀಯ ರೈಫಲ್ಸ್‌ ಬೆಟಾಲಿಯನ್ನ 37 ವರ್ಷದ ಹವಾಲ್ದಾರ್ ಕಾಶಿರಾಯ್ ಬಮ್ಮನಳ್ಳಿ ಅವರು ವಹಿಸಿಕೊಂಡಿದ್ದರು.

ವಿಜಯಪುರ: ಮಣ್ಣಲ್ಲಿ ಮಣ್ಣಾದ ಭಾರತಾಂಬೆಯ ಹೆಮ್ಮೆಯ ಸುಪುತ್ರ ಕಾಶೀರಾಯ..!

ಈ ವೇಳೆ ಯೋಧರ ಮೇಲೆ ಗ್ರೆನೇಡ್ ಮತ್ತು ಗುಂಡಿನ ದಾಳಿ ಮೂಲಕ ಉಗ್ರರು ಪರಾರಿಯಾಗಲು ಯತ್ನಿಸಿದ್ದರು. ಆಗ ಕಾಶಿರಾಯ್ ಅವರು ಉಗ್ರರ ಮೇಲೆ ದಾಳಿ ನಡೆಸಿ, ಉಗ್ರರು ತಾವು ಅಡಗಿದ್ದ ಮನೆಯಲ್ಲೇ ಉಳಿದುಕೊಳ್ಳುವಂತೆ ಮಾಡಿದ್ದರು. ಆದರೆ ಕೊನೆಗೆ ಭಯೋತ್ಪಾದಕರು ಹವಾಲ್ದಾರ್ ಕಾಶಿರಾಯ್ ಅವರನ್ನು ಗುರಿಯಾಗಿಸಿಕೊಂಡು ನಡೆಸಿದರು. ತೀವ್ರ ಗಾಯಗೊಂಡಿದ್ದರೂ ಅವರು ಓರ್ವ ಉಗ್ರನನ್ನು ಬಲಿಪಡೆದು, ಹುತಾತ್ಮರಾದರು. 

ತನ್ಮೂಲಕ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ತನ್ನ ಪಡೆಯನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ಕಾಶಿರಾಯ್ ಅವರ ಹೆಸರನ್ನು ಮರಣೋತ್ತರ ಶೌರ್ಯ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಕಾಶಿರಾಯ್ ಕರ್ನಾಟಕದ ವಿಜಯಪುರ(Vijayapura) ಜಿಲ್ಲೆಯ ಬಸವನ ಬಾಗೇವಾಡಿಯ ಉಕ್ಕಲಿ ಗ್ರಾಮದವರಾಗಿದ್ದಾರೆ. ಅವರಿಗೆ ಓರ್ವ ಮಗ, ಮಗಳು ಮತ್ತು ಪತ್ನಿಯಿದ್ದಾರೆ.

128 ಸಾಧಕರಿಗೆ ಪದ್ಮ ಗೌರವ: ಯೋಧರಿಗೆ ಶೌರ್ಯ ಪದಕ!

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ದೇಶ- ವಿದೇಶಗಳ 128 ಗಣ್ಯರಿಗೆ ಕೇಂದ್ರ ಸರ್ಕಾರ, ಗಣರಾಜ್ಯೋತ್ಸವದ ಮುನ್ನಾ ದಿನವಾದ ಮಂಗಳವಾರ ಪದ್ಮಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪೈಕಿ 4 ಜನರಿಗೆ ಪದ್ಮವಿಭೂಷಣ, 17 ಜನರಿಗೆ ಪದ್ಮಭೂಷಣ, 107 ಜನರಿಗೆ ಪದ್ಮಶ್ರೀ ನೀಡಲಾಗಿದೆ. ಪುರಸ್ಕೃತರಲ್ಲಿ 34 ಮಹಿಳೆಯರು, 10 ವಿದೇಶಿಯರು/ ಅನಿವಾಸಿ ಭಾರತೀಯರು/ ಭಾರತೀಯ ಮೂಲದ ವಿದೇಶಿಯರು/ ಸಾಗರೋತ್ತರ ಭಾರತೀಯರು ಸೇರಿದ್ದಾರೆ. ಜೊತೆಗೆ 13 ಜನರಿಗೆ ಮರಣೋತ್ತರವಾಗಿ ಗೌರವ ಪ್ರಕಟಿಸಲಾಗಿದೆ.

ಪದ್ಮವಿಭೂಷಣ: 

ಸಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥ ದಿ.ಜ.ಬಿಪಿನ್‌ ರಾವತ್‌, ಬಿಜೆಪಿಯ ಹಿಂದುತ್ವದ ಮುಖವಾಡ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್‌, ಉತ್ತರಪ್ರದೇಶದ ಗೋರಖ್‌ಪುರದ ಗೀತಾ ಪ್ರೆಸ್‌ ಅಧ್ಯಕ್ಷ ದಿ. ರಾಧೇಶ್ಯಾಮ್‌ ಖೇಮ್ಕಾ ಮತ್ತು ಖ್ಯಾತ ಗಾಯಕಿ ಪ್ರಭಾ ಅತ್ರೆ ಅವರಿಗೆ ಪ್ರಸಕ್ತ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ.

ಪದ್ಮಭೂಷಣ: 

ಹಿರಿಯ ಕಾಂಗ್ರೆಸ್‌ ನಾಯಕ ಗುಲಾಂ ನಬೀ ಆಜಾದ್‌, ಬಂಗಾಳದ ಸಿಪಿಎಂ ನಾಯಕ, ಮಾಜಿ ಸಿಎಂ ದಿ.ಬುದ್ಧದೇವ್‌ ಭಟ್ಟಾಚಾರ್ಯ, ಟಾಟಾ ಸನ್ಸ್‌ ಅಧ್ಯಕ್ಷ ನಟರಾಜನ್‌ ಚಂದ್ರಶೇಖರನ್‌, ಮೈಕ್ರೋಸಾಫ್ಟ್‌ ಕಾರ್ಯನಿರ್ವಾಹಕ ಅಧ್ಯಕ್ಷ ಸತ್ಯ ನಾದೆಳ್ಲಾ, ಗೂಗಲ್‌ನ ಸುಂದರ್‌ ಪಿಚೈ, ನಟ ವಿಕ್ಟರ್‌ ಬ್ಯಾನರ್ಜಿ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾದ ಪ್ರಮುಖರು.

ವಿಜಯಪುರ: ಯೋಧ ಕಾಶಿರಾಯನ ಅಂತ್ಯಕ್ರಿಯೆಗೆ ಹರಿದು ಬಂದ ಜನಸಾಗರ

ಪದ್ಮಶ್ರೀ: 

ಖ್ಯಾತ ಗಾಯಕ ಸೋನು ನಿಗಂ, ಚಾಣಕ್ಯ ಧಾರಾವಾಹಿ ಖ್ಯಾತಿಯ ನಿರ್ದೇಶಕ ಚಂದ್ರಪ್ರಕಾಶ್‌ ದ್ವಿವೇದಿ, ಖಂಡು ವಾಂಗ್ಚುಕ್‌ ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಪ್ರಮುಖರು.

ಯೋಧರಿಗೆ ಶೌರ್ಯ ಪದಕ: 

ಜೀವದ ಹಂಗು ತೊರೆದ ಕಾರ್ಯನಿರ್ವಹಿಸಿದ ಯೋಧರಿಗೆ ಕೇಂದ್ರ ಸರ್ಕಾರ ಮಂಗಳವಾರ ವಿವಿಧ ಶೌರ್ಯ ಮತ್ತು ಇತರೆ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪೈಕಿ 12 ಯೋಧರಿಗೆ ಶೌರ್ಯ ಪುರಸ್ಕಾರ, 29 ಪರಮ ವಿಶಿಷ್ಟಸೇವಾ ಪದಕ, 4 ಯೋಧರಿಗೆ ಉತ್ತಮ ಯುದ್ಧ ಸೇವಾ ಪದಕ, 53 ಅತಿ ವಿಶಿಷ್ಟಸೇವಾ ಪುರಸ್ಕಾರ, 13 ಯೋಧರಿಗೆ ಯುದ್ಧ ಸೇವಾ ಪದಕಗಳು ಸೇರಿದಂತೆ 384 ಭದ್ರತಾ ಯೋಧರಿಗೆ ಗೌರವ ಪ್ರಕಟಿಸಲಾಗಿದೆ. ಇದಲ್ಲದೆ 122 ವಿಶಿಷ್ಠ ಸೇವಾ ಪದಕಗಳು, 3 ಸೇನಾ ಶೌರ್ಯ ಪದಕಗಳು, 81 ಸೇನಾ ಶೌರ್ಯ ಪದಕಗಳು, ಇಬ್ಬರಿಗೆ ವಾಯು ಸೇನಾ ಪದಕಗಳು, 40 ಸೇನಾ ಪದಕಗಳು ಸೇರಿದಂತೆ ಸೇನೆಯ ಹಲವು ಯೋಧರಿಗೆ ರಾಷ್ಟ್ರಪತಿ ಕೋವಿಂದ್‌ ಅವರು ಪುರಸ್ಕಾರಗಳನ್ನು ಪ್ರದಾನ ಮಾಡಿ ಗೌರವಿಸಲಿದ್ದಾರೆ.
 

Follow Us:
Download App:
  • android
  • ios