ಕೇಂದ್ರ ಸರ್ಕಾರದ ಇತರೆ ಪ್ರಮುಖ ಮಹತ್ವಾಕಾಂಕ್ಷಿ ಯೋಜನೆಗಳ ಜಾರಿಗೆ ಒತ್ತು ನೀಡುವಂತೆಯೂ ಪ್ರಧಾನಿ ಮೋದಿ ಸೂಚನೆ
ನವದೆಹಲಿ(ಜು.25): ಮನೆ ಮನೆಗೂ ನೀರು, ಸ್ವಾಮಿತ್ವದಂಥ ಸಾಮಾಜಿಕ ಕಲ್ಯಾಣ ಯೋಜನೆಗಳು ಪರಿಪೂರ್ಣವಾಗಿ ಜಾರಿಯಾಗಿ ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳಿ, ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಪೂರಕ ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳಿಗೆ ಕರೆ ನೀಡಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರದ ಇತರೆ ಪ್ರಮುಖ ಮಹತ್ವಾಕಾಂಕ್ಷಿ ಯೋಜನೆಗಳ ಜಾರಿಗೆ ಒತ್ತು ನೀಡುವಂತೆಯೂ ಸೂಚಿಸಿದ್ದಾರೆ.
ಈ ವರ್ಷಾಂತ್ಯಕ್ಕೆ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಆಡಳಿತಕ್ಕೆ ಚುರುಕು ನೀಡಲು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಭಾನುವಾರ ಬಿಜೆಪಿ ಆಳ್ವಿಕೆಯ ರಾಜ್ಯಗಳ ಸಿಎಂ ಹಾಗೂ ಡಿಸಿಎಂಗಳ ಜೊತೆ ಸುದೀರ್ಘ 4 ತಾಸು ಸಭೆ ನಡೆಸಿದರು. ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ‘ಮುಖ್ಯಮಂತ್ರಿ ಪರಿಷತ್’ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲಾ ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ಸಾಧನೆಯ ಬಗ್ಗೆ ಪ್ರಧಾನಿಗೆ ವರದಿ ನೀಡಿದರು ಎಂದು ಹೇಳಲಾಗಿದೆ. ಈ ಸಭೆಯಲ್ಲಿ ಬಿಜೆಪಿ ನೇರವಾಗಿ ಆಡಳಿತ ನಡೆಸುತ್ತಿರುವ ಮತ್ತು ಮಿತ್ರ ಪಕ್ಷವಾಗಿರುವ 18 ರಾಜ್ಯಗಳ ಸಿಎಂ, ಡಿಸಿಎಂಗಳು ಭಾಗಿಯಾಗಿದ್ದರು.
ಸ್ವಾತಂತ್ರ್ಯ ಯೋಧರಿಗೆ ನಮನ ಸಲ್ಲಿಸಲು ‘ಡಿಜಿಟಲ್ ಜ್ಯೋತಿ’: ಪ್ರಧಾನಿ ಮೋದಿ
ಕಲ್ಯಾಣ ಯೋಜನೆ:
ಸಭೆ ಉದ್ದೇಶಿಸಿ ಮಾತನಾಡಿದ ಮೋದಿ ಗತಿಶಕ್ತಿ, ಹರ್ ಘರ್ ಜಲ್, ಸ್ವಾಮಿತ್ವ, ನೇರ ನಗದು ವರ್ಗಾವಣೆಯಂಥ ಸಾಮಾಜಿಕ ಕಲ್ಯಾಣ ಯೋಜನೆಗಳು ಹಾಗೂ ಇತರೆ ಮಹತ್ವದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳುವ ಮೂಲಕ ಪರಿಪೂರ್ಣತೆ ಸಾಧಿಸಬೇಕು ಎಂದು ಸಲಹೆ ನೀಡಿದರು.
ಜೊತೆಗೆ ದೇಶವನ್ನು ಉದ್ಯಮಸ್ನೇಹಿ ಮಾಡುವಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಹಲವು ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದ ಪ್ರಧಾನಿ ಮೋದಿ, ರಾಜ್ಯಗಳು ಕೂಡ ಇಂಥ ನೀತಿಗಳ ಜಾರಿಯ ಮೂಲಕ ದೇಶವನ್ನು ಮತ್ತಷ್ಟುಉದ್ಯಮ ಸ್ನೇಹಿ ಮಾಡಲು ಮುಂದಾಗಬೇಕು ಎಂದು ಕರೆಕೊಟ್ಟರು.
ಉತ್ತರ ಕನ್ನಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ: ಪ್ರಧಾನಿ ಮೋದಿಗೆ ರಕ್ತದಿಂದ ಪತ್ರ ಬರೆಯಲು ನಿರ್ಧಾರ
ಇದೇ ವೇಳೆ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಪ್ರತಿಪಾದಿಸಿದ ಮೋದಿ, ವಿದ್ಯಾರ್ಥಿಗಳು ಮತ್ತು ಯುವಸಮೂಹ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗಿಯಾಗುವುದನ್ನು ಖಚಿತಪಡಿಸಲು ಅವರಿಗೆ ಗುಣಮಟ್ಟದ ಸವಲತ್ತು ಸಿಗುವಂತೆ ಮಾಡಬೇಕು ಮತ್ತು ಅವರು ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಜೊತೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ.13ರಿಂದ 15ರ ನಡುವೆ 20 ಕೋಟಿ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ‘ಹರ್ ಘರ್ ತಿರಂಗಾ’ ಯೋಜನೆಯನ್ನು ಯಶಸ್ವಿಗೊಳಿಸುವುದು ಹಾಗೂ ಆಡಳಿತ ಸುಧಾರಣೆಯ ಬಗ್ಗೆ ಮೋದಿ ಸಲಹೆ-ಸೂಚನೆಗಳನ್ನು ನೀಡಿದರು ಎಂದು ಮೂಲಗಳು ಹೇಳಿವೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಧಾಮಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಂತಾದವರು ಪಾಲ್ಗೊಂಡಿದ್ದರು. ಈ ವರ್ಷಾಂತ್ಯಕ್ಕೆ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
2021ರ ಡಿಸೆಂಬರ್‌ನಲ್ಲಿ ವಾರಾಣಸಿಯಲ್ಲಿ 2 ದಿನಗಳ ಕಾಲ ಮೋದಿ ಅವರು ಮುಖ್ಯಮಂತ್ರಿಗಳ ಸಭೆ ನಡೆಸಿದ್ದರು. ನಂತರ ಪಂಚರಾಜ್ಯಗಳ ಚುನಾವಣೆ ನಡೆದಿತ್ತು.
