ನವದೆಹಲಿ(ಮೇ.08): 2ನೇ ಬಾರಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವರ್ಷಾಚರಣೆ ಮೇ 30ಕ್ಕೆ ನಡೆಯಲಿದೆ. 

ಈ ಹಿನ್ನೆಲೆಯಲ್ಲಿ ಸರ್ಕಾರದ 1 ವರ್ಷದ ಸಾಧನೆಯ ಪಟ್ಟಿ ಬಿಡುಗಡೆಗೆ ಸಿದ್ಧತೆ ಆರಂಭವಾಗಿದೆ. ತಮ್ಮ ತಮ್ಮ ಇಲಾಖೆಗಳ ಸಾಧನೆಯ ಪಟ್ಟಿಹಾಗೂ ಚಟುವಟಿಕೆಗಳ ವಿವರ ಸಲ್ಲಿಸುವಂತೆ ಕಳೆದ ತಿಂಗಳು ಸಂಪುಟ ಸಚಿವಾಲಯವು ಎಲ್ಲ ಸಚಿವಾಲಯಗಳಿಗೆ ಸೂಚಿಸಿತ್ತು. ಈ ವಿವರಗಳನ್ನು ಕ್ರೋಡೀಕರಿಸಿ ಸಾಧನೆಯ ಪಟ್ಟಿಬಿಡುಗಡೆ ಮಾಡುವ ಸಿದ್ಧತೆ ನಡೆದಿದೆ.

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆ ವಿವರಿಸಲು ಬಹಿರಂಗ ಸಭೆ ನಡೆಸುವ ಸಾಧ್ಯತೆ ಇಲ್ಲ. ಇದರ ಬದಲು ಸಾಮಾಜಿಕ ಮಾಧ್ಯಮ, ಮುದ್ರಣ ಹಾಗೂ ಟೀವಿ ಮಾಧ್ಯಮಗಳ ಮೂಲಕ ಸಾಧನೆಯ ಸಂಚಿಕೆ ಬಿಡುಗಡೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಸಾಧನೆಯ ಪಟ್ಟಿಎಂಬುದು ವಿವಿಧ ಸಚಿವಾಲಯಗಳಿಗೆ ವಾರ್ಷಿಕ ಪರೀಕ್ಷೆ ಎಂಬಂತಿದೆ ಎಂದು ಅವು ಹೇಳಿವೆ.

ಗ್ರೀನ್‌ ಝೋನ್‌ಗಾಗಿ ಪತ್ರ ಬರೆದ ಬಿಬಿಎಂಪಿ: ಮೋದಿ ಸರ್ಕಾರದಿಂದ ನೋ ರಿಪ್ಲೈ..!

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರವು 353 ಸೀಟುಗಳಲ್ಲಿ ಗೆಲುವಿನ ನಗೆ ಬೀರುವುದರೊಂದಿಗೆ ಎರಡನೆ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇನ್ನು ಬಿಜೆಪಿ ಪಕ್ಷವೇ 303 ಸೀಟುಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತವನ್ನು ಪಡೆದಿತ್ತು.

ದೇಶ ಸದ್ಯ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಮೋದಿ ಸರ್ಕಾರ ವರ್ಷದ ಸಂಭ್ರಮಾಚರಣೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ದೇಶದ ಎಲ್ಲಾ ರಾಜಕೀಯ ನಾಯಕರು ಒಗ್ಗಟ್ಟಿನಿಂದ ಪಕ್ಷಾತೀತವಾಗಿ ಕೊರೋನಾ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಉಳಿದ ಶ್ರೀಮಂತ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಂದಗತಿಯಲ್ಲಿ ಸೋಂಕು ಹರಡುತ್ತಿದೆ.