ಡಿಸೆಂಬರ್ 1 ರಿಂದ ಭಾರತಕ್ಕೆ ಜಿ 20 ಅಧ್ಯಕ್ಷತೆ; ಮುಂದಿನ ವರ್ಷ ದೆಹಲಿಯಲ್ಲಿ ಶೃಂಗಸಭೆ: ಪ್ರಧಾನಿ ಮೋದಿ
ಜಿ 20 ಶೃಂಗಸಭೆಯ ವೇಳೆ ಜಾಗತಿಕ ನಾಯಕರು ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ಧದ ಕುರಿತು ಗಂಭೀರ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಬಾರಿಯ ಶೃಂಗಸಭೆಗೆ ಗೈರಾಗಲಿದ್ದಾರೆ ಎನ್ನಲಾಗಿದೆ.
ಇಂಡೋನೇಷ್ಯಾದಲ್ಲಿ (Indonesia) ನವೆಂಬರ್ 15 ಹಾಗೂ 16 ರಂದು ನಡೆಯಲಿರುವ ಜಿ20 ಶೃಂಗಸಭೆಯಲ್ಲಿ (G 20 Summit) ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೂರು ದಿನಗಳ ಪ್ರವಾಸಕ್ಕಾಗಿ ಇಂದು ದ್ವೀಪಗಳ ರಾಷ್ಟ್ರವಾದ (Island Nation) ಇಂಡೋನೇಷ್ಯಾಗೆ ತೆರಳಲಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ದೇಶದ ಜನತೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, 3 ದಿನಗಳ ಕಾಲ ಇಂಡೋನೇಷ್ಯಾದ ರಾಜಧಾನಿ ಬಾಲಿಗೆ (Bali) ತೆರಳುತ್ತಿರುವುದಾಗಿ ನಿರ್ಗಮನಾ ಹೇಳಿಕೆ ನೀಡಿದ್ದಾರೆ. ಇಂಡೋನೇಷ್ಯಾ ಅಧ್ಯಕ್ಷತ್ವದಲ್ಲಿ ಈ 17ನೇ ಜಿ - 20 ಶೃಂಗಸಭೆ ನಡೆಯುತ್ತಿದೆ ಎಂದೂ ಪ್ರಧಾನಿ ತಿಳಿಸಿದ್ದಾರೆ. ಅಮೆರಿಕ, ಚೀನಾ, ಬ್ರಿಟನ್ ಮುಂತಾದ ಪ್ರಮುಖ ದೇಶಗಳ ಮುಖ್ಯಸ್ಥರು ಪಾಲ್ಗೊಳ್ಳಲಿರುವ ಜಾಗತಿಕ ಶೃಂಗದಲ್ಲಿ ಪ್ರಧಾನಿ ಮೋದಿ ಅವರು ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್ ರೂಪಾಂತರ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಮೂರು ಪ್ರಮುಖ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಜಾಗತಿಕ ನಾಯಕರು ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ಧದ ಕುರಿತು ಗಂಭೀರ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ಬಾರಿಯ ಶೃಂಗಸಭೆಗೆ ಗೈರಾಗಲಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ಇಂದು ಮೋದಿ ಇಂಡೋನೇಷ್ಯಾಕ್ಕೆ: ನಾಳೆ, ನಾಡಿದ್ದು ಜಿ20 ಶೃಂಗ
ಈ ಮಧ್ಯೆ, ಇಂಡೋನೇಷ್ಯಾಗೆ ತೆರಳುವ ಮುನ್ನ ಜಿ - 20 ಶೃಂಗಸಭೆ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ ಮೋದಿ, ಬಾಲಿ ಶೃಂಗಸಭೆಯಲ್ಲಿ, ನಾನು ಇತರೆ ಜಿ - 20 ನಾಯಕರ ಜತೆ ಜಾಗತಿಕ ಕಾಳಜಿಯ ಪ್ರಮುಖ ಸಮಸ್ಯೆಗಳ ಬಗ್ಗೆ ವ್ಯಾಪಕ ಚರ್ಚೆಗಳನ್ನು ನಡೆಸಲಿದ್ದೇವೆ ಎಂದಿದ್ದಾರೆ. ಜಾಗತಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವುದು, ಆಹಾರ ಮತ್ತು ಇಂಧನ ಭದ್ರತೆ, ಪರಿಸರ, ಆರೋಗ್ಯ ಹಾಗೂ ಡಿಜಿಟಲ್ ರೂಪಾಂತರ ಮುಂತಾದ ಸಮಸ್ಯೆಯ ಬಗ್ಗೆ ಚರ್ಚೆ ನಡೆಯಲಿದೆ ಎಂದೂ ಮೋದಿ ಹೇಳಿದ್ದಾರೆ.
ಅಲ್ಲದೆ, ಜಿ 20 ಶೃಂಗಸಭೆಯ ನಡುವೆ, ನಾನು ಈ ಶೃಂಗಸಭೆಯಲ್ಲಿ ಭಾಗಿಯಾಗುವ ಹಲವು ಇತರೆ ದೇಶಗಳ ನಾಯಕರನ್ನು ಭೇಟಿಯಾಗುತ್ತೇನೆ ಹಾಗೂ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ಸುಧಾರಿಸುವ ಬಗ್ಗೆ ವಿಮರ್ಶೆ ಮಾಡಲಿದ್ದೇನೆ. ಅಲ್ಲದೆ, ನವೆಂಬರ್ 15, 2022 ರಂದು ಬಾಲಿಯಲ್ಲಿ ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡಲು ಎದುರು ನೋಡುತ್ತಿದ್ದೇನೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: 45 ಗಂಟೆ, 20 ಸಭೆ, 10 ವಿಶ್ವನಾಯಕರ ಭೇಟಿ; ಜಿ20ಯಲ್ಲಿ ಇದು ಪ್ರಧಾನಿ ಮೋದಿ ವೇಳಾಪಟ್ಟಿ!
ನಮ್ಮ ದೇಶಕ್ಕೆ ಹಾಗೂ ನಾಗರಿಕರಿಗೆ ಮಹತ್ವದ ಕ್ಷಣವೊಂದರಲ್ಲಿ, ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ಬಾಲಿ ಶೃಂಗಸಭೆಯ ಮುಕ್ತಾಯ ಸಮಾರಂಭದಲ್ಲಿ ಭಾರತಕ್ಕೆ ಜಿ 20 ಅಧ್ಯಕ್ಷತೆಯನ್ನು ಹಸ್ತಾಂತರಿಸಲಿದ್ದಾರೆ. ಡಿಸೆಂಬರ್ 1, 2022 ರಿಂದ ಭಾರತ ಅಧಿಕೃತವಾಗಿ ಅಧ್ಯಕ್ಷತೆಯನ್ನು ಪಡೆದುಕೊಳ್ಳಲಿದೆ. ಅಲ್ಲದೆ, ಈ ವೇಳೆ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಜಿ - 20 ಶೃಂಗಸಭೆಗೆ ಜಿ 20 ಸದಸ್ಯರಿಗೆ ಹಾಗೂ ಇತರ ಆಹ್ವಾನಿತರಿಗೆ ನಾನು ವೈಯಕ್ತಿಕವಾಗಿ ಆಹ್ವಾನ ನೀಡಲಿದ್ದೇನೆ ಎಂದೂ ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.
ಇನ್ನು, ಜಿ 20 ಶೃಂಗಸಭೆಯ ನನ್ನ ಸಂವಹನದಲ್ಲಿ ನಾನು ಭಾರತದ ಸಾದನೆಗಳು ಹಾಗೂ ಜಾಗತಿಕ ಸವಾಲುಗಳನ್ನು ಸಾಮೂಹಿಕವಾಗಿ ಪರಿಹರಿಸಲು ಅಚಲ ಬದ್ಧತೆ ಬಗಗೆಯೂ ಪ್ರಧಾನಿ ಮೋದಿ ಹೇಳಿದ್ದಾರೆ. ಇನ್ನೊಂದೆಡೆ, (ಮುಂದಿನ ವರ್ಷ) ಭಾರತದ ಜಿ 20 ಅಧ್ಯಕ್ಷತೆ ‘’ವಸುಧೈವ ಕುಟುಂಬಕಂ’’ ಅಥವಾ ‘’ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯ’’ ವೆಂಬ ಥೀಮ್‌ನಡಿ ನಡೆಯಲಿದೆ. ಇದು ಎಲ್ಲರಿಗೂ ಸಮಾನವಾದ ಬೆಳವಣಿಗೆ ಮತ್ತು ಹಂಚಿಕೆಯ ಭವಿಷ್ಯದ ಸಂದೇಶವನ್ನು ಒತ್ತಿಹೇಳುತ್ತದೆ ಎಂದೂ ಪ್ರಧಾನಿ ಮೋದಿ ಇಂಡೋನೇಷ್ಯಾಗೆ ತೆರಳುವ ಮುನ್ನ ನಿರ್ಗಮನ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: G20 ಲೋಗೋ ವಿವಾದ, ರಾಜೀವ್ ಅಂದರೆ ಏನು ಗೊತ್ತಾ? ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು?