*‘ಇಂಡಿಯನ್ ಎಕ್ಸ್‌ಪ್ರೆಸ್’ನಿಂದ 100 ಪ್ರಭಾವಿ ಭಾರತೀಯರ ಪಟ್ಟಿಬಿಡುಗಡೆ*ಅಮಿತ್ ಶಾ ನಂ.2, ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ನಂ.3, ನಡ್ಡಾ ನಂ.4*ಪ್ರಭಾವಿ ಕನ್ನಡಿಗ: ಬಿ.ಎಲ್. ಸಂತೋಷ್ ನಂ.1: ಕರ್ನಾಟಕದ 6 ಮಂದಿಗೆ ಸ್ಥಾನ*ಸಂತೋಷ್, ಹೊಸಬಾಳೆ, ಡಿಕೆಶಿ, ರಾಜೀವ್, ನಿಲೇಕಣಿ, ಜೋಶಿ ಪ್ರಭಾವಿಗಳು
ನವದೆಹಲಿ (ಏ. 01): 2022ನೇ ಸಾಲಿನ ದೇಶದ ‘100 ಪ್ರಭಾವಿ ಭಾರತೀಯ’ರ ಪಟ್ಟಿಯನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ (Indian Express) ಪತ್ರಿಕೆ ಗುರುವಾರ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತಿ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ನಂ.2, ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ನಂ.3 ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ನಂ.4 ಪ್ರಭಾವಿ ವ್ಯಕ್ತಿ ಪಟ್ಟಅಲಂಕರಿಸಿದ್ದಾರೆ.
ನಂತರದ ಸ್ಥಾನಗಳಲ್ಲಿ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಉದ್ಯಮಿ ಅನಿಲ್ ಅಂಬಾನಿ, ಬಿಜೆಪಿ ಮತ್ತೆ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬರುವಲ್ಲಿ ಕಾರಣರಾದ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೇಶದಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಉದ್ಯಮಿ ಗೌತಮ್ ಅದಾನಿ, ದೇಶದ ಭದ್ರತಾ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪಂಜಾಬ್‌ನಲ್ಲೂ ಆಪ್ ಅನ್ನು ಅಧಿಕಾರಕ್ಕೆ ತಂದ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ನೇತಾರ ಅರವಿಂದ ಕೇಜ್ರಿವಾಲ್, ಕೋವಿಡ್ ಹೊಡೆತದ ನಡುವೆ ದೇಶದ ಆರ್ಥಿಕತೆ ಬಲಗೊಳ್ಳಲು ಶ್ರಮಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಥಾನ ಪಡೆದಿದ್ದು, ಟಾಪ್-10ರಲ್ಲಿ ಸ್ಥಾನ ಅಲಂಕರಿಸಿದ್ದಾರೆ.
ಮೋದಿ ನಂ.1: ಕೋವಿಡ್ ಹೊಡೆತದಿಂದ ದೇಶವನ್ನು ಪಾರು ಮಾಡಿದ್ದಕ್ಕೆ, ಲಸಿಕಾಕರಣದ ಯಶಸ್ಸಿಗೆ, ಆರ್ಥಿಕತೆ ಗಟ್ಟಿಗೊಳ್ಳಲು ಶ್ರಮಿಸುತ್ತಿರುವುದಕ್ಕೆ ಹಾಗೂ ಬಿಜೆಪಿ ಇನ್ನಷ್ಟುರಾಜ್ಯಗಳಲ್ಲಿ ಬಲಗೊಳ್ಳುವಂತೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಅತಿ ಪ್ರಭಾವಿ ವ್ಯಕ್ತಿ ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ: Global Approval Rating: ಈ ವರ್ಷವೂ ಪ್ರಧಾನಿ ಮೋದಿ ವಿಶ್ವದ ನಂ.1 ಜನಪ್ರಿಯ ನಾಯಕ
ಇನ್ನು ಬಿಜೆಪಿ ಅಧ್ಯಕ್ಷ ಹುದ್ದೆ ತೊರೆದಿದ್ದರೂ ಪಕ್ಷದ ನೀತಿ ನಿರ್ಣಯಗಳಲ್ಲಿ ಹಾಗೂ ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದಕ್ಕೆ ಅಮಿತ್ ಶಾ ನಂ.2 ಪ್ರಭಾವಿಯಾಗಿ ಹೊರಹೊಮ್ಮಿದ್ದಾರೆ. ಮೋದಿ ಸರ್ಕಾರಕ್ಕೆ ಬೆಂಬಲವಾಗಿ ನಿಂತಿರುವುದಕ್ಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ನಂ.3 ಹಾಗೂ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜಯಕ್ಕೆ ಶ್ರಮಿಸಿದ್ದಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ನಂ.4 ಪ್ರಭಾವಿಯಾಗಿ ಸ್ಥಾನ ಪಡೆದಿದ್ದಾರೆ.
ಪ್ರಭಾವಿ ಕನ್ನಡಿಗ: ಬಿ.ಎಲ್. ಸಂತೋಷ್ ನಂ.1: 2022ನೇ ಸಾಲಿನ ದೇಶದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ ಪ್ರಕಟಿಸಿದ್ದು, ಇದರಲ್ಲಿ ಕರ್ನಾಟಕದ 6 ಮಂದಿ ಸ್ಥಾನ ಪಡೆದಿದ್ದಾರೆ. ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾದ ಬಿ.ಎಲ್. ಸಂತೋಷ್ ಅವರು ಕನ್ನಡಿಗರ ಪೈಕಿ ನಂ.1 ಆಗಿ ಹೊರಹೊಮ್ಮಿದ್ದಾರೆ.
ನಂತರದ ಸ್ಥಾನಗಳಲ್ಲಿ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್, ಇನ್ಫೋಸಿಸ್ ಕಾರ್ಯನಿರ್ವಾಹಕೇತರ ಅಧ್ಯಕ್ಷ ನಂದನ್ ನಿಲೇಕಣಿ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಇದ್ದಾರೆ.
ಸಂತೋಷ್ ನಂ.1 ಕನ್ನಡಿಗ: ಸಂತೋಷ್ ಅವರು ದೇಶದ 14ನೇ ಪ್ರಭಾವಿಯಾಗಿ ಹೊರಹೊಮ್ಮಿದ್ದು, ಕನ್ನಡಿಗರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ಸಲ 16ನೇ ರಾರಯಂಕ್‌ನಲ್ಲಿದ್ದ ಇವರು ತಮ್ಮ ಸ್ಥಾನವನ್ನು 2 ಸ್ಥಾನದಷ್ಟುಉತ್ತಮಪಡಿಸಿಕೊಂಡಿದ್ದಾರೆ. 2019ರಲ್ಲಿ ಪಕ್ಷದ ಸಂಘಟನೆಯಲ್ಲಿ ಇವರದ್ದೇ ಅಂತಿಮ ಮಾತಾಗಿದ್ದು, ಅನೇಕ ರಾಜ್ಯಗಳಲ್ಲಿ ಬಿಜೆಪಿಯನ್ನು ಸಂಘಟಿಸಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಪ್ರತಿಷ್ಠಾಪಿಸುವಲ್ಲಿ ಇವರ ಪಾತ್ರ ಪ್ರಮುಖ ಎಂದು ರಾರಯಂಕಿಂಗ್ ಪಟ್ಟಿವಿವರಣೆ ನೀಡಿದೆ.
ದತ್ತಾತ್ರೇಯ ಹೊಸಬಾಳೆ: ಕರ್ನಾಟಕದವರಾದ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ದೇಶದಲ್ಲಿ 31ನೇ ಪ್ರಭಾವಿಯಾಗಿದ್ದು, ಕನ್ನಡಿಗರ ಪಟ್ಟಿಯಲ್ಲಿ ನಂ.2 ಆಗಿದ್ದಾರೆ. ಕೇಂದ್ರ ಸರ್ಕಾರದ ನೀತಿ ನಿರೂಪಣೆ, ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ- ಇವರ ಯಶಸ್ಸಿಗೆ ಕಾರಣ.
ಇದನ್ನೂ ಓದಿ: ನೆಹರೂ ಮ್ಯೂಸಿಯಂ ಹೆಸರು ಬದಲು, ಎಲ್ಲ ಮಾಜಿ ಪ್ರಧಾನಿಗಳ ಗೌರವಿಸಲು ಈ ನಿರ್ಧಾರ!
ಡಿ.ಕೆ. ಶಿವಕುಮಾರ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಳೆದ ಸಲ 79ನೇ ಸ್ಥಾನದಲ್ಲಿದ್ದರು. ಈ ಸಲ 58ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಕನ್ನಡಿಗರ ಪೈಕಿ ಇವರು ನಂ.3 ಪ್ರಭಾವಿ. ಕಾಂಗ್ರೆಸ್ಸನ್ನು ಕರ್ನಾಟಕದಲ್ಲಿ ಮರುಸಂಘಟನೆ ಮಾಡುತ್ತಿರುವುದು, ಇತರ ರಾಜ್ಯಗಳ ಕಾಂಗ್ರೆಸ್ ಬಿಕ್ಕಟ್ಟು ಪರಿಹರಿಸುವಲ್ಲಿ ಪ್ರಮುಖ ಪಾತ್ರ, ಒಕ್ಕಲಿಗ ನಾಯಕ ಎಂಬ ಖ್ಯಾತಿ ಹಾಗೂ ಮೇಕೆದಾಟು ಪಾದಯಾತ್ರೆ ಇವರ ಪ್ರಭಾವ ಹೆಚ್ಚಿಸಿವೆ.
ರಾಜೀವ್ ಚಂದ್ರಶೇಖರ್: ಕರ್ನಾಟಕದ ರಾಜ್ಯಸಭೆ ಸದಸ್ಯರಾದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಮೊದಲ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ದೇಶ 63ನೇ ಹಾಗೂ ಕನ್ನಡಿಗರ ಪೈಕಿ 4ನೇ ಪ್ರಭಾವಿಯಾಗಿ ಹೊರಹೊಮ್ಮಿದ್ದಾರೆ. ದೇಶದ ಐಟಿ ನೀತಿ ನಿರೂಪಣೆಯಲ್ಲಿನ ಪ್ರಮುಖ ಪಾತ್ರ, ಬಿಜೆಪಿ ಡಿಜಿಟಲ್ ಪ್ರಚಾರದಲ್ಲಿ ಇವರ ಪ್ರಭಾವ ಇದ್ದು, ಇದು ಇವರನ್ನು ಪ್ರಭಾವಿಯನ್ನಾಗಿಸಿದೆ.
ನಂದನ್ ನಿಲೇಕಣಿ: ಇನ್ಫೋಸಿಸ್ ಕಾರ್ಯನಿರ್ವಾಹಕೇತರ ಅಧ್ಯಕ್ಷ ನಂದನ್ ನಿಲೇಕಣಿ ದೇಶದ ಪ್ರಭಾವಿಗಳ ಪಟ್ಟಿಯಲ್ಲಿ 87ನೇ ಹಾಗೂ ಕನ್ನಡಿಗರ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದ್ದಾರೆ. ದೇಶವು ಐಟಿ ದಿಗ್ಗಜ ಆಗಲು ಇವರ ಪಾತ್ರ ಹಿರಿದು. ಆ ಕಾರಣಕ್ಕೆ ಸ್ಥಾನ ಪಡೆದಿದ್ದಾರೆ.
ಪ್ರಹ್ಲಾದ ಜೋಶಿ: ಕೇಂದ್ರ ಸಂಸದೀಯ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ದೇಶದ 98ನೇ ಹಾಗೂ ಕನ್ನಡ ನಾಡಿನ ನಂ.6 ಪ್ರಭಾವಿ ವ್ಯಕ್ತಿ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಅವರ ಆಪ್ತ ಬಳಗದಲ್ಲಿ ಇವರು ಇದ್ದಾರೆ ಹಾಗೂ ಇತ್ತೀಚೆಗೆ ಉತ್ತರಾಖಂಡ ಬಿಜೆಪಿ ಪ್ರಭಾರಿಯಾಗಿ ಪಕ್ಷವನ್ನು ಮತ್ತೆ ಆಡಳಿತಕ್ಕೆ ತರುವಲ್ಲಿ ಇವರ ಪಾತ್ರ ಹಿರಿದು. ಹೀಗಾಗಿ ಮೊದಲ ಬಾರಿ ಇವರು ಟಾಪ್-100 ಪ್ರಭಾವಿ ಭಾರತೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಟಾಪ್-10 ಪ್ರಭಾವಿಗಳು: 2022ರ ರ‍್ಯಾಂಕ್ - ಪ್ರಭಾವಿ - 2021ರ ಸ್ಥಾನ
1) ನರೇಂದ್ರ ಮೋದಿ- 1
2) ಅಮಿತ್ ಶಾ- 2
3) ಮೋಹನ ಭಾಗವತ್- 3
4) ಜೆ.ಪಿ.ನಡ್ಡಾ- 4
5) ಮುಕೇಶ್ ಅಂಬಾನಿ- 5
6) ಯೋಗಿ ಆದಿತ್ಯ ನಾಥ್- 13
7) ಗೌತಮ್ ಅದಾನಿ- 10
8) ಅಜಿತ್ ದೋವಲ್- 7
9) ಅರವಿಂದ ಕೇಜ್ರಿವಾಲ್- 27
10) ನಿರ್ಮಲಾ ಸೀತಾರಾಮನ್- 9
ಪ್ರಭಾವಿ ಕನ್ನಡಿಗರು: ರಾಜ್ಯದ ಸ್ಥಾನ- ಪ್ರಭಾವಿ ದೇಶದ ಸ್ಥಾನ
1) ಬಿ.ಎಲ್. ಸಂತೋಷ್- 14
2) ದತ್ತಾತ್ರೇಯ ಹೊಸಬಾಳೆ- 31
3) ಡಿ.ಕೆ.ಶಿವಕುಮಾರ್- 58
4) ರಾಜೀವ್ ಚಂದ್ರ ಶೇಖರ್- 63
5) ನಂದನ್ ನಿಲೇಕಣಿ- 87
6) ಪ್ರಹ್ಲಾದ ಜೋಶಿ- 98
