Asianet Suvarna News Asianet Suvarna News

ಜಲಿಯನ್ ವಾಲಾಬಾಗ್ ಸ್ಮಾರಕ ಸಂಕೀರ್ಣ ಆಗಸ್ಟ್ 28ಕ್ಕೆ ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸಮರ್ಪಣೆ!

  • ಸ್ವಾತಂತ್ರ್ಯ ಸೇನಾನಿಗಳ ಮೇಲೆ ಗುಂಡಿನ ದಾಳಿ ನಡೆಸಿ ನರಮೇಧ
  • ಜಲಿಯನ್ ವಾಲಾಬಾಗ್ ದುರಂತ ಭಾರತೀಯರು ಎಂದೂ ಮೆರಯಲು ಸಾಧ್ಯವಿಲ್ಲ
  • ಜಲಿಯನ್ ವಾಲಾಬಾಗ್ ಸ್ಮಾರಕ್‌ನ ನವೀಕರಿಸಿದ ಸಂಕೀರ್ಣ ರಾಷ್ಟ್ರಕ್ಕೆ ಸಮರ್ಪಣೆ
  • ಆಗಸ್ಟ್ 28ಕ್ಕೆ ಪ್ರಧಾನಿ ಮೋದಿ ಸ್ಮಾರಕ ಹಾಗೂ ಚಿತ್ರಪಟಗಳ ಮ್ಯೂಸಿಯಂ ಸಮರ್ಪಣೆ
PM modi to dedicate renovated complex of Jallianwala Bagh Smarak to nation on 28th August ckm
Author
Bengaluru, First Published Aug 26, 2021, 9:54 PM IST

ನವದೆಹಲಿ(ಆ.26): ಜಲಿಯನ್ ವಾಲಾಬಾಗ್. ಈ ಹೆಸರು ಕೇಳಿದರೆ ಭಾರತೀಯರ ದೇಶ ಪ್ರೇಮ ಉಕ್ಕಿ ಹರಿಯುತ್ತದೆ. ಬ್ರಿಟೀಷ್ ದೌರ್ಜನ್ಯದ ವಿರುದ್ದ ಆಕ್ರೋಶ ಕಟ್ಟೆ ಒಡೆಯುತ್ತದೆ. ಬ್ರಿಟೀಷರು ನಡೆಸಿದ ಅಮಾನವೀಯ ಹತ್ಯಾಕಾಂಡ ಯಾವ ಭಾರತೀಯನೂ ಮರೆತಿಲ್ಲ. ಶತಮಾನ ಕಳೆದರೂ ರಕ್ತದ ವಾಸನೆ ಇನ್ನೂ ಹಾಗೆ ಇದೆ. ಇದೀಗ ಈ ಜಲಿಯನ್ ವಾಲಾಬಾಗ್‌ ಸ್ಮಾರಕದಲ್ಲಿನ ನವೀಕರಿಸಿದ ಸಂಕೀರ್ಣವನ್ನು ಆಗಸ್ಟ್ 28ಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

101 ವರ್ಷಗಳಾದರೂ ಮಾಸದ ಜಲಿಯನ್ ವಾಲಾಬಾಗ್ ಗಾಯದ ನೋವು

ಆಗಸ್ಟ್ 28 ರ ಸಂಜೆ 6.25ಕ್ಕೆ ಪ್ರಧಾನಿ ಮೋದಿ, ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂಕೀರ್ಣನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದೇ ವೇಳೆ ಜಲಿಯನ್ ವಾಲಾಬಾಗ್ ದುರಂತ ಹೇಳುವ ಗ್ಯಾಲರಿ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ. ಜಲಿಯನ್ ವಾಲಾಬಾಗ್ ಸ್ಮಾರಕ ಹಾಗೂ ಸಂಕೀರ್ಣವನ್ನು ಮೇಲ್ದರ್ಜೆಗೆ ಏರಿಸುವ ಬಹು ಅಭಿವೃದ್ಧಿ ಕಾರ್ಯಗಳನ್ನು  ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಜಲಿಯನ್ ವಾಲಾಬಾಗ್ ಹಾಗೂ ಪಂಜಾಬ್‌ನಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿ ಹೋರಾಟ ಹೇಳುವ ನಾಲ್ಕು ಮ್ಯೂಸಿಯಂ ಗ್ಯಾಲರಿ, ಪ್ರೊಜೆಕ್ಷನ್ ಮ್ಯಾಪಿಂಗ್ ಮತ್ತು 3 ಡಿ ಪ್ರಾತಿನಿಧ್ಯ, ಮತ್ತು ಕಲೆ ಮತ್ತು ಶಿಲ್ಪಕಲೆಗಳ ಸ್ಥಾಪನೆ ಸೇರಿದಂತೆ ಆಡಿಯೋ-ದೃಶ್ಯ ತಂತ್ರಜ್ಞಾನದ ಸಮ್ಮಿಲನದೊಂದಿಗೆ ಹಲವು ವಿಶೇಷತೆಗಳನ್ನು ಒಳಗೊಂಡ ಮ್ಯೂಸಿಯಂ ಇದಾಗಿದೆ.

ಜಲಿಯನ್ ವಾಲಾಭಾಗ್ ಘಟನೆಗೆ ವಿಷಾದ: ಬ್ರಿಟನ್ ಪ್ರಧಾನಿ!

13 ನೇ ಏಪ್ರಿಲ್, 1919 ರಂದು ನಡೆದ ಜಲಿಯನ್ ವಾಲಾಬಾಗ್ ದುರಂತ ಘಟನೆಗಳನ್ನು ಪ್ರದರ್ಶಿಸಲು ಸೌಂಡ್ ಅಂಡ್ ಲೈಟ್ ಶೋ  ನಿರ್ಮಾಣ ಮಾಡಲಾಗಿದೆ. ಪಂಜಾಬಿನ ಸ್ಥಳೀಯ ವಾಸ್ತುಶಿಲ್ಪ ಶೈಲಿಯೊಂದಿಗೆ ಸಮನ್ವಯದಲ್ಲಿ ವಿಸ್ತಾರವಾದ ಪಾರಂಪರಿಕ ಪುನಃಸ್ಥಾಪನೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಬ್ರಿಟೀಷರ ಗುಂಡಿನಿಂದ ರಕ್ಷಿಸಿಕೊಳ್ಳಲು ಜಲಿಯನ್ ವಾಲಾಬಾಗ್‌ನಲ್ಲಿದ್ದ ಬಾವಿ ಹಾರಿ ಪ್ರಾಣ ಬಿಟ್ಟ ಶಹೀದ್ ಬಾವಿಯನ್ನು ದುರಸ್ತಿ ಮಾಡಲಾಗಿದೆ.  ರಸ್ತೆ ಸೇರಿದಂತೆ ಹಲವು ಮೂಲಭೂತ ಸೌಕರ್ಯವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. 

ಜಲಿಯನ್ ವಾಲಾಬಾಗ್ ದುರಂತ:
ಬ್ರಿಟಿಷರ ದೌರ್ಜನ್ಯದ ವಿರುದ್ಧ ಶಾಂತಿಯುತ ಪ್ರತಿಭಟನೆಗಾಗಿ ಭಾರತದ ಸ್ವಾತಂತ್ರ್ಯ ವೀರರು ಪಂಜಾಬ್‌ನ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಸೇರಿದ್ದರು. ಸುಮಾರು 10 ಸಾವಿರಕ್ಕೂ ಹೆಚ್ಚು ಸ್ವಾತಂತ್ರ್ಯ ಸೇನಾನಿಗಳು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಬ್ರಿಟಿಷ್ ಬ್ರಿಗೇಡಿಯರ್ ರಿಜಿನಾಲ್ಡ್ ಎಡ್ವರ್ಡ್ ಹ್ಯಾರಿ ಡೈರ್ ಭಾರತದ ಸ್ವಾತಂತ್ರ್ಯ ಸೇನಾನಿಗಳ ಮೇಲೆ ಗುಂಡಿನ ಮಳೆ ಸುರಿಸಿದರು. ಅತ್ಯಂತ ಅಮಾನವೀಯ ಹತ್ಯಾಂಕಾಡದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ವೀರ ಮರಣವನ್ನಪ್ಪಿದರೆ, 1,500ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

13 ನೇ ಏಪ್ರಿಲ್, 1919 ರಂದು ಕೇವಲ 10 ನಿಮಿಷದಲ್ಲಿ ಈ ನರಮೇಧ ನಡೆದಿದೆ. ಪಂಜಾಬ್ ಜನರ ಬೈಸಾಕಿ (ಸುಗ್ಗಿ)ಹಬ್ಬದ ದಿನವೇ ಸಾವಿರಕ್ಕೂ ಹೆಚ್ಚು ಮಂದಿಯ ಬಲಿದಾನವಾಗಿತ್ತು. ಸಿಖ್‌ರ ಸುಗ್ಗಿ ಸಂಭ್ರಮ ರಕ್ತದ ಮಡುವಿನಲ್ಲಿ ಕಣ್ಣೀರಾಯಿತು. ಸಣ್ಣ ಬಾಗಿಲು ಒಳಗೆ ವಿಶಾಲ ಪ್ರದೇಶ ಜಲಿಯನ್ ವಾಲಾಬಾಗ್. 10 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದ ಈ ಪ್ರತಿಭಟನಾ ಸಮಾವೇಶದೊಳಕ್ಕೆ ಸೇನೆ ನುಗ್ಗಿಸಿದ ರಿಜಿನಾಲ್ಡ್ ಎಡ್ವರ್ಡ್ ಹ್ಯಾರಿ ಡೈರ್ ಗುಂಡಿನ ದಾಳಿ ನಡೆಸಲು ಆದೇಶ ನೀಡಿದ್ದ. ಕೇವಲ 10 ನಿಮಿಷ ಸುಮಾರು 1,650ಕ್ಕೂ ಹೆಚ್ಚು ಬುಲೆಟ್ ಅಲ್ಲಿ ನೆರೆದಿದ್ದ ಭಾರತೀಯರ ದೇಹ ಹೊಕ್ಕಿತ್ತು. ಈ ಕರಾಳ ಘಟನೆ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಘಟ್ಟವಾಗಿದೆ. 

Follow Us:
Download App:
  • android
  • ios