ರಾಜಕೀಯ ಪಕ್ಷಗಳು ದುರ್ಬಲ ಮಹಿಳೆಯರ ಆಯ್ಕೆ ಮಾಡೋ ಅಭ್ಯಾಸ ಹೊಂದಿವೆ: ಖರ್ಗೆ ಹೇಳಿಕೆಗೆ ಸಂಸತ್ತಲ್ಲಿ ಕೋಲಾಹಲ
ನೂತನ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಕುರಿತು ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪರಿಶಿಷ್ಟ ಜಾತಿಯ ಮಹಿಳೆಯರಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇದೆ ಎಂದು ಹೇಳಿದರು
ನವದೆಹಲಿ (ಸೆಪ್ಟೆಂಬರ್ 19, 2023): ನೂತನ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಕುರಿತು ಚರ್ಚೆ ಎದ್ದಿದೆ. ಈ ವೇಳೆ, ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಸಂಸತ್ತಲ್ಲಿ ಕೋಲಾಹಲ ಎದ್ದಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಬೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನೂತನ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಕುರಿತು ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪರಿಶಿಷ್ಟ ಜಾತಿಯ ಮಹಿಳೆಯರಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇದೆ ಎಂದು ಹೇಳಿದರು. ಮತ್ತು ರಾಜಕೀಯ ಪಕ್ಷಗಳು ದುರ್ಬಲ ಮಹಿಳೆಯರನ್ನು ಆಯ್ಕೆ ಮಾಡುವ ಅಭ್ಯಾಸವನ್ನು ಹೊಂದಿವೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಹೇಳಿಕೆ ನೀಡಿದ್ದು, ಅವರ ಈ ಹೇಳಿಕೆಗಳು ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ಕೇಂದ್ರ ಸಚಿವರು ಅವರ ಹೇಳಿಕೆಯನ್ನು ಆಕ್ಷೇಪಿಸಿದರು.
ಇದನ್ನು ಓದಿ: ಲೋಕಸಭೆಯಲ್ಲಿ ಮಂಡನೆಯಾಯ್ತು ಮಹಿಳಾ ಮೀಸಲಾತಿ ಮಸೂದೆ: ದೇವರು ನನಗೆ ಅವಕಾಶ ಕೊಟ್ಟಿದ್ದಾರೆ ಎಂದ ಪ್ರಧಾನಿ ಮೋದಿ
"ಪರಿಶಿಷ್ಟ ಜಾತಿಯ ಮಹಿಳೆಯರ ಸಾಕ್ಷರತೆ ಪ್ರಮಾಣ ಕಡಿಮೆಯಾಗಿದೆ ಮತ್ತು ಅದಕ್ಕಾಗಿಯೇ ರಾಜಕೀಯ ಪಕ್ಷಗಳು ದುರ್ಬಲ ಮಹಿಳೆಯರನ್ನು ಆಯ್ಕೆ ಮಾಡುವ ಅಭ್ಯಾಸವನ್ನು ಹೊಂದಿವೆ ಮತ್ತು ಅವರು ವಿದ್ಯಾವಂತರು ಹಾಗೂ ಹೋರಾಟ ಮಾಡುವವರನ್ನು ಆಯ್ಕೆ ಮಾಡುವುದಿಲ್ಲ" ಎಂದು ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಧಿಕಾರ ಪಡೆದಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ, ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಶಕ್ತ ಮಹಿಳೆ ಎಂದು ಉಲ್ಲೇಖಿಸಿದ್ದಾರೆ.
"ನಾವು ವಿರೋಧ ಪಕ್ಷದ ನಾಯಕರನ್ನು ಗೌರವಿಸುತ್ತೇವೆ. ಆದರೆ ಎಲ್ಲಾ ಪಕ್ಷಗಳು ಪರಿಣಾಮಕಾರಿಯಲ್ಲದ ಮಹಿಳೆಯರನ್ನು ಆಯ್ಕೆಮಾಡುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ನಾವೆಲ್ಲರೂ ನಮ್ಮ ಪಕ್ಷದಿಂದ, ಪ್ರಧಾನಿಯಿಂದ ಅಧಿಕಾರ ಪಡೆದಿದ್ದೇವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸಶಕ್ತ ಮಹಿಳೆ..." ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರ ಸಚಿವ ಸಂಪುಟ ಸಭೆ ಅಂತ್ಯ, ಮಹಿಳಾ ಮೀಸಲಾತಿ ಮಸೂದೆಗೆ ಗ್ರೀನ್ ಸಿಗ್ನಲ್?
ಇನ್ನು, ತಮ್ಮ ಹೇಳಿಕೆಗೆ ಗದ್ದಲ ಹೆಚ್ಚಾಗುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಲು ಪ್ರಯತ್ನಿಸಿದರು. ಮತ್ತು "ಹಿಂದುಳಿದ, ಎಸ್ಟಿ ಮಹಿಳೆಯರಿಗೆ ಅಂತಹ ಅವಕಾಶಗಳು ಸಿಗುತ್ತಿಲ್ಲ, ನಾವು ಹೇಳುತ್ತಿರುವುದು ಇದನ್ನೇ.." ಎಂದು ಹೇಳಿದರು.
ಮಹಿಳಾ ಮೀಸಲಾತಿ ಮಸೂದೆ ಕುರಿತು ಮೋದಿ ಮಾತು
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯನ್ನು ಉದ್ದೇಶಿಸಿ ಮಹಿಳಾ ಮೀಸಲಾತಿ ಮಸೂದೆ ಕುರಿತು ಮಾತನಾಡಿದ್ದು, "... ಇಂದು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಲಾಗಿದೆ. ಚರ್ಚೆಯ ನಂತರ ಇಲ್ಲಿಯೂ ಬರಲಿದೆ. ಇಂದು ನಾವು ಮಹಿಳಾ ಸಬಲೀಕರಣದತ್ತ ಮಹತ್ವದ ಹೆಜ್ಜೆ ಇಡುತ್ತಿದ್ದೇವೆ..." ಎಂದು ಅವರು ಹೇಳಿದರು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸಹ ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ.