ಪ್ರಧಾನಿ ಮೋದಿಯವರನ್ನು ನಿಂದಿಸಿದ್ದ ಹುಡುಗಿ ಕ್ಷಮೆಯಾಚಿಸಿದ ನಂತರ, ಮೋದಿ ಆಕೆಯನ್ನು ಕ್ಷಮಿಸುವ ವಿಡಿಯೋ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ, ಇದು ಬರೀ ರೀಲ್ಸ್ ನಾಟಕವೇ ಅಥವಾ ವಿದ್ಯಾರ್ಥಿಗಳ ಮೇಲಿನ ಕೇಸುಗಳನ್ನು ಹಿಂಪಡೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಕೂಡ ಇದನ್ನು ಮೋದಿಯವರ ನಾಟಕ ಎಂದು ಟೀಕಿಸಿದೆ.
ಪುಣೆ: ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಕ್ಕಳನ್ನು ಕ್ಷಮಿಸುವಂತೆ ಪ್ರಧಾನಿ ಮೋದಿ ಮಾಡಿದ ವಿಡಿಯೋಗೆ ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಶನಿವಾರ ಪ್ರತಿಕ್ರಿಯಿಸಿದ್ದು, ‘ನೀವು ರೀಲ್ಸ್ ಮಾತ್ರ ಮಾಡುತ್ತೀರೋ ಅಥವಾ ವಿದ್ಯಾರ್ಥಿಗಳ ಮೇಲಿನ ಕೇಸುಗಳನ್ನು ವಾಪಸ್ ಪಡೆಯುತ್ತೀರೋ?’ ಎಂದು ಪ್ರಶ್ನಿಸಿದ್ದಾರೆ.
ತಮ್ಮ ಸೆಲ್ಫಿ ವಿಡಿಯೋಗಳಲ್ಲಿ ಮೋದಿ, ವಿದ್ಯಾರ್ಥಿಗಳನ್ನು ‘ಫ್ರೆಂಡ್ಸ್’ ಎಂದು ಕರೆದಿದ್ದರು. ಇದನ್ನು ಉಲ್ಲೇಖಿಸಿ ವ್ಯಂಗ್ಯವಾಡಿರುವ ದೀಪ್ಕೆ, ‘ಫ್ರೆಂಡ್, ನೀವು ಮಕ್ಕಳನ್ನು ಕೇವಲ ರೀಲ್‌ಗಳ ಮೂಲಕ ಕ್ಷಮಿಸುತ್ತೀರಾ ಅಥವಾ ಅವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುತ್ತೀರಾ?’ ಎಂದು ಟ್ವೀಟ್ ಮಾಡಿದ್ದಾರೆ.
ಮೋದಿ ನಾಟಕ- ಕಾಂಗ್ರೆಸ್
‘ಮೋದಿ ತಮ್ಮನ್ನು ನಿಂದಿಸಿದ ಯುವಕರನ್ನು ಕ್ಷಮಿಸಿದ್ದೇನೆ ಎಂದು ಹೇಳುವ ಮೂಲಕ ಬಲಿಪಶುವಿನ ನಾಟಕ ಮಾಡುತ್ತಿದ್ದಾರೆ. ಇದರ ಬದಲು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಬೇಕು’ ಎಂದು ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಆಗ್ರಹಿಸಿದ್ದಾರೆ.
ಮೋದಿಯನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದ ಹುಡುಗಿ ಕ್ಷಮೆಯಾಚನೆ
ನವದೆಹಲಿ: ಜಂತರ್ ಮಂತರ್ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವೈರಲ್ ಆಗಿದ್ದ ಹುಡುಗಿ ಶನಿವಾರ ವಿಡಿಯೋ ಮೂಲಕ ದೇಶದ ಕ್ಷಮೆಯಾಚಿಸಿದ್ದಾಳೆ. ಜತೆಗೆ, ಕೆಲವರ ಪ್ರಭಾವಕ್ಕೆ ಒಳಗಾಗಿ ಆ ರೀತಿ ಮಾತಾಡಿದ್ದೆ ಎಂದು ತಿಳಿಸಿದ್ದಾಳೆ.
ಶುಕ್ರವಾರ ರಾತ್ರಿ ಆಕೆಯ ಬೈಗುಳಗಳನ್ನು ಉಲ್ಲೇಖಿಸಿ ವಿಡಿಯೋ ಮಾಡಿದ್ದ ಪ್ರಧಾನಿ, ‘ನನ್ನ ಸ್ವರ್ಗೀಯ ತಾಯಿಯನ್ನು ನಿಂದಿಸಿದ್ದಕ್ಕೆ ನೋವಾಗಿದೆ. ಆದರೆ ಮಕ್ಕಳನ್ನು ಶಿಕ್ಷಿಸುವ ಬದಲು ಸರಿದಾರಿಗೆ ತರುವುದು ನಮ್ಮ ಜವಾಬ್ದಾರಿ’ ಎಂದು ನೊಂದು ನುಡಿದಿದ್ದರು. ಆ ಬೆನ್ನಲ್ಲೇ ಹುಡುಗಿ ಕ್ಷಮೆ ಯಾಚಿಸಿದ್ದಾಳೆ.
‘ನಾನು ಜುಲೈನಲ್ಲಿ ಸ್ನೇಹಿತರೊಂದಿಗೆ ಕನ್ನಾಟ್ ಪ್ಲೇಸ್‌ಗೆ ಹೋಗಿದ್ದೆ. ಅಲ್ಲಿ ಪ್ರಧಾನಿ ವಿರುದ್ಧ ಅವಾಚ್ಯ ಮತ್ತು ಆಕ್ಷೇಪಾರ್ಹ ಭಾಷೆಯನ್ನು ಬಳಸುತ್ತಿದ್ದ ಜನರ ಗುಂಪೊಂದು ಎದುರಾಯಿತು. ಅವರು ನನ್ನ ಮೇಲೆ ಪ್ರಭಾವ ಬೀರಿ, ನಾನೂ ಅದೇ ರೀತಿ ಮಾತಾಡುವಂತೆ ಪ್ರೇರೇಪಿಸಿದರು. ನಾನು ಹಾಗೆಯೇ ಮಾಡಿದೆ. ನಾನು ಇಡೀ ದೇಶದ ಜನರಲ್ಲಿ ನನ್ನನ್ನು ಕ್ಷಮಿಸುವಂತೆ ಕೋರುತ್ತೇನೆ. ನನಗೆ ಕೇವಲ 15 ವರ್ಷ ವಯಸ್ಸು. ಇದೇ ನನ್ನ ಮೊದಲ ಮತ್ತು ಕೊನೆಯ ತಪ್ಪು. ಇಂತಹ ಕೃತ್ಯವನ್ನು ಇನ್ನೆಂದೂ ಮಾಡುವುದಿಲ್ಲ’ ವಿಡಿಯೋದಲ್ಲಿ ತಿಳಿಸಿದ್ದಾಳೆ.
ಇದನ್ನೂ ಓದಿ: 'ಪಿಚ್ಚರ್ ಅಭೀ ಭೀ ಬಾಕಿ ಹೈ' ಎಂದಿದ್ದ CJP ದೀಪ್ಕೆ ಪಿಚ್ಚರ್ ಬಿಟ್ಟೋಯ್ತು: ಕೇಳಿದ ಈ ಪ್ರಶ್ನೆಗೆ ಉತ್ತರವಿಲ್ಲದೇ ಸುಸ್ತಾದ್ರು


