* ಪಂಜಾಬ್‌ ಪ್ರವಾಸದ ವೇಳೆ ಮೋದಿ ಭದ್ರತೆಯಲ್ಲಿ ಲೋಪ* ಪಂಜಾಬ್‌ ಸರ್ಕಾರದ ವಿರುದ್ಧ ರಾಜಕೀಯ ನಾಯಕರ ಆಕ್ರೋಶ* ತಪ್ಪೊಪ್ಪಿಕೊಳ್ಳಲು ತಯಾರಿಲ್ಲ ಚನ್ನಿ, ಜವಾಬ್ದಾರಿ ವಿಚಾರವೆತ್ತಿ ಮೋದಿಗೆ ತಿವಿದ ಪಂಜಾಬ್ ಸಿಎಂ!

ಚಂಡೀಗಢ(ಜ.08): ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎದುರಿಸಿದ ಭದ್ರತಾ ಲೋಪದ ವಿಚಾರವಾಗಿ ಪಂಚಾಬ್ ಸರ್ಕಾರದ ನಡೆಯನ್ನು ಬಹುತೇಕರು ಟೀಕಿಸಿದ್ದಾರೆ. ಹೀಗಿದ್ದರೂ, ಪಂಜಾಬ್ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ. ಅಲ್ಲದೇ ಈ ಎಲ್ಲಾ ಆಗುಹೋಗುಗಳ ಬೆನ್ನಲ್ಲೇ ಎರಡು ಟ್ವೀಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾತ್ರವಲ್ಲದೆ ಹಲವು ವಿರೋಧ ಪಕ್ಷಗಳೂ ಪಂಜಾಬ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಸೋನಿಯಾ ಗಾಂಧಿ ಕೂಡ ಚನ್ನಿ ಸರ್ಕಾರಕ್ಕೆ ಪ್ರಧಾನಿ ಭದ್ರತಾ ವೈಫಲ್ಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ ಎಂಬುವುದು ಉಲ್ಲೇಖನೀಯ.

ಎರಡು ಟ್ವೀಟ್ ಮಾಡಿರುವ ಚನ್ನಿ

ಟ್ವೀಟ್‌ನಲ್ಲಿ ಸರ್ದಾರ್ ಪಟೇಲ್ ಹೇಳಿಕೆಯನ್ನು ಉಲ್ಲೇಖಿಸಿರುವ ಸಿಎಂ ಚರಂಜಿತ್ ಸಿಂಗ್ ಚನ್ನಿ "ಕರ್ತವ್ಯಕ್ಕಿಂತ ಜೀವದ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು, ಭಾರತದಂತಹ ದೇಶದಲ್ಲಿ ದೊಡ್ಡ ಜವಾಬ್ದಾರಿಯನ್ನು ತೆಗೆದುಕೊಳ್ಳಬಾರದು - ಸರ್ದಾರ್ ವಲ್ಲಭಭಾಯಿ ಪಟೇಲ್" ಎಂದು ಉಲ್ಲೇಖಿಸಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಟಿಂಡಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದಾಗ, ನಾನು ಜೀವಂತವಾಗಿ ಬಟಿಂಡಾ ವಿಮಾನ ನಿಲ್ದಾಣವನ್ನು ತಲುಪಿದ್ದೇನೆಂದು ಇದಕ್ಕಾಗಿ ಮುಖ್ಯಮಂತ್ರಿಗೆ ಧನ್ಯವಾದ ತಿಳಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದರು. 

Scroll to load tweet…

ಫಿರೋಜ್‌ಪುರ ಸಮಾವೇಶದಲ್ಲಿ ಜನಸಂದಣಿಯನ್ನು ಕಂಡಿಲ್ಲವೆಂದು ಚನ್ನಿ ಟಾಂಗ್

ಫಿರೋಜ್‌ಪುರದಲ್ಲಿ ಮೋದಿಯವರ ಸಮಾವೇಶವನ್ನು ರದ್ದುಗೊಳಿಸಲಾಗಿತ್ತು. ಇದಕ್ಕೆ ಮಳೆಯೇ ಪ್ರಮುಖ ಕಾರಣ ಎನ್ನಲಾಗಿದೆ. ಹಲವಾರು ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಕೆಲವೇ ಜನರು ಸಮಾವೇಶ ನಡೆಯುತ್ತಿದ್ದ ಸ್ಥಳದಲ್ಲಿ ಕುಳಿತಿರುವುದು ಕಂಡು ಬಂದಿದೆ. ಹೀಗಾಗಿ ಜನಸಂದಣಿ ಕೊರತೆಯಿಂದ ಮೋದಿಯವರ ಸಮಾವೇಶ ರದ್ದುಗೊಳಿಸಲಾಯಿತು ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ. ಇದೇ ವಿಚಾರವಾಗಿ ಟಾಂಗ್ ನೀಡಿರುವ ಸಿಎಂ ಚನ್ನಿ ಟ್ವೀಟ್‌ ಮಾಡಿದ್ದು, ಇದರಲ್ಲಿ ತಮ್ಮ ಸಮಾವೇಶದ ಚಿತ್ರಗಳನ್ನು ಹಂಚಿಕೊಂಡು - ಭಾರೀ ಮಳೆ ಮತ್ತು ಕೆಟ್ಟ ಹವಾಮಾನದ ನಡುವೆಯೂ ನಿಮ್ಮೆಲ್ಲರ ಉತ್ಸಾಹವನ್ನು ನೋಡಿ ನಾನು ಸಂಪೂರ್ಣವಾಗಿ ಆಶ್ಚರ್ಯಚಕಿತನಾದೆ ಎಂದು ಬರೆದಿದ್ದಾರೆ.

Scroll to load tweet…

ಏನಿದು ಘಟನೆ?

ಪ್ರಧಾನಿ ಮೋದಿ ಅವರು ಬುಧವಾರ ಬೆಳಗ್ಗೆ 11.30ಕ್ಕೆ ಬಟಿಂಡಾ ವಾಯುನೆಲೆಗೆ ತಲುಪಿದ್ದರು. ಪ್ರತಿಕೂಲ ಹವಾಮಾನದ ಕಾರಣ ಇಲ್ಲಿ 20 ನಿಮಿಷ ಕಾಯಲಾಗಿತ್ತು, ಆದರೂ ವಾಯುಮಾರ್ಗವಾಗಿ ಪ್ರಯಾಣಿಸಲು ಸಾಧ್ಯವಾಗದಾಗ ರಸ್ತೆ ಮೂಲಕ ಪ್ರಯಾಣಿಸುವ ನಿರ್ಧಾರಕ್ಕೆ ಬಂದಿದ್ದರು. ಬಳಿಕ ರಸ್ತೆ ಮೂಲಕ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳಿದರು. ರಸ್ತೆ ಪ್ರಯಾಣ ಸುಮಾರು 2 ಗಂಟೆಗಳಿಗಿಂತ ಹೆಚ್ಚು ಸಮಯವಿತ್ತು. ಆದರೆ ಪಂಜಾಬ್‌ನ ಡಿಜಿಪಿ ಭರವಸೆ ನೀಡಿದಾಗ, ಪ್ರಧಾನಿ ಬೆಂಗಾವಲು ಪಡೆ ಮುಂದೆ ಸಾಗಿತು. ಹುಸೇನಿವಾಲಾದಲ್ಲಿ ಹುತಾತ್ಮ ಸ್ಮಾರಕ ತೆರಳುವ ವೇಳೆ 30 ಕಿ.ಮೀ ಇರುವಾಗ ಅವರ ಬೆಂಗಾವಲು ಮೇಲ್ಸೇತುವೆ ತಲುಪಿತು, ಅಲ್ಲಿ ಪ್ರತಿಭಟನಾಕಾರರು ರಸ್ತೆಯನ್ನು ತಡೆದರು. ಮೋದಿ 15-20 ನಿಮಿಷಗಳ ಕಾಲ ಅಲ್ಲಿ ಸಿಲುಕಿಕೊಂಡರು. ಈ ಮೂಲಕ ಪ್ರಧಾನಿ ಭದ್ರತೆಯಲ್ಲಿ ದೊಡ್ಡ ಲೋಪವಾಗಿತ್ತು.