ನವದೆಹಲಿ(ಮೇ.08): ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಈ ಸೋಂಕು ತಡೆಯಲು ಎಲ್ಲಾ ರಾಜ್ಯಗಳು ವಿಭಿನ್ನ ಕ್ರಮಗಳನ್ನು ಕೈಗೊಂಡಿವೆ. ಹೀಗಿರುವಾಗ ಪಿಎಂ ಮೋದಿ ಶನಿವಾರದಂದು ಕರೆ ಮಾಡಿ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು ಹಾಗೂ ಮಧ್ಯಪ್ರದೇಶ ಸಿಎಂಗಳ ಜೊತೆ ಚರ್ಚೆ ನಡೆಸಿ ರಾಜ್ಯದಲ್ಲಿರುವ ಕೊರೋನಾ ಪರಿಸ್ಥಿತಿ ಹಾಗೂ ಅದರ ನಿಯಂತ್ರಣಕ್ಕಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಕೆಲ ಸಲಹೆಗಳನ್ನೂ ನೀಡಿದ್ದಾರೆ. ಮಹಾಮಾರಷ್ಟ್ರದಲ್ಲಿ ರಿಕವರಿ ರೇಟ್‌ ವೃದ್ಧಿಸಿದ್ದರೂ, ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಅತ್ತ ಮಧ್ಯಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆದರೆ ತಮಿಳುನಾಡು ಅತೀ ಹೆಚ್ಚು ಸೋಂಕಿತರಿರುವ ಟಾಪ್ 10 ರಾಜ್ಯಗಳ ಪಟ್ಟಿಯಲ್ಲಿದೆ.

ಮೋದಿ ಇನ್ನಾದರೂ ಬುದ್ಧಿ ಕಲಿತು ಆಕ್ಸಿಜನ್‌ ಕೊಡಲಿ: ಸಿದ್ದರಾಮಯ್ಯ

ಮಹಾರಾಷ್ಟ್ರದಲ್ಲಿ ಈಗಲೂ ಅತೀ ಹೆಚ್ಚು ಪ್ರಕರಣ

ಮಹಾಮಾಷ್ಟ್ರದಲ್ಲಿ ಈಗಲೂ ಎಲ್ಲಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಕಳೆದ 24 ಗಂಟೆಯಲ್ಲಿ 54,022 ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲೇ ಅತೀ ಹೆಚ್ಚು 898 ಮಂದಿ ಸಾವನ್ನಪ್ಪಿದ್ದಾರೆ. ಹೀಗಿದ್ದರೂ ಸುಪ್ರೀಂ ಕೋರ್ಟ್ ಮುಂಬೈನ ಆಕ್ಸಿಜನ್ ಮಾಡೆಲ್‌ನ್ನು ಶ್ಲಾಘಿಸಿ, ಮಹಾರಾಷ್ಟ್ರದ ಪ್ರಯತ್ನವನ್ನು ಹುರುದುಂಬಿಸಿದೆ. ಇನ್ನು ಸಿಎಂ ಠಾಕ್ರೆ ಜೊತೆ ಮಾತನಾಡಿದ ಪ್ರಧಾನಿ ಮೋದಿ ಮಹಾಮಾರಷಟ್‌ರದಲ್ಲಿ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದರೊಂದಿಗೆ ರಿಕವರಿ ರೇಟ್‌ ಮೇಲೆ ಹೆಚ್ಚು ಗಮನಹರಿಸಲು ಸೂಚಿಸಿದ್ದಾರೆನ್ನಲಾಗಿದೆ.

ಮಧ್ಯಪ್ರದೇಶದಲ್ಲಿ ಸುಧಾರಿಸಿದ ಪರಿಸ್ಥಿತಿ

ಕಳೆದ ತಿಂಗಳವರೆಗೆ ಮಧ್ಯಪ್ರದೇಶ ಟಾಪ್‌ ಹತ್ತು ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿತ್ತು. ಆದರೀಗ ಇಲ್ಲಿನ ಪರಿಸ್ಥಿತಿ ಸುಧಾರಿಸಿದೆ. ಕಳೆದ 24 ಗಂಟೆಯಲ್ಲಿ ಇಲ್ಲಿ 11,708  ಪ್ರಕರಣಗಳು ದಾಖಲಾಗಿದ್ದು, 84 ಮಂದಿ ಮೃತಪಟ್ಟಿದ್ದಾರೆ. ಇಲ್ಲಿನ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿ ಇಂದು ಪ್ರಧಾನಿ ಮೋದಿ ಫೋನ್ ಮಾಡಿ ರಾಜ್ಯದಲ್ಲಿರುವ ಕೊರೋನಾ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆಂದಿದ್ದಾರೆ.

ನೋ ವೇಸ್ಟೇಜ್: ವ್ಯಾಕ್ಸೀನ್ ಸದ್ಬಳಕೆಯಲ್ಲಿ ಕೇರಳ ಮಾದರಿ ಆಗಿದ್ದು ಹೇಗೆ ?

ಸಿಎಂಗಳ ಸಂಪರ್ಕದಲ್ಲಿದ್ದಾರೆ ಮೋದಿ

ಕೊರೋನಾ ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಮೋದಿ ನಿರಂತರವಾಗಿ ಸಿಎಂಗಳ ಸಂಪರ್ಕದಲ್ಲಿದ್ದಾರೆ. ಶನಿವಾರ ತಮಿಳುನಾಡಿನ ನೂತನ ಸಿಎಂ ಎಂ. ಕೆ. ಸ್ಟಾಲಿನ್ ಜೊತೆಗೂ ಮಾತುಕತೆ ನಡೆಸಿದ್ದಾರೆ. ಇಷ್ಟೇ ಅಲ್ಲದೇ ಪಿಎಂ ಮೋದಿ ಆಂಧ್ರಪ್ರದೇಶ, ಒಡಿಶಾ, ಝಾಖಂಡ್, ತೆಲಂಗಾಣ ರಾಜ್ಯದ ಸಿಎಂಗಳ ಜೊತೆಯೂ ಚರ್ಚೆ ನಡೆಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona