ಅಭಿನಂದನೆಗಳು ಭಾರತ: 100 ಕೋಟಿ ಲಸಿಕೆ ದಾಖಲೆ, RML ಆಸ್ಪತ್ರೆಗೆ ಪಿಎಂ ಮೋದಿ ಭೇಟಿ!
* ವ್ಯಾಕ್ಸಿನೇಷನ್ನಲ್ಲಿ ಭಾರತದ ವಿಶ್ವದಾಖಲೆ
* ದೇಶದಲ್ಲಿ 100 ಕೋಟಿ ಡೋಸ್ ಪೂರ್ಣ
* ಲಸಿಕಾ ಅಭಿಯಾನದಲ್ಲಿ ಭಾರತದ ಹೊಸ ದಾಖಲೆ
* ದೆಹಲಿಯ ಆರ್‌ಎಂಎಲ್ ಆಸ್ಪತ್ರೆಗೆ ಭೇಟಿ ನೀಡಿದ ಮೋದಿ
ನವದೆಹಲಿ(ಅ.21): ಕೊರೋನಾ ವೈರಸ್(Coronavirus) ವಿರುದ್ಧದ ಹೋರಾಟದಲ್ಲಿ ಭಾರತವು ಅಕ್ಟೋಬರ್ 21 ರಂದು ಐತಿಹಾಸಿಕ ಸಾಧನೆಗೈದಿದೆ. ಭಾರತವು 100 ಕೋಟಿ ಲಸಿಕೆ ಹಾಕಿ ಹೊಸತೊಂದು ಅಧ್ಯಾಯ ಸೃಷ್ಟಿಸಿದೆ. ಗುರುವಾರ ಬೆಳಗ್ಗೆ 9.45 ಕ್ಕೆ ಈ ಮೈಲಿಗಲ್ಲು ಸಾಧಿಸಲಾಗಿದ್ದು, ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ(Dr Mansukh Mandaviya) ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ದೇಶದಾದ್ಯಂತ ಸಂಭ್ರಮ ಮನೆ ಮಾಡಿದೆ. ಅತ್ತ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ (RML) ಈ ನಿಮಿತ್ತ ಕಾರ್ಯಕ್ರಮ ನಡೆದಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಇದರಲ್ಲಿ ಭಾಗವಹಿಸಿದ್ದಾರೆ. ಆರ್‌ಎಂಎಲ್‌ನಲ್ಲಿ, 100 ಕೋಟಿಯ ಲಸಿಕೆಯನ್ನು ಬನಾರಸ್‌ನ ದಿವ್ಯಾಂಗ್ ಅರುಣ್ ರಾಯ್‌ಗೆ ನೀಡಲಾಗಿದೆ.
"
ಇದೇ ವೇಳೆ ಪ್ರಧಾನಿ ಮೋದಿ ಕೂಡಾ ಟ್ವೀಟ್ ಮಾಡಿ ಜನರನ್ನು ಅಭಿನಂದಿಸಿದ್ದಾರೆ. ಮೋದಿ ತಮ್ಮ ಟ್ವೀಟ್‌ನಲ್ಲಿ ' ಭಾರತೀಯ ವಿಜ್ಞಾನ, ಉದ್ಯಮ ಮತ್ತು ಸಾಮೂಹಿಕ ಮನೋಭಾವದ ವಿಜಯಕ್ಕೆ 130 ಕೋಟಿ ಭಾರತೀಯರು ಸಾಕ್ಷಿಯಾಗುತ್ತಿದ್ದೇವೆ. 100 ಕೋಟಿ ಲಸಿಕೆಗಳನ್ನು ದಾಟಿದ ಭಾರತಕ್ಕೆ ಅಭಿನಂದನೆಗಳು. ನಮ್ಮ ವೈದ್ಯರು, ದಾದಿಯರು ಮತ್ತು ಈ ಸಾಧನೆ ಮಾಡಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದಿದ್ದಾರೆ.
"
ದೇಶಾದ್ಯಂತ ಸಂಭ್ರಮ
100 ಕೋಟಿ ಲಸಿಕೆಗಳನ್ನು ಪೂರ್ಣಗೊಳಿಸಿದ ಹಿನ್ನೆಲೆ, ಕೇಂದ್ರ ಸರ್ಕಾರವು ವಿವಿಧ ಕಾರ್ಯಕ್ರಮಗಳಿಗೆ ವಿಶೇಷ ಸಿದ್ಧತೆಗಳನ್ನು ಮಾಡಿದೆ. ಈ ಸಾಧನೆಯನ್ನು ವಿಮಾನಗಳು, ಹಡಗುಗಳು, ಬಂದರುಗಳು, ಮೆಟ್ರೋ ರೈಲುಗಳು, ರೈಲ್ವೇ ನಿಲ್ದಾಣಗಳು, ಬಸ್ ನಿಲ್ದಾಣಗಳಲ್ಲಿ ಧ್ವನಿವರ್ಧಕಗಳ ಮೂಲಕ ಘೋಷಿಸಲಾಗುತ್ತಿದೆ. ಕಡಲತೀರಗಳಲ್ಲಿ ಮತ್ತು ಹಡಗಿನಲ್ಲಿ ಈವೆಂಟ್‌ಗಳು ಕೂಡಾ ಏರ್ಪಡಿಸಲಾಗಿದೆ.
ಆರೋಗ್ಯ ಕಾರ್ಯಕರ್ತರ ಮೇಲೆ ಹೂಮಳೆ
ಈ ಸಾಧನೆಯ ಹಿನ್ನೆಲೆ, ಆರೋಗ್ಯ ಕಾರ್ಯಕರ್ತರ ಮೇಲೆ ಆರೋಗ್ಯ ಕೇಂದ್ರಗಳಲ್ಲಿ ಹೂವಿನ ಮಳೆಗರೆಯುವುದರ ಮೂಲಕ ಅಭಿನಂದಿಸಲಾಗುತ್ತದೆ. ವಿಮಾನಯಾನ ಕಂಪನಿ ಸ್ಪೈಸ್ ಜೆಟ್ ತನ್ನ ವಿಮಾನಗಳಲ್ಲಿ 100 ಕೋಟಿ ಲಸಿಕೆಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ಪೋಸ್ಟರ್ ಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಫೋಟೋಗಳೊಂದಿಗೆ ಹಾಕುವುದಾಗಿ ಘೋಷಿಸಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸ್ಪೈಸ್ ಜೆಟ್ ಸಿಎಂಡಿ ಅಜಯ್ ಸಿಂಗ್ ಭಾಗವಹಿಸಲಿದ್ದಾರೆ.
ಟ್ವೀಟ್ ಮಾಡಿದ ಆರೋಗ್ಯ ಸಚಿವ
ಈ ಬಗ್ಗೆ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಕೂಡಾ ಟ್ವೀಟ್ ಮಾಡಿದ್ದು, ಇದು ದೂರದೃಷ್ಟಿಯುಳ್ಳ ಪ್ರಧಾನಿ ನರೇಂದ್ರ ಮೋದಿಯವರ(narendra Modi) ಸಮರ್ಥ ನಾಯಕತ್ವದ ಫಲಿತಾಂಶವಾಗಿದೆ ಎಂದಿದ್ದಾರೆ.
ಕೆಂಪುಕೋಟೆಯಲ್ಲಿ ಹಾರಲಿದೆ ಅತೀ ದೊಡ್ಡ ತ್ರಿವರ್ಣ ಧ್ವಜ
ನೂರು ಕೊಟಿ ಡೋಸ್ ಪೂರೈಸಿರುವ ಹಿನ್ನೆಲೆ ದೇಶದ ಅತಿದೊಡ್ಡ ಖಾದಿ ತ್ರಿವರ್ಣವನ್ನು ಕೆಂಪು ಕೋಟೆಯಲ್ಲಿ ಹಾರಿಸಲಾಗುತ್ತದೆ. ಈ ತ್ರಿವರ್ಣ ಧ್ವಜ 225 ಅಡಿ ಉದ್ದ ಮತ್ತು 150 ಅಡಿ ಅಗಲ ಇರಲಿದೆ. ಇದರ ತೂಕ ಸುಮಾರು 1,400 ಕೆಜಿ ಹೊಂದಿದೆ. ಈ ಹಿಂದೆ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಲೇಹ್‌ನಲ್ಲಿ ಇದೇ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
14623 ಕೋವಿಡ್ ಕೇಸ್, 197 ಸಾವು: ಸಕ್ರಿಯ ಕೇಸು 8 ತಿಂಗಳ ಕನಿಷ್ಠ
ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 14,623 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿಗೆ 197 ಜನರು ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 3.41 ಕೋಟಿಗೆ ಹಾಗೂ ಸಾವು 4.52 ಲಕ್ಷಕ್ಕೆ ಏರಿಕೆಯಾಗಿದೆ.
ಸಕ್ರಿಯ ಪ್ರಕರಣಗಳು 1.78 ಲಕ್ಷಕ್ಕೆ ಇಳಿಕೆಯಾಗಿದ್ದು, ಇದು ಸುಮಾರು 8 ತಿಂಗಳ (229 ದಿನಗಳ) ಕನಿಷ್ಠ ಸಂಖ್ಯೆಯಾಗಿದೆ. ಸತತ 26 ದಿನಗಳಿಂದ ದೈನಂದಿನ ಪ್ರಕರಣಗಳ ಪ್ರಮಾಣ 30 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 5,020 ಸೋಂಕಿತರು ಗುಣಮುಖರಾಗಿದ್ದು, ಗುಣಮುಖ ಪ್ರಮಾಣ ಶೇ.98.15ರಷ್ಟಿದೆ. ಈವರೆಗೆ ದೇಶದಲ್ಲಿ 99.12 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ.