ಪ್ರಧಾನಿ ನರೇಂದ್ರ ಮೋದಿ ಅವರು ಜು.23ರಿಂದ ಜು.26ರವರೆಗೆ ಬ್ರಿಟನ್‌ ಮತ್ತು ಮಾಲ್ಡೀವ್ಸ್‌ ದೇಶಗಳಿಗೆ ಭೇಟಿ ನೀಡಲಿದ್ದಾರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜು.23ರಿಂದ ಜು.26ರವರೆಗೆ ಬ್ರಿಟನ್‌ ಮತ್ತು ಮಾಲ್ಡೀವ್ಸ್‌ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಜು.23-24ರವರೆಗೆ ಬ್ರಿಟನ್‌ಗೆ ತೆರಳಲಿರುವ ಪ್ರಧಾನಿ ಅಲ್ಲಿನ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. 

ಇದೇ ವೇಳೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಂಕಿತ ಹಾಕಲಿದ್ದಾರೆ. ಜೊತೆಗೆ ಬ್ರಿಟನ್‌ ದೊರೆ ಕಿಂಗ್‌ ಚಾರ್ಲ್ಸ್‌ 3 ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಇದು ಮೋದಿ ಅವರ ನಾಲ್ಕನೇ ಬ್ರಿಟನ್‌ ಪ್ರವಾಸವಾಗಲಿದೆ.

ಬ್ರಿಟನ್‌ ಬಳಿಕ ಮಾಲ್ಡೀವ್ಸ್‌ಗೆ ತೆರಳಲಿರುವ ಮೋದಿ ಅಲ್ಲಿನ ಸ್ವಾತಂತ್ರ್ಯ ದಿನಕ್ಕೆ ಮುಖ್ಯ ಅತಿಥಿಯಾಗಲಿದ್ದಾರೆ. ಪಾಕಿಸ್ತಾನವು ಚೀನಾ ಮತ್ತು ಬಾಂಗ್ಲಾದೇಶದೊಂದಿಗೆ ಸಾರ್ಕ್‌ ಒಕ್ಕೂಟಕ್ಕೆ ಬದಲಿಯಾಗಿ ಒಕ್ಕೂಟ ರಚನೆ ನಡೆಸುವ ಷಡ್ಯಂತ್ರ ನಡೆಸುತ್ತಿರುವ ಹೊತ್ತಿನಲ್ಲೇ ಮೋದಿ ಅವರ ಮಾಲ್ಡೀವ್ಸ್‌ ಭೇಟಿಯು ಪ್ರಾಮುಖ್ಯತೆ ಹೊಂದಿದೆ. ಇದೇ ವೇಳೆ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಸೇನೆಗೆ ನಾಳೆ 3 ಅಪಾಚೆ ಹೆಲಿಕಾಪ್ಟರ್‌ ಸೇರ್ಪಡೆ: ಪಾಕ್‌ ಗಡಿಗೆ ನಿಯೋಜನೆ

ಜೋಧಪುರ: ಅಮೆರಿಕ ನಿರ್ಮಿತ ಇನ್ನೂ 3 ಎಎಚ್‌-64ಇ ಅಪಾಚೆ ಹೆಲಿಕಾಪ್ಟರ್‌ಗಳು ಒಂದೆರೆಡು ದಿನದಲ್ಲಿ ಭಾರತಕ್ಕೆ ಆಗಮಿಸಲಿದ್ದು, ಅವುಗಳನ್ನು ಪಾಕಿಸ್ತಾನದೊಂದಿಗೆ ಗಡಿ ಹೊಂದಿರುವ ರಾಜಸ್ಥಾನದ ಜೋಧ್‌ಪುರದಲ್ಲಿ ನಿಯೋಜಿಸುವ ಸಾಧ್ಯತೆ ಇದೆ.ಜಗತ್ತಿನ ಅತ್ಯಾಧನಿಕ ಯುದ್ಧ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿರುವ ಅಪಾಚೆ ಸದ್ಯ ಅಮೆರಿಕ, ಇಸ್ರೇಲ್, ಈಜಿಪ್ಟ್ ಬಿಟ್ಟರೆ ಭಾರತದಲ್ಲಿ ಮಾತ್ರ ಇದೆ. 2015ರ ಒಪ್ಪಂದದಂತೆ ಈಗಾಗಲೇ 22 ಅಪಾಚೆ ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ ನೀಡಲಾಗಿದೆ. 2020ರಲ್ಲಿ 5000 ಕೋಟಿ ರು. ವೆಚ್ಚದಲ್ಲಿ 6 ಹೆಲಿಕಾಪ್ಟರ್‌ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರ ಭಾಗವಾಗಿ ಇದೀಗ3 ಕಾಪ್ಟರ್‌ ಆಗಮಿಸಲಿದೆ. ವಾಯುಪಡೆಯಲ್ಲಿದ್ದ ಅಪಾಚೆ ಇದೀಗ ಸೇನಾಪಡೆಗೂ ಸೇರ್ಪಡೆಯಾಗುತ್ತಿದೆ.