ಭಾನುವಾರವೂ ಈಜಿಪ್ಟ್‌ನಲ್ಲೇ ಇರುವ ಮೋದಿ, 11ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ಇತ್ತೀಚೆಗೆ ದಾವೂದಿ ಬೊಹ್ರಾ ಸಮುದಾಯದ ಸಹಾಯದೊಂದಿಗೆ ಮರು ನಿರ್ಮಾಣ ಮಾಡಲಾಗಿದ್ದ ಅಲ್ ಹಕೀಮಿ ಮಸೀದಿಗೆ ಭೇಟಿ ನೀಡಲಿದ್ದಾರೆ.
ಕೈರೋ (ಜೂನ್ 25, 2023): 2 ದಿನಗಳ ಅಧಿಕೃತ ಭೇಟಿಗಾಗಿ ಶನಿವಾರ ಈಜಿಪ್ಟ್‌ನ ಕೈರೋಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಈಜಿಪ್ಟ್ ಪ್ರಧಾನಿ ಮೊಸ್ತಾಫ ಮದ್‌ಬೌಲಿ ಸೇರಿದಂತೆ ಹಲವು ಗಣ್ಯರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಗಾರ್ಡ್ ಆಫ್ ಆನರ್‌ನೊಂದಿಗೆ ಸ್ವಾಗತ ಕೋರಿದರು. ಈಜಿಪ್ಟ್‌ಗೆ ದ್ವಿಪಕ್ಷೀಯ ಭೇಟಿಗೆಂದು 26 ವರ್ಷಗಳ ಬಳಿಕ ಆಗಮಿಸುತ್ತಿರುವ ಮೊದಲ ಭಾರತೀಯ ಪ್ರಧಾನಿ ಮೋದಿ ಅವರಾಗಿದ್ದಾರೆ.
ಭಾನುವಾರವೂ ಈಜಿಪ್ಟ್‌ನಲ್ಲೇ ಇರುವ ಮೋದಿ, 11ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ಇತ್ತೀಚೆಗೆ ದಾವೂದಿ ಬೊಹ್ರಾ ಸಮುದಾಯದ ಸಹಾಯದೊಂದಿಗೆ ಮರು ನಿರ್ಮಾಣ ಮಾಡಲಾಗಿದ್ದ ಅಲ್ ಹಕೀಮಿ ಮಸೀದಿಗೆ ಭೇಟಿ ನೀಡಲಿದ್ದಾರೆ. ಬಳಿಕ ಹೆಲಿಪೊಲಿಸ್ ಯುದ್ಧ ಸೌಧಕ್ಕೆ ಭೇಟಿ ನೀಡಲಿರುವ ಅವರು ಮೊದಲ ವಿಶ್ವಯುದ್ಧದಲ್ಲಿ ಮಡಿದ ಯೋಧರಿಗೆ ನಮನ ಸಲ್ಲಿಸಲಿದ್ದಾರೆ. ಅಲ್ಲದೆ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಭಾರತೀಯ ಸಮುದಾಯ ಹಾಗೂ ಈಜಿಪ್ಟ್ ಉದ್ದಿಮೆದಾರರು, ಬುದ್ಧಿಜೀವಿಗಳ ಜತೆ ಸಂವಾದ ನಡೆಸಲಿದ್ದಾರೆ.
ಇದನ್ನು ಓದಿ: ಇಂದಿನಿಂದ ಪ್ರಧಾನಿ ಮೋದಿ 2 ದಿನ ಈಜಿಪ್ಟ್ ಪ್ರವಾಸ: 1000 ವರ್ಷ ಹಳೆಯ ಮಸೀದಿಗೆ ಭೇಟಿ
4 ದಿನಗಳ ಅಮೆರಿಕ ಭೇಟಿ ಮುಗಿಸಿ ವಾಷಿಂಗ್ಟನ್‌ನಿಂದ ಶುಕ್ರವಾರ ಪ್ರಯಾಣ ಆರಂಭಿಸಿದ ಪ್ರಧಾನಿ ಮೋದಿ ಶನಿವಾರ ಸಾಯಂಕಾಲ ಈಜಿಪ್ಟ್ ತಲುಪಿದರು. ಇದು 1997ರ ಬಳಿಕ ಭಾರತೀಯ ಪ್ರಧಾನಿಯೊಬ್ಬರು ಕೈಗೊಳ್ಳುತ್ತಿರುವ ದ್ವಿಪಕ್ಷೀಯ ಭೇಟಿಯಾಗಿದೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಅವರ ಅಧಿಕೃತ ಆಹ್ವಾನದ ಮೇರೆಗೆ ಈಜಿಪ್ಟ್ ಪ್ರವಾಸ ಕೈಗೊಂಡಿರುವ ಮೋದಿ ಅವರು, ಈ ವೇಳೆ ಅಲ್ ಸಿಸಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಶನಿವಾರ ಈಜಿಪ್ಟ್ ರಾಜಧಾನಿ ಕೈರೋಗೆ ಬಂದಿಳಿದ ಮೋದಿ ಅವರನ್ನು ಈಜಿಪ್ಟ್ ಸೇನಾಪಡೆ ಗಾರ್ಡ್ ಆಫ್ ಆನರ್ ನೀಡುವ ಮೂಲಕ ಸ್ವಾಗತಿಸಿತು.
ಮೋದಿ.. ಮೋದಿ.. ಘೋಷಣೆ:
ಬಳಿಕ ರಿಟ್ಜ್ ಕಾರ್ಲ್ಟನ್ ಹೋಟೆಲ್‌ಗೆ ತೆರಳಿದ ಮೋದಿ ಅವರು ಅಲ್ಲಿ ನೆರೆದಿದ್ದ ಭಾರತೀಯ ಸಮುದಾಯದವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಮೋದಿ... ಮೋದಿ.. ಘೋಷಣೆ ಮೊಳಗಿದವು.
ಇದನ್ನೂ ಓದಿ: ಅಮೆರಿಕ ಪ್ರವಾಸದ ಜೊತೆಗೆ ಈಜಿಪ್ಟ್‌ಗೂ ಮೋದಿ ಭೇಟಿ: ವಿದೇಶಾಂಗ ಸಚಿವಾಲಯ
