*ಆಪರೇಷನ್ ಗಂಗಾ ಸಾಹಸಿಗಳ ಜೊತೆ ಮೋದಿ ಸಂವಾದ*ರಾಯಭಾರಿ, ಸಚಿವರು, ಸಮುದಾಯ ಸಂಘಟನೆಗಳ ಜೊತೆ ಮಾತುಕತೆ*ಮೋದಿ ಶ್ರಮದಿಂದ ಭಾರತೀಯರು ಸುರಕ್ಷಿತ ವಾಪಸ್: ಜೈಶಂಕರ್*ಉಕ್ರೇನಿಂದ ಬಂದ ವೈದ್ಯ ವಿದ್ಯಾರ್ಥಿಗಳಿಗೆ ಕೆಸಿಆರ್ ಧನಸಹಾಯ ಘೋಷಣೆ
ನವದೆಹಲಿ (ಮಾ. 16): ಯುದ್ಧಪೀಡಿತ ಉಕ್ರೇನ್‌ನಿಂದ ಸಾಹಸಮಯ ರೀತಿಯಲ್ಲಿ 18000ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸಲು ನಡೆಸಲಾದ ಆಪರೇಷನ್ ಗಂಗಾ ಏರ್‌ಲಿಫ್ಟ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವರ ಜೊತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂವಾದ ನಡೆಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಂವಾದದಲ್ಲಿ ವಿವಿಧ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು, ಭಾರತೀಯರ ತೆರವಿಗೆ ನೆರವಾದ ಸಮುದಾಯ ಸಂಘಟನೆಗಳು ಮತ್ತು ತೆರವು ಕಾರ್ಯಾಚರಣೆ ನಡೆದ 4 ದೇಶಗಳಿಗೆ ವಿಶೇಷ ರಾಯಭಾರಿಗಳಾಗಿ ತೆರಳಿದ್ದ ಕೇಂದ್ರ ಸಚಿವರಾದ ಹರದೀಪ್ ಪುರಿ, ಕಿರಣ್ ರಿಜಿಜು, ವಿ.ಕೆ.ಸಿಂಗ್ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ಭಾಗಿಯಾಗಿದ್ದರು.
ಈ ಸಂವಾದದ ವೇಳೆ, ಅತ್ಯಂತ ಸಂಕಷ್ಟದ ಸ್ಥಿತಿಯಲ್ಲೂ 18000ಕ್ಕೂ ಹೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಲ್ಲಿ ನಿಮ್ಮ ಪಾತ್ರ ಬಹುದೊಡ್ಡದು. ಇದಕ್ಕಾಗಿ ನೀವು ಶ್ಲಾಘನಾರ್ಹರು. ಇಂಥ ಕಾರ್ಯಾಚರಣೆ ಇಡೀ ವಿಶ್ವಕ್ಕೆ ಮಾದರಿ ಎಂದು ಪ್ರಧಾನಿ ಮೋದಿ ಅಧಿಕಾರಿಗಳು ಮತ್ತು ಸಚಿವರನ್ನು ಶ್ಲಾಘಿಸಿದರು.
ಉಕ್ರೇನ್‌ಗೆ ವಿಮಾನ ಸಂಚಾರ ಸಾಧ್ಯವಿಲ್ಲದ ಕಾರಣ, ಅಲ್ಲಿ ಸಿಕ್ಕಿಬಿದ್ದಿದ್ದ ಭಾರತೀಯರನ್ನು ನೆರೆಯ ದೇಶಗಳಾದ ಪೋಲೆಂಡ್, ರೊಮೇನಿಯಾ, ಸ್ಲೊವಾಕಿಯಾ, ಮಾಲ್ಡೋವಾ, ಹಂಗೇರಿಗೆ ಕರೆಸಿಕೊಂಡು ಅಲ್ಲಿಂದ ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗಿತ್ತು.
ಇದನ್ನೂ ಓದಿ:Russia Ukraine War: ಉಕ್ರೇನಿಂದ ಬಂದ ವೈದ್ಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಶುರು
ಮೋದಿ ಶ್ರಮದಿಂದ ಭಾರತೀಯರು ಸುರಕ್ಷಿತ ವಾಪಸ್: ಜೈಶಂಕರ್: ಯುದ್ಧಪೀಡಿತ ಉಕ್ರೇನ್‌ನಿಂದ 22,500ಕ್ಕೂ ಹೆಚ್ಚು ಮಂದಿ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಈ ಕಾರಾರಯಚರಣೆಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಮುತುವರ್ಜಿ ವಹಿಸಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಮಂಗಳವಾರ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ನಿರಂತರ ಬಾಂಬ್, ಶೆಲ್ ದಾಳಿ ನಡುವೆಯೂ ಉಕ್ರೇನಿನಿಂದ ಭಾರತೀಯರನ್ನು ಮರಳಿ ಕರೆತಂದಿದ್ದು ಹೇಗೆ ಎಂಬುದನ್ನು ವಿವರಿಸಿದರು.
‘ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ‘ಆಪರೇಷನ್ ಗಂಗಾ’ ಕಾರಾರಯಚರಣೆ ಆರಂಭಿಸಿದೆವು. ರಷ್ಯಾ-ಉಕ್ರೇನ್ ಪಡೆಗಳ ನಿರಂತರ ದಾಳಿ ಮಧ್ಯೆ ಉಕ್ರೇನಿನಾದ್ಯಂತ ಚದುರಿದ್ದ ಭಾರತೀಯರನ್ನು ಕರೆತರುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಆದಾಗ್ಯೂ 22,500 ಭಾರತೀಯರ ಜೊತೆಗೆ 18 ದೇಶಗಳ 147 ವಿದೇಶಿ ನಾಗರಿಕರನ್ನೂ ರಕ್ಷಿಸಲಾಗಿದೆ’ ಎಂದು ತಿಳಿಸಿದರು.
ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೋದಿಮಿರ್ ಜೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಸ್ಥಳಾಂತರ ಪ್ರಕ್ರಿಯೆಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ಪೂರ್ಣ ಪ್ರಕ್ರಿಯೆಯು ಸರ್ಕಾರಿ ಪರಿಶೀಲನೆಗೆ ಒಳಪಟ್ಟಿತ್ತು. ಮೋದಿ ಪ್ರತಿದಿನವೂ ಪರಿಶೀಲನಾ ಸಭೆ ನಡೆಸುತ್ತಿದ್ದರು. ವಿದೇಶಾಂಗ ಇಲಾಖೆಯು ದಿನದ 24 ಗಂಟೆಯೂ ಕಾರ‍್ಯಪ್ರವೃತ್ತವಾಗಿದ್ದು, ಮೇಲ್ವಿಚಾರಣೆ ನಡೆಸಿತು.
ಇದನ್ನೂ ಓದಿ:Russia-Ukraine War: 20 ದಿನವಾದರೂ ನಿಲ್ಲದ ಯುದ್ಧ: ಅಕ್ಷರಶಃ ಸ್ಮಶಾನವಾದ ಉಕ್ರೇನ್..!
ಈ ಸಂದರ್ಭದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ, ರಕ್ಷಣಾ ಸಚಿವಾಲಯ, ಎನ್‌ಡಿಆರ್‌ಎಫ್, ಐಎಎಫ್ ಮತ್ತು ಖಾಸಗಿ ವಿಮಾನಯಾನ ಸಂಸ್ಥೆಗಳು ಸಾಕಷ್ಟುಬೆಂಬಲ ನೀಡಿದವು. ಪರಿಣಾಮ ರೊಮೇನಿಯಾ, ಪೋಲೆಂಡ್ ಮತ್ತು ಹಂಗೇರಿ ಗಡಿಗಳ ಮೂಲಕವಾಗಿ ಏರ್‌ಲಿಫ್ಟ್ ಪ್ರಕ್ರಿಯೆ ನಡೆಯಿತು ಎಂದು ತಿಳಿಸಿದರು.
ಇದೇ ವೇಳೆ ರಷ್ಯಾ-ಉಕ್ರೇನ್ ಬಿಕ್ಕಟ್ಟು ಯುದ್ಧದ ಹಂತಕ್ಕೆ ಹೋಗುವ ಮೊದಲೇ ಭಾರತ ಸಿದ್ಧತೆ ನಡೆಸಿತ್ತು. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಜನವರಿಯಲ್ಲಿಯೇ ನೋಂದಣಿ ಪ್ರಕ್ರಿಯೆ ಆರಂಭಿಸಿತ್ತು. ಪರಿಣಾಮ 20000 ಭಾರತೀಯರು ನೋಂದಣಿಯಾಗಿದ್ದರು. ಈ ಪೈಕಿ 4,000 ವಿದ್ಯಾರ್ಥಿಗಳು ನೇರ ಮತ್ತು ಪರೋಕ್ಷ ವಿಮಾನಗಳ ಮೂಲಕ ಸ್ವದೇಶಕ್ಕೆ ತಲುಪಿದ್ದಾರೆ ಎಂದು ಹೇಳಿದರು.
ಉಕ್ರೇನಿಂದ ಬಂದ ವೈದ್ಯ ವಿದ್ಯಾರ್ಥಿಗಳಿಗೆ ಕೆಸಿಆರ್ ಧನಸಹಾಯ ಘೋಷಣೆ: ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನಿಗೆ ತೆರಳಿದ ತೆಲಂಗಾಣ ಮೂಲದ ವಿದ್ಯಾರ್ಥಿಗಳಿಗೆ ದೇಶದಲ್ಲೇ ಅಧ್ಯಯನ ಮುಂದುವರೆಸಲು ತೆಲಂಗಾಣ ಸರ್ಕಾರವು ಧನಸಹಾಯವನ್ನು ಘೋಷಣೆ ಮಾಡಿದೆ. ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮಂಗಳವಾರ ಈ ಘೋಷಣೆ ಮಾಡಿದ್ದಾರೆ. ಯುದ್ಧ ಪೀಡಿತ ಉಕ್ರೇನಿನಿಂದ ಮರಳಿದ 740 ತೆಲಂಗಾಣದ ವಿದ್ಯಾರ್ಥಿಗಳು ದೇಶದಲ್ಲೇ ವೈದ್ಯಕೀಯ ಶಿಕ್ಷಣ ಮುಂದುವರೆಸುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ.
ಯುದ್ಧ ಪೀಡಿತ ಉಕ್ರೇನಿನಲ್ಲಿ ಸಿಲುಕಿದ 18,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ದೇಶಕ್ಕೆ ಮರಳಿ ಕರೆತರಲಾಗಿತ್ತು. ಭಾರೀ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಉಕ್ರೇನಿಗೆ ವೈದ್ಯಕೀಯ ವ್ಯಾಸಂಗಕ್ಕೆ ತೆರಳುವುದಕ್ಕೆ ವಿವಿಧ ಕಾರಣಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಭಾರತದಲ್ಲಿ ವೈದ್ಯಕೀಯ ಶಿಕ್ಷಣ ದುಬಾರಿಯಾಗಿರುವುದು ಹಾಗೂ ಕಡಿಮೆ ಸೀಟುಗಳ ಲಭ್ಯತೆಯೇ ವಿದ್ಯಾರ್ಥಿಗಳು ಉಕ್ರೇನಿನತ್ತ ಮುಖ ಮಾಡುವುದಕ್ಕೆ ಕಾರಣವಾಗಿದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ವಿದ್ಯಾರ್ಥಿಗಳಿಗೆ ಧನಸಹಾಯ ನೀಡಿ ನೆರವಾಗಲು ಮುಂದಾಗಿದೆ
