Asianet Suvarna News Asianet Suvarna News

ಗಾಂಧಿ ನಾಡು ಪೋರ್‌ಬಂದರ್‌ನಲ್ಲಿ ಕೇಂದ್ರ ಸಚಿವರಿಗೆ ಮಾಜಿ ಶಾಸಕನ ಚಾಲೆಂಜ್

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನಿಸಿದ ನಾಡು ಪೋರ್‌ಬಂದರ್‌ನಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಿದೆ. ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಬದಲಿಸಿದ್ದು, ಬಿಜೆಪಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರಿಗೆ ಟಿಕೆಟ್‌ ನೀಡಿದ್ದರೆ, ಮೋಧ್ವಾಡಿಯಾ ನಿರ್ಗಮನದಿಂದ ನಾವಿಕನಿಲ್ಲದ ನೌಕೆಯಂತಾಗಿರುವ ಕಾಂಗ್ರೆಸ್‌ ಮಾಜಿ ಶಾಸಕ ಲಲಿತ್‌ ವಸೋಯಾ ಅವರಿಗೆ ಟಿಕೆಟ್‌ ನೀಡಿದೆ

Porbandar Lok sabha constituency Union Health Minister Mansukh Mandaviya challenges congres s former MLA Lalit Vasoya akb
Author
First Published Apr 30, 2024, 11:53 AM IST

ಪೋರ್‌ಬಂದರ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನಿಸಿದ ನಾಡು ಪೋರ್‌ಬಂದರ್‌ನಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಿದೆ. ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಬದಲಿಸಿದ್ದು, ಬಿಜೆಪಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರಿಗೆ ಟಿಕೆಟ್‌ ನೀಡಿದ್ದರೆ, ಮೋಧ್ವಾಡಿಯಾ ನಿರ್ಗಮನದಿಂದ ನಾವಿಕನಿಲ್ಲದ ನೌಕೆಯಂತಾಗಿರುವ ಕಾಂಗ್ರೆಸ್‌ ಮಾಜಿ ಶಾಸಕ ಲಲಿತ್‌ ವಸೋಯಾ ಅವರಿಗೆ ಟಿಕೆಟ್‌ ನೀಡಿದೆ. ಇಬ್ಬರ ನಡುವೆ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಮೇ.7ರಂದು ಮತದಾನ ನಡೆಯಲಿದೆ.

ಹೇಗಿದೆ ಬಿಜೆಪಿ ಪರಿಸ್ಥಿತಿ?

ಬಿಜೆಪಿಯು ಹಾಲಿ ಸಂಸದನನ್ನು ಹೊಂದಿದ್ದರೂ ಕ್ಷೇತ್ರದಲ್ಲಿ ಸಮರ್ಪಕ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಕಾರಣ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಆದ ಕಾರಣ ಬಿಜೆಪಿ ಭಾರೀ ಲೆಕ್ಕಾಚಾರ ಮಾಡಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರಿಗೆ ಮಣೆ ಹಾಕಿದೆ. ಮನ್ಸುಖ್‌ ಅವರು ಶಾಸಕರಾಗಿ ಎರಡು ಬಾರಿ ಆಯ್ಕೆಯಾಗಿದ್ದರೂ ಲೋಕಸಭೆಗೆ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ರಾಷ್ಟ್ರಾದ್ಯಂತ ಪ್ರಧಾನಿ ಮೋದಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆಯಾಗಿದ್ದು, ಅವರೂ ಸಹ ಕ್ಷೇತ್ರದಲ್ಲಿ ಬಂದು ರೋಡ್‌ಶೋ ನಡೆಸಿರುವುದು ಹೆಚ್ಚಿನ ಬಲ ತಂದುಕೊಟ್ಟಿದೆ.

Lok Sabha Elections 2024: ಚಾಮರಾಜನಗರದ ಮರುಮತದಾನದಲ್ಲಿ ಕೇವಲ 71 ವೋಟ್‌!

ಜೊತೆಗೆ ಇವರು ಪ್ರಬಲ ಪಾಟೀದಾರ್‌ ಸಮುದಾಯಕ್ಕೆ ಸೇರಿದ್ದು, ಕ್ಷೇತ್ರದ 4 ಲಕ್ಷ ಪಾಟೀದಾರ್‌ ಸಮುದಾಯದ ಮತಗಳು ಬಿಜೆಪಿಗೆ ಬೀಳುವ ಸಾಧ್ಯತೆಯಿದೆ. ಅದರ ಜೊತೆಗೆ ದಲಿತರ ಮತಗಳು ನಿರ್ಣಾಯಕವಾಗಿದ್ದು, ಅವರ ಮತಗಳನ್ನು ಒಲಿಸಿಕೊಂಡಲ್ಲಿ ಅನಾಯಾಸವಾಗಿ ಗೆಲುವು ಸಾಧಿಸಬಹುದು. ಆದರೆ ಕ್ಷೇತ್ರದಲ್ಲಿ ಹಾಲಿ ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ ಎಂಬ ಕೂಗು ಜೋರಾಗಿರುವುದು ಇವರಿಗೆ ಮುಳ್ಳಾಗುವ ಸಾಧ್ಯತೆಯಿದೆ. ಆದರೆ ಪ್ರಭಾವಿ ಕಾಂಗ್ರೆಸ್‌ ನಾಯಕ ಮೋಧ್ವಾಡಿಯಾ ಬಿಜೆಪಿಗೆ ಸೇರ್ಪಡೆಯಾಗಿರುವುದು ಕಾಂಗ್ರೆಸ್‌ ಬಲವನ್ನು ಕುಗ್ಗಿಸಿದ್ದು, ಬಿಜೆಪಿಗೆ ವರವಾಗುವ ಸರ್ವಸಾಧ್ಯತೆಗಳಿವೆ.

ಕಾಂಗ್ರೆಸ್‌ ತಂತ್ರ ಏನು?

ಕಾಂಗ್ರೆಸ್ ಪಕ್ಷವು ಈ ಬಾರಿ ಪ್ರತಿಷ್ಠೆಗೆ ಕಣಕ್ಕಿಳಿದು ಮಾಡು ಇಲ್ಲವೇ ಮಡಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಏಕೆಂದರೆ ಕ್ಷೇತ್ರದಲ್ಲಿ ಕಳೆದ ಎರಡು ಬಾರಿಯಿಂದ 1 ಲಕ್ಷಕ್ಕೂ ಅಧಿಕ ಮತಗಳಿಂದ ಸೋತಿರುವ ಜೊತೆಗೆ ಕ್ಷೇತ್ರದಲ್ಲಿ ಪ್ರಭಾವಿ ಕಾಂಗ್ರೆಸ್‌ ಶಾಸಕರಾಗಿದ್ದ ಮೋಧ್ವಾಡಿಯಾ ಬಿಜೆಪಿಗೆ ಜಿಗಿದಿರುವುದು ಪಕ್ಷದ ಜಂಘಾಬಲವನ್ನು ಉಡುಗಿಸಿದೆ.

ಹೀಗಾಗಿ ಪಕ್ಷವು ಮಾಜಿ ಶಾಸಕ ಲಲಿತ್‌ ವಸೋಯಾ ಅವರಿಗೆ ಮತ್ತೊಮ್ಮೆ ಮಣೆ ಹಾಕಿದೆ. ಇವರು ಪ್ರಬಲ ಪಾಟೀದಾರ್‌ ಸಮುದಾಯಕ್ಕೆ ಸೇರಿದ್ದು, ಜಾತಿ ಲೆಕ್ಕಾಚಾರದಲ್ಲಿ ಮತ ಸೆಳೆಯುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಅದರ ಜೊತೆಗೆ ಬಿಜೆಪಿಯು ಕೇಂದ್ರ ಸರ್ಕಾರದಿಂದ ಮೀನುಗಾರರಿಗೆ ಯಾವುದೇ ತೆರಿಗೆ ರಿಯಾಯಿತಿಗಳನ್ನು ನೀಡದಿರುವುದನ್ನು ಪ್ರಮುಖ ಅಸ್ತ್ರ ಮಾಡಿಕೊಂಡು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದೆ.

3ನೇ ಹಂತದ ಲೋಕ ಸಮರ : 1352 ಅಭ್ಯರ್ಥಿಗಳು ಕಣದಲ್ಲಿ, 244 ಅಭ್ಯರ್ಥಿಗಳಿಗೆ ಕ್ರಿಮಿನಲ್‌ ಹಿನ್ನೆಲೆ

ಜೊತೆಗೆ ಕ್ಷೇತ್ರದಲ್ಲಿ ವ್ಯಾಪಕವಾಗಿ ಹರಡಿರುವ ನಿರುದ್ಯೋಗ, ಅಭಿವೃದ್ಧಿಯ ಮರೀಚಿಕೆಯನ್ನು ಹೋಗಲಾಡಿಸಲು ಬದಲಾವಣೆ ತರುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡುತ್ತಿದೆ. ಆದರೆ ಗೆಲುವಿನ ದಡ ಸೇರಲು ಕಾಂಗ್ರೆಸ್‌ ಭಾರೀ ತ್ರಾಸ ಪಡಬೇಕಾದ ಅಗತ್ಯವಿದೆ ಎಂಬುದಾಗಿ ಸ್ಥಳೀಯ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಸ್ಪರ್ಧೆ ಹೇಗೆ?

ಬಿಜೆಪಿಯು ಪ್ರಧಾನಮಂತ್ರಿ ನರೇಂದ್ರ ಮೋದಿಯ ಅಲೆಯನ್ನು ನೆಚ್ಚಿಕೊಂಡಿದ್ದರೂ ಕ್ಷೇತ್ರದಲ್ಲಿ ಸ್ಥಳೀಯ ಸಮಸ್ಯೆಗಳು ಪ್ರತಿನಿಧಿಸುವ ಸಾಧ್ಯತೆಗಳಿವೆ. ನಿರುದ್ಯೋಗ, ಕೈಗಾರಿಕೆಗಳಿಗೆ ಉತ್ತೇಜನ ನೀಡದಿರುವುದು, ಮೀನುಗಾರರಿಗೆ ಕೇಂದ್ರದಿಂದ ತೆರಿಗೆಯಲ್ಲಿ ರಿಯಾಯಿತಿ ನೀಡದಿರುವುದು, ಸಮರ್ಪಕ ಶಿಕ್ಷಣ ಸಂಸ್ಥೆಗಳ ಕೊರತೆ, ಆಸ್ಪತ್ರೆಗಳ ಕೊರತೆ, ಸ್ಥಗಿತಗೊಂಡಿರುವ ವಿಮಾನ ಮುಂತಾದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಚುನಾವಣಾ ಪ್ರಚಾರ ನಡೆಸುತ್ತಿದ್ದರೆ, ಬಿಜೆಪಿಯು ಮನ್ಸುಖ್‌ ಅವರಲ್ಲಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಗ್ಯಾರಂಟಿಯನ್ನು ನೀಡುತ್ತಾ ಪ್ರಚಾರದಲ್ಲಿ ತೊಡಗಿದೆ. ಒಟ್ಟಿನಲ್ಲಿ ಎರಡೂ ಪಕ್ಷಗಳು ಅಭಿವೃದ್ಧಿ ವಿಚಾರವನ್ನು ಮುನ್ನೆಲೆಯಲ್ಲಿ ಇಟ್ಟುಕೊಂಡು ಪ್ರಚಾರ ನಡೆಸುತ್ತಿದ್ದರೂ ಪ್ರಬಲ ಸಮುದಾಯವಾದ ಪಾಟೀದಾರ್‌ಗಳನ್ನು ಓಲೈಸುವ ನಿಟ್ಟಿನಲ್ಲಿ ಆ ಸಮುದಾಯಕ್ಕೇ ಸೇರಿದ ನಾಯಕರನ್ನು ಅಭಿವೃದ್ಧಿ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ.

ಸ್ಟಾರ್‌ ಕ್ಷೇತ್ರ: ಪೋರ್‌ಬಂದರ್‌

  • ರಾಜ್ಯ: ಗುಜರಾತ್‌
  • ಮತದಾನದ ದಿನ: ಮೇ.7
  • ವಿಧಾನಸಭಾ ಕ್ಷೇತ್ರಗಳು: 7

ಪ್ರಮುಖ ಅಭ್ಯರ್ಥಿಗಳು:

  • ಬಿಜೆಪಿ - ಮನ್ಸುಖ್‌ ಮಾಂಡವೀಯ
  • ಕಾಂಗ್ರೆಸ್‌ - ಲಲಿತ್‌ ವಸೋಯಾ
  • ಬಿಎಸ್‌ಪಿ - ಎನ್‌.ಪಿ ರಾಠೋಡ್‌

2019ರ ಫಲಿತಾಂಶ

  • ಗೆಲುವು: ಬಿಜೆಪಿ - ರಮೇಶ್‌ಭಾಯ್‌ ಧಡುಕ್‌
  • ಸೋಲು: ಕಾಂಗ್ರೆಸ್‌ - ಲಲಿತ್‌ ವಸೋಯಾ
Latest Videos
Follow Us:
Download App:
  • android
  • ios