ಪ್ರಧಾನಿ ನರೇಂದ್ರ ಮೋದಿ ಅವರು, ನೀಟ್ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಟ್ರಾಫಿಕ್ ತೊಂದರೆಯಾಗಬಾರದು ಎಂಬ ಕಾರಣಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ 45 ನಿಮಿಷಗಳ ಕಾಲ ಕಾದರು. ಪರೀಕ್ಷೆ ಆರಂಭವಾದ ನಂತರವೇ ಅವರು ತಮ್ಮ ನಿವಾಸಕ್ಕೆ ತೆರಳುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೋಲ್ಕತ್ತಾದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ತಕ್ಷಣವೇ ತಮ್ಮ ಮನೆಗೆ ಹೋಗದೇ 45 ನಿಮಿಷ ಏರ್‌ಪೋರ್ಟಲ್ಲೇ ಕಾದ ಪ್ರಸಂಗ ನಡೆದಿದೆ. ಇದಕ್ಕೆ ಕಾರಣ ಮಧ್ಯಾಹ್ನ 2 ಗಂಟೆಗೆ ಆರಂಭವಾಗಬೇಕಿದ್ದ ನೀಟ್‌ ಪರೀಕ್ಷೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋಲ್ಕತಾದಿಂದ ಮಧ್ಯಾಹ್ನ 1:15ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದ ಮೋದಿ ತಕ್ಷಣ ಅಲ್ಲಿಂದ ತಮ್ಮ ನಿವಾಸದತ್ತ ಹೊರಡಲಿಲ್ಲ. ಏಕೆಂದರೆ ನೀಟ್ ಪರೀಕ್ಷೆ 2 ಗಂಟೆಗೆ ಆರಂಭವಾಗಬೇಕಿತ್ತು. ನೀಟ್‌ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಅಷ್ಟರೊಳಗೆ ಪರೀಕ್ಷಾ ಕೇಂದ್ರಕ್ಕೆ ತಲುಪುವ ಧಾವಂತದಲ್ಲಿದ್ದರು.

‘ಹೀಗಿರುವಾಗ ತಾವು ಬೆಂಗಾವಲು ವಾಹನಗಳೊಂದಿಗೆ ಝೀರೋ ಟ್ರಾಫಿಕ್‌ನಲ್ಲಿ ರಸ್ತೆಗಿಳಿದರೆ ಟ್ರಾಫಿಕ್‌ ಸಮಸ್ಯೆಯಾಗಿ, ವಿದ್ಯಾರ್ಥಿಗಳಿಗೆ ತಡವಾಗುವ ಸಂಭವವಿರುತ್ತದೆ ಎಂದು ಮೋದಿ ಮನಗಂಡರು ಹಾಗೂ ಕಾಯುವ ನಿರ್ಧಾರ ಮಾಡಿದರು. ಪರೀಕ್ಷೆ ಶುರುವಾದ ಬಳಿಕ ವಿಮಾನ ನಿಲ್ದಾಣದಿಂದ ಹೊರಟರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುರ್ಖಾ ತೆಗೆಯಲು ಒತ್ತಾಯ

ಅಜ್ಮೇರ್‌ನ ಪರೀಕ್ಷಾ ಕೇಂದ್ರವೊಂದಕ್ಕೆ ಬುರ್ಖಾ ಧರಿಸಿ ನೀಟ್‌ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಅದನ್ನು ತೆಗೆಯುವಂತೆ ಸೂಚಿಸಿದ ಹಾಗೂ ಅದಕ್ಕೆ ಆಕೆ ಹಾಗೂ ಕೆಲವು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿ ಕುಲ್ಸುಂ ಬಾನೋ, ‘ಮೇ 3ರಂದು ನಡೆದಿದ್ದ ಪರೀಕ್ಷೆಗೂ ಇಂತಹ ಬಟ್ಟೆಯನ್ನೇ ಧರಿಸಿದ್ದೆ. ಆಗ ಯಾರೂ ತಡೆದಿರಲಿಲ್ಲ. ಎನ್‌ಟಿಎ ಅನುಮತಿಸಿರುವಾಗ ಇವರು ನಮ್ಮನ್ನು ತಡೆಯಲಾಗದು. ನನಗೆ ಪರೀಕ್ಷೆಗಿಂತ ಬುರ್ಖಾ ಹಾಗೂ ನನ್ನ ಗುರುತೇ ಮುಖ್ಯ’ ಎಂದಳು.

ಪವಿತ್ರ ದಾರಕ್ಕೂ ಆಕ್ಷೇಪ

ಅಹಮದಾಬಾದ್‌ನ ವಸ್ತ್ರಾಪುರವೆಂಬಲ್ಲಿ ಹಿಂದೂ ವಿದ್ಯಾರ್ಥಿಗಳು ಕೈಗೆ ಕಟ್ಟಿಕೊಂಡು ಬಂದಿದ್ದ ಪವಿತ್ರ ದಾರವನ್ನು ಕತ್ತರಿಸಿದ ಹಾಗೂ ಮುಸಲ್ಮಾನ ವಿದ್ಯಾರ್ಥಿನಿಯರ ಬುರ್ಖಾ ತೆಗೆಸಿದ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಪೋಷಕರು ಪ್ರತಿಭಟಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು, ಬುರ್ಕಾ ಮತ್ತು ದಾರ ಧರಿಸಿ ಪರೀಕ್ಷೆ ಬರೆಯಲು ಅನುಮತಿಸಿದರು.

ಹಳೆ ಪ್ರವೇಶಪತ್ರ ಹಿಡಿದು ಬಂದ ವಿದ್ಯಾರ್ಥಿ: ಗೊಂದಲ

ಮರುಪರೀಕ್ಷೆ ಬರೆಯಲೆಂದು ವಿದ್ಯಾರ್ಥಿನಿಯೊಬ್ಬರು ಮೇನಲ್ಲಿ ನಡೆದ ಎಕ್ಸಾಂನ ಪ್ರವೇಶಪತ್ರವನ್ನು ಹಿಡಿದು, ಹಳೆಯ ಕೇಂದ್ರಕ್ಕೆ ಬಂದ ಘಟನೆ ಅಜ್ಮೇರ್‌ನಲ್ಲಿ ನಡೆದಿದೆ. ಪರಿಶೀಲನೆ ವೇಳೆ ಈ ವಿಷಯ ಗಮನಕ್ಕೆ ಬಂದಿದ್ದು, ಆನ್‌ಲೈನ್‌ನಲ್ಲಿ ಚೆಕ್‌ ಮಾಡಿದಾಗ 40 ಕಿ.ಮೀ. ದೂರದೂರಿನಲ್ಲಿ ಪರೀಕ್ಷೆ ಬರೆಯಬೇಕಿದೆ ಎಂಬುದು ತಿಳಿದುಬಂದಿದೆ. ಬಳಿಕ ಶಾಲೆಯ ಕಡೆಯಿಂದಲೇ ವಾಹನದ ವ್ಯವಸ್ಥೆ ಮಾಡಿ ವಿದ್ಯಾರ್ಥಿನಿಯನ್ನು ಸರಿಯಾದ ಕೇಂದ್ರಕ್ಕೆ ಸಕಾಲದಲ್ಲಿ ತಲುಪಿಸಲಾಗಿದೆ.