ISB ಹೈದರಾಬಾದ್ 20ನೇ ವರ್ಷ ಸಂಭ್ರಮಾಚರಣೆಯಲ್ಲಿ ಮೋದಿ ಭಾಗಿ ತಮಿಳುನಾಡಿನಲ್ಲಿ 31,400 ಕೋಟಿ ರೂಪಾಯಿ ಯೋಜನೆ ಶಿಲನ್ಯಾಸ ಈ ಪ್ರವಾಸದಲ್ಲಿ 11 ಯೋಜನಗಳಿಗೆ ಚಾಲನೆ ನೀಡಲಿದ್ದಾರೆ ಮೋದಿ 

ನವದೆಹಲಿ(ಮೇ.24): ಜಪಾನ್ ಪ್ರವಾಸ ಮುಗಿಸಿ ಭಾರತಕ್ಕೆ ಮರಳಲಿರುವ ಪ್ರಧಾನಿ ನರೇಂದ್ರ ಮೋದಿ, ಮೇ.26 ರಂದು ಹೈದರಾಬಾದ್ ಹಾಗೂ ಚೆನ್ನೈಗೆ ಭೇಟಿ ನೀಡಲಿದ್ದಾರೆ. ಹೈದರಾಬಾದ್‌ನಲ್ಲಿರುವ ಇಂಡಿಯನ್ ಸ್ಕೂಲ್ ಆಫ್ ಬ್ಯೂಸಿನೆಸ್(ISB )ಗೆ 20 ನೇ ವರ್ಷದ ಸಂಭ್ರಮಾಚರಣೆ ಹಾಗೂ ಪದವಿ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಮೋದಿ, ಬಳಿಕ ಚೆನ್ನೈಗೆ ತೆರಳಿ ಬರೋಬ್ಬರಿ 31,400 ಕೋಟಿ ರೂಪಾಯಿ ಯೋಜನೆ ಶಿಲನ್ಯಾಸ ನೆರವೇರಿಸಲಿದ್ದಾರೆ.

ಹೈದರಾಬಾದ್ ಭೇಟಿ
ಪ್ರಧಾನಿ ಮೋದಿ ಮೇ 26ರಂದು 2 ಗಂಟೆ ಸುಮಾರಿಗೆ ಹೈದರಾಬಾದ್‌ಗೆ ಆಗಮಿಸಲಿದ್ದಾರೆ. ಬಳಿಕ ISB 20ನೇ ವರ್ಷದ ಸಂಭ್ರಮಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಪದವಿ ಸಮಾರಂಭ ಕಾರ್ಯದಲ್ಲಿ ಭಾಷಣ ಮಾಡಲಿದ್ದಾರೆ. 

ಜಪಾನ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆ ಮೋದಿ ಸಭೆ, ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಚರ್ಚೆ!

ಚೆನ್ನೈ ಭೇಟಿ
ಹೈದರಾಬಾದ್‌ನಲ್ಲಿ ISB ಕಾರ್ಯಕ್ರಮದ ಬಳಿಕ ಮೋದಿ, ಚೆನ್ನೈಗೆ ತೆರಳಲಿದ್ದಾರೆ. ಸಂಜೆ 5.45ರ ವೇಳೆಗೆ ಮೋದಿ ಚೆನ್ನೈನಲ್ಲಿ 11 ಯೋಜನೆಗಳಿಗೆ ಶಿಲನ್ಯಾಸ ನೆರವೇರಿಸಲಿದ್ದಾರೆ. ಈ ಯೋಜನೆಗಳ ಒಟ್ಟು ಮೊತ್ತ 31,400 ಕೋಟಿ ರೂಪಾಯಿ. ತಮಿಳುನಾಡಿನ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ನೂತನ ಯೋಜನೆಗಳು ಮಹತ್ತರ ಕೂಡುಗೆ ನೀಡಲಿದೆ.

ಚೆನ್ನೈನಲ್ಲಿ 2,900 ಕೋಟಿ ರೂಪಾಯಿ ಮೊತ್ತದ 5 ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಇದರಲ್ಲಿ 75 ಕಿಲೋಮೀಟರ್ ದೂರದ ಮಧುರೈ-ತೇನಿ(ರೈಲ್ವೆ ಗೇಜ್ ಪರಿವರ್ತನೆ ಯೋಜನೆ) ಸೇರಿದೆ. ಈ ಯೋಜನೆಯಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ತಾಂಬರಂ - ಚೆಂಗಲ್ಪಟ್ಟು ನಡುವಿನ ಮೂರನೇ ರೈಲು ಮಾರ್ಗ, ಇನ್ನು 590 ಕೋಟಿ ರೂಪಾಯಿ ವೆಚ್ಚದ ಉಪನಗರ ರೈಲು ಮಾರ್ಗ ಹಾಗೂ ಸೇವೆಯೂ ಒಳಗೊಂಡಿದೆ.

ETBPNMT ನೈಸರ್ಗಿ ಗ್ಯಾಸ್ ಪೈಪ್‌ಲೈನ್, ತಿರುವಳ್ಳೂರು-ಬೆಂಗಳೂರು ನಡುವಿನ 271 ಕಿಲೋಮೀಟರ್ ದೂರದ ಟ್ರ್ಯಾಕ್ 910 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, 116 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ 1152 ಮನೆಗಳನ್ನು ಉದ್ಘಾಟಿಸಿ ಫಲಾನುಭವಿಗಳಿಗೆ ನೀಡಲಿದ್ದಾರೆ. ಇದರ ಜೊತೆಗೆ 6 ಯೋಜನೆಗಳ ಶಂಕುಸ್ಥಾಪನೆಯನ್ನು ಮೋದಿ ನೆರವೇರಿಸಲಿದ್ದಾರೆ. ಇದರ ವೆಚ್ಚ ಬರೋಬ್ಬರಿ 28,500 ಕೋಟಿ ರೂಪಾಯಿ.

ಎಲ್ಲ ಭಾಷೆಗಳೂ ಭಾರತೀಯತೆಯ ಆತ್ಮ, ಮೋದಿ ಹೇಳಿಕೆ ಸ್ವಾಗತಿಸಿದ ಕಿಚ್ಚ ಸುದೀಪ್!

14,870 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ವೇ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ನಡುವಿನ ಸಾರಿಗೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಇಷ್ಟೇ ಅಲ್ಲ ಬೆಂಗಳೂರು ಹಾಗೂ ಚೆನ್ನೈ ನಡುವಿನ ಪ್ರಯಾಣದ ಸಮಯ 2 ರಿಂದ 3 ಗಂಟೆ ಕಡಿಮೆಯಾಗಲಿದೆ. 

ಜೂನ್ 21ಕ್ಕೆ ಪ್ರಧಾನಿ ಮೋದಿ ಮೈಸೂರಿಗೆ
ಜೂ.21ರ ಯೋಗ ದಿನದ ಮುಖ್ಯ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಕೋವಿಡ್‌ ಸಾಂಕ್ರಾಮಿಕದಿಂದಾಗಿ 2 ವರ್ಷಗಳ ಕಾಲ ವರ್ಚುವಲ್‌ ಆಗಿ ನಡೆಯುತ್ತಿದ್ದ ಕಾರ್ಯಕ್ರಮ ಈ ಬಾರಿ ಭೌತಿಕ ರೂಪದಲ್ಲಿ ನಡೆಯಲಿದೆ ಎಂದು ಕೇಂದ್ರ ಆಯುಷ್‌ ಸಚಿವ ಸರ್ಬಾನಂದ ಸೋನೋವಾಲ್‌ ಹೇಳಿದ್ದಾರೆ.

ಯೋಗ ದಿನಕ್ಕೆ 25 ದಿನಗಳು ಬಾಕಿ ಇರುವಾಗ ಕೌಂಟ್‌ಡೌನ್‌ ಆರಂಭಕ್ಕೋಸ್ಕರ ಮೇ 27ಕ್ಕೆ ಹೈದರಾಬಾದ್‌ನಲ್ಲಿ ಯೋಗ ಪ್ರದರ್ಶನ ನಡೆಸಲಾಗುತ್ತದೆ. ಇದರಲ್ಲಿ ಸುಮಾರು 10 ಸಾವಿರ ಜನ ಭಾಗಿಯಾಗಲಿದ್ದಾರೆ. ಇದಕ್ಕೂ ಮೊದಲು 50 ದಿನ ಬಾಕಿ ಇರುವಾಗ ಮೇ 2ರಂದು ಶಿವದೋಲ್‌ನಲ್ಲಿ ಮತ್ತು 75 ದಿನಗಳು ಬಾಕಿ ಇರುವಾಗ ಏ.7ರಂದು ಕೆಂಪುಕೋಟೆಯಲ್ಲಿ ಯೋಗ ಪ್ರದರ್ಶನ ಆಯೋಜಿಸಲಾಗಿತ್ತು. ಜೂ.21ರಂದು ಮೈಸೂರಿನ ಮುಖ್ಯ ಕಾರ್ಯಕ್ರಮ ಅಷ್ಟೇ ಅಲ್ಲದೇ ಪ್ರಪಂಚದಾದ್ಯಂತ ಯೋಗ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.