ಪರಿಸರ ನಿಯಮ ಉಲ್ಲಂಘಿಸಿ ನಿರ್ಮಾಣವಾಗುವ ಯೋಜನೆಗಳಿಗೆ, ನಂತರದ ದಿನಗಳಲ್ಲಿ ದಂಡಸಹಿತವಾಗಿ ಅನುಮತಿ ನೀಡುವ ಕೇಂದ್ರ ಸರ್ಕಾರದ ಕ್ರಮವನ್ನು ಮೇ 16ರ ತೀರ್ಪಿನಲ್ಲಿ ಸುಪ್ರೀಂ ನಿರ್ಬಂಧಿಸಿತ್ತು. ಆದರೆ ಈಗ ತೀರ್ಪನ್ನು ಸುಪ್ರೀಂ ಕೋರ್ಟ್‌ ಹಿಂಪಡೆಯಲು ನಿರ್ಧರಿಸಿದೆ.

ನವದೆಹಲಿ : ಪರಿಸರ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗುವ ಯೋಜನೆಗಳಿಗೆ, ನಂತರದ ದಿನಗಳಲ್ಲಿ ದಂಡಸಹಿತವಾಗಿ ಪೂರ್ವಾನ್ವಯವಾಗುವಂತೆ ಅನುಮತಿ ನೀಡುವ ಕೇಂದ್ರ ಸರ್ಕಾರದ ಕ್ರಮವನ್ನು ಮೇ 16ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ನಿರ್ಬಂಧಿಸಿತ್ತು. ಆದರೆ ಈಗ ತಾನೇ ನೀಡಿದ್ದ ಮಹತ್ವದ ತೀರ್ಪನ್ನು (ವನಶಕ್ತಿ ತೀರ್ಪು) ಸುಪ್ರೀಂ ಕೋರ್ಟ್‌ ಮಂಗಳವಾರ ಹಿಂಪಡೆಯಲು ನಿರ್ಧರಿಸಿದೆ.

‘ತನ್ನ ಹಿಂದಿನ ತೀರ್ಪಿನಿಂದ 20 ಸಾವಿರ ಕೋಟಿ ರು. ಮೌಲ್ಯದ ಸಾರ್ವಜನಿಕ ಯೋಜನೆಗಳು ಸ್ಥಗಿತಗೊಳ್ಳುವ ಆತಂಕವಿದೆ’ ಎಂದ ಮುಖ್ಯ ನ್ಯಾ। ಬಿ.ಆರ್‌.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠವು ಈ ಹಿಂದೆ ತಾನೇ ನೀಡಿದ್ದ ತೀರ್ಪನ್ನು ಹಿಂಪಡೆಯುವುದಾಗಿ 2:1 ಬಹುಮತದ ಆದೇಶದಲ್ಲಿ ತಿಳಿಸಿದೆ. ನ್ಯಾ। ಗವಾಯಿ ಮತ್ತು ನ್ಯಾ। ವಿನೋದ್‌ ಚಂದ್ರನ್‌ ಅವರು ಪುನರ್‌ ಪರಿಶೀಲನೆ ಪರವಾಗಿದ್ದರೆ, ನ್ಯಾ। ಉಜ್ಜಲ್‌ ಭುಯಾನ್‌ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ವನಶಕ್ತಿ ತೀರ್ಪು ಎಂದೇ ಖ್ಯಾತಿಪಡೆದ್ದ ಮೇ 16ರ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸುಮಾರು 40 ಪುನರ್‌ ಪರಿಶೀಲನೆ ಅರ್ಜಿ ವಿಚಾರಣೆ ನಡೆಸಿದ ಪೀಠ ಈ ಪರಿಷ್ಕೃತ ಆದೇಶ ಹೊರಡಿಸಿದೆ.

ಮೇ 16ರ ತೀರ್ಪು ಏನು?:

ನ್ಯಾ. ಎ.ಎಸ್‌.ಓಕಾ (ಈಗ ನಿವೃತ್ತ) ಮತ್ತು ನ್ಯಾ. ಉಜ್ಜಲ್‌ ಭುಯಾನ್‌ ಅವರಿದ್ದ ಪೀಠವು ಮೇ 16ರಂದು ಐತಿಹಾಸಿಕ ತೀರ್ಪು ನೀಡಿತ್ತು. ‘ಪರಿಸರ ನಿಯಮಗಳನ್ನು ಉಲ್ಲಂಘಿಸುವ ಯೋಜನೆಗಳಿಗೆ, ನಿರ್ಮಾಣ ಕಾಮಗಾರಿ ಆರಂಭವಾದ ನಂತರ ಪರಿಸರ, ಅರಣ್ಯ ಸಚಿವಾಲಯ ಮತ್ತು ಇತರೆ ಪ್ರಾಧಿಕಾರಗಳು ಪೂರ್ವಾನ್ವಯವಾಗುವಂತೆ (ಪ್ರೀ ಡೇಟೆಡ್‌) ದಂಡ ಸಹಿತ ಅನುಮತಿ ನೀಡಬಹುದು’ ಎಂಬ ಕೇಂದ್ರ ಸರ್ಕಾರದ ನಿಯಮ ರದ್ದು ಮಾಡಿತ್ತು. ಅದನ್ನು ಐತಿಹಾಸಿಕ ತೀರ್ಪು ಎಂದು ಪರಿಗಣಿಸಲಾಗಿತ್ತು. ಮಾಲಿನ್ಯ ಮುಕ್ತ ವಾತಾವರಣದಲ್ಲಿ ಬದುಕುವ ಹಕ್ಕು ಸಂವಿಧಾನದಲ್ಲಿ ನೀಡಲಾದ ಮೂಲಭೂತ ಹಕ್ಕಿನ ಭಾಗ

ಈಗ ತೀರ್ಪು ವಾಪಸ್:

ಈ ತೀರ್ಪಿಗೆ ಆಕ್ಷೇಪಿಸಿದ ನ್ಯಾ। ಗವಾಯಿ ಮತ್ತು ನ್ಯಾ.ಚಂದ್ರನ್‌ ಈ ತೀರ್ಪು ಹಿಂಪಡೆದು ಹೊಸದಾಗಿ ವಿಚಾರಣೆಗೆ ಸೂಕ್ತ ಪೀಠ ನಿಗದಿಗೆ ನಿರ್ಧರಿಸಿದ್ದಾರೆ.

‘ಆ ತೀರ್ಪನ್ನು ಮರುಪರಿಶೀಲಿಸದೇ ಹೋದರೆ 20 ಸಾವಿರ ಕೋಟಿ ಮೌಲ್ಯದ ಸಾರ್ವಜನಿಕ ಯೋಜನೆಗಳು ಬಾಗಿಲು ಮುಚ್ಚಲಿವೆ. ನನ್ನ ತೀರ್ಪಿನಲ್ಲಿ ಮೇ 16ರ ತೀರ್ಪನ್ನು ಹಿಂಪಡೆಯಲು ಒಪ್ಪಿಗೆ ನೀಡಿದ್ದೇನೆ. ಆದರೆ ನನ್ನ ತೀರ್ಪನ್ನು ನನ್ನ ಸಹೋದರ ನ್ಯಾ. ಭುಯಾನ್‌ ಆಕ್ಷೇಪಿಸಿದ್ದಾರೆ’ ಎಂದು ಮುಖ್ಯ ನ್ಯಾ। ಗವಾಯಿ ಅವರು ತೀರ್ಪು ಓದುವ ವೇಳೆ ತಿಳಿಸಿದ್ದಾರೆ.

ಮೇ 16ರಂದು ತೀರ್ಪು ನೀಡಿದ್ದ ಪೀಠದ ಭಾಗವೂ ಆಗಿದ್ದ ನ್ಯಾ. ಭುಯಾನ್‌ ಅವರು ಮಾತ್ರ ತಮ್ಮ ಹಿಂದಿನ ನಿರ್ಧಾರಕ್ಕೆ ಬದ್ದರಾಗಿದ್ದು, ಪರಿಸರ ಕಾನೂನುಗಳಲ್ಲಿ ಪೂರ್ವಾನ್ವಯವಾಗುವಂತೆ ಅನುಮತಿ ನೀಡಲು ಅವಕಾಶವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನಿಯಮ ಉಲ್ಲಂಘಿಸಿದ ಕಂಪನಿಗಳಿಗೆ ಯೋಜನೆ ಆರಂಭವಾದ ಬಳಿಕ ಪೂರ್ವಾನ್ವಯವಾಗುವಂತೆ ಅನುಮತಿ ನೀಡುವುದು ಸರಿಯಲ್ಲ. ಕಾನೂನಿನಲ್ಲಿ ಇದಕ್ಕೆ ಅವಕಾಶವೂ ಇಲ್ಲ. ಈ ರೀತಿಯ ಕ್ರಮ ಪರಿಸರ ನ್ಯಾಯಶಾಸ್ತ್ರ, ಪರಿಸರದ ಪಾಲಿನ ಶಾಪ’ ಎಂದು ಕಿಡಿಕಾರಿದ್ದಾರೆ.

ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪನ್ನು ಪುನರ್‌ ಪರಿಶೀಲಿಸುವಂತೆ ಕೋರಿ ವಿವಿಧ ಕೈಗಾರಿಕೆಗಳು ಹಾಗೂ ಮೂಲಸೌಲಭ್ಯ ಸಂಸ್ಥೆಗಳು, ಸರ್ಕಾರ ಪರ ಕಪಿಲ್‌ ಸಿಬಲ್‌, ಮುಕುಲ್‌ ರೋಹಟಗಿ, ಹಿರಿಯ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ಸಿಜೆಐ ಗವಾಯಿ ನೇತೃತ್ವದ ಪೀಠವು ಅ.9ರಂದು ತೀರ್ಪು ಕಾಯ್ದಿರಿಸಿತ್ತು.

ಮೇ 16ರ ತೀರ್ಪು ಹೇಳಿದ್ದೇನು?

ಸುಪ್ರೀಂ ಕೋರ್ಟಿನ ಮೇ 16ರ ತೀರ್ಪು ಪರಿಸರ ನಿಯಮಗಳನ್ನು ಉಲ್ಲಂಘಿಸುವ ಯೋಜನೆಗಳಿಗೆ ನಂತರ ಪೂರ್ವಾನ್ವಯವಾಗುವಂತೆ ಸರ್ಕಾರ ಪರಿಸರ ಅನುಮತಿ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಮಾಲಿನ್ಯ ಮುಕ್ತ ವಾತಾವರಣದಲ್ಲಿ ಬದುಕುವ ಹಕ್ಕು ಸಂವಿಧಾನದಲ್ಲಿ ನೀಡಲಾದ ಮೂಲಭೂತ ಹಕ್ಕಿನ ಭಾಗ ಎಂದು ಅದು ಹೇಳಿ, ಪರಿಸರ ನಿಯಮ ಉಲ್ಲಂಘಿಸಿದ ಕಂಪನಿಗಳಿಗೆ ನಂತರ ದಂಡ ಸಹಿತ ಅನುಮತಿ ನೀಡುವ ಸಂಬಂಧ 2017ರ ಪರಿಸರ ಸಚಿವಾಲಯದ ಅಧಿಸೂಚನೆ ಹಾಗೂ 2021ರ ಕಚೇರಿ ಜ್ಞಾಪನಾ ಪತ್ರವನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು.

ಸುಪ್ರೀಂ ಆದೇಶದಿಂದ ರಾಜ್ಯದ ವಿಜಯಪುರ ಬಚಾವ್‌

ನವದೆಹಲಿ: ಮೇ 16ರ ಸುಪ್ರೀಂ ಕೋರ್ಟ್‌ ಆದೇಶವು 20 ಸಾವಿರ ಕೋಟಿ ರು. ಮೌಲ್ಯದ ಹಲವು ಯೋಜನೆಗಳಿಗೆ ಸಂಚಕಾರ ತಂದಿತ್ತು. ಕರ್ನಾಟಕದ ವಿಜಯಪುರದಲ್ಲಿ ಹೊಸದಾಗಿ ನಿರ್ಮಿಸಲಾದ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಸಹ ಪರಿಸರ ಅನುಮತಿ ಇಲ್ಲದೆ, ನಿರ್ಮಿಸಲಾಗಿದ್ದು, ಮೇ 16 ರ ತೀರ್ಪಿನ ಪ್ರಕಾರ ಅದನ್ನು ಕೆಡವಬೇಕಿತ್ತು.