ಮೋದಿ ‘ಮನ್ ಕೀ ಬಾತ್’ಗೆ ಇಂದು ಶತಕ: ದೇಶದ 4 ಲಕ್ಷ ಕಡೆ ಕೇಳಲು ಬಿಜೆಪಿ ವ್ಯವಸ್ಥೆ
ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ಮೋದಿ ‘ಮನ್ ಕೀ ಬಾತ್’ ಹೆಸರಿನಲ್ಲಿ ರೇಡಿಯೋ ಭಾಷಣ ಮಾಡುತ್ತಾ ಬಂದಿದ್ದಾರೆ. ಪ್ರತಿ ಭಾಷಣದಲ್ಲೂ ಒಂದೊಂದು ವಿಷಯವನ್ನು ಅವರು ಆಯ್ದುಕೊಳ್ಳುತ್ತಾರೆ.
ನವದೆಹಲಿ (ಏಪ್ರಿಲ್ 30, 2023): ಪ್ರಧಾನಿ ನರೇಂದ್ರ ಮೋದಿಯವರ ಪ್ರಸಿದ್ಧ ‘ಮನ್ ಕೀ ಬಾತ್’ನ 100ನೇ ಕಂತಿನ ವಿಶೇಷ ಭಾಷಣ ಭಾನುವಾರ ಬೆಳಿಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ. 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಆರಂಭಿಸಿದ ಈ ರೇಡಿಯೋ ಭಾಷಣದ ಶತಕದ ಸಂಭ್ರಮವನ್ನು ಭರ್ಜರಿ ಯಶಸ್ವಿಗೊಳಿಸಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ದೇಶಾದ್ಯಂತ 4 ಲಕ್ಷ ಸ್ಥಳಗಳಲ್ಲಿ ಜನರಿಗೆ ಭಾಷಣ ಕೇಳಿಸಲು ಸನ್ನದ್ಧವಾಗಿದೆ. ಜೊತೆಗೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲೂ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ಮೋದಿ ‘ಮನ್ ಕೀ ಬಾತ್’ ಹೆಸರಿನಲ್ಲಿ ರೇಡಿಯೋ ಭಾಷಣ ಮಾಡುತ್ತಾ ಬಂದಿದ್ದಾರೆ. ಪ್ರತಿ ಭಾಷಣದಲ್ಲೂ ಒಂದೊಂದು ವಿಷಯವನ್ನು ಅವರು ಆಯ್ದುಕೊಳ್ಳುತ್ತಾರೆ. ಜೊತೆಗೆ ದೇಶದ ಮೂಲೆಮೂಲೆಯಿಂದ ಅಪರೂಪದ ಸಾಧಕರನ್ನು ಹುಡುಕಿ ಅವರ ಜೊತೆ ಭಾಷಣದ ನಡುವೆ ಮಾತನಾಡುತ್ತಾರೆ. ಇದು ಇಂದು ಅತ್ಯಂತ ಜನಪ್ರಿಯ ರೇಡಿಯೋ ಭಾಷಣವಾಗಿ ಹೊರಹೊಮ್ಮಿದ್ದು, ಇದೀಗ 100ನೇ ಭಾಷಣದ ಮೈಲುಗಲ್ಲನ್ನು ‘ಐತಿಹಾಸಿಕ’ ರೀತಿಯಲ್ಲಿ ಯಶಸ್ವಿಯಾಗಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ಇದನ್ನು ಓದಿ: 'ಮನ್ ಕೀ ಬಾತ್' ಮೋದಿ ಮತ್ತು ದೇಶದ ನಾಗರಿಕರ ನಡುವೆ ಸಂಪರ್ಕ ಬೆಸೆಯುವ ಮುಖ್ಯ ಸಾಧನ: ಆಮೀರ್ ಖಾನ್ ಪ್ರಶಂಸೆಯ ಮಳೆ
ಇಂದು ಏನೇನು ಕಾರ್ಯಕ್ರಮ:
ಮನ್ ಕೀ ಬಾತ್ 100ನೇ ಕಂತನ್ನು ದೇಶದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕನಿಷ್ಠ 100 ಕಡೆ ಜನರಿಗೆ ಕೇಳಿಸಲು ಬಿಜೆಪಿ ವ್ಯವಸ್ಥೆ ಮಾಡಿದೆ. ಒಟ್ಟಾರೆ 4 ಲಕ್ಷ ಬೂತ್‌ಗಳಲ್ಲಿ ಶ್ರವಣ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ದೇಶದ ಎಲ್ಲಾ ರಾಜಭವನ ಹಾಗೂ ಬಿಜೆಪಿ ಮುಖ್ಯಮಂತ್ರಿಗಳ ಮನೆಯಲ್ಲಿ ಆಹ್ವಾನಿತ ಗಣ್ಯರಿಗೆ ಭಾಷಣ ಕೇಳಿಸಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಕಳೆದ 99 ಎಪಿಸೋಡ್‌ಗಳಲ್ಲಿ ಮೋದಿ ಮಾತನಾಡಿದ 500ರ ಪೈಕಿ 105 ಜನರನ್ನು ದೆಹಲಿಗೆ ಆಹ್ವಾನಿಸಲಾಗಿದೆ.
ಎಲ್ಲಾ ರಾಜ್ಯಗಳಿಂದ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ರಾಜಭವನಕ್ಕೆ ಆಹ್ವಾನಿಸಲಾಗಿದ್ದು, ಅವರು ರಾಜ್ಯಪಾಲರ ಜೊತೆ ಕುಳಿತು ಭಾಷಣ ಆಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಎಲ್ಲಾ ಬಿಜೆಪಿ ಶಾಸಕರು ಹಾಗೂ ಸಂಸದರಿಗೂ ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮನ್ ಕೀ ಬಾತ್ ಭಾಷಣವನ್ನು ಜನರಿಗೆ ಕೇಳಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ನಡ್ಡಾ ಹಾಗೂ ಪಕ್ಷದ ಹಿರಿಯ ನಾಯಕರು ಈ ಕುರಿತು ಎಲ್ಲೆಡೆ ವಿಡಿಯೋ ಕಾನ್ಫರೆನ್ಸ್‌ಗಳನ್ನು ನಡೆಸಲಿದ್ದಾರೆ. ಹಿಂದೆಂದೂ ಕೇಳರಿಯದ ರೀತಿಯಲ್ಲಿ 4 ಲಕ್ಷ ಸ್ಥಳಗಳಲ್ಲಿ ಭಾಷಣ ಆಲಿಸಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಾಕಷ್ಟು ಸಂಘಟನೆಗಳು ಕೂಡ ಭಾಷಣವನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ಕೇಳಿಸಲು ಮುಂದೆ ಬಂದಿವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್ ತಿಳಿಸಿದ್ದಾರೆ.
ಇದನ್ನೂ ಓದಿ: ಆಫ್ರಿಕಾದಿಂದ ಬಂದ ಚೀತಾಗಳಿಗೆ ಮರುನಾಮಕರಣ: ಮೋದಿ ಸಲಹೆಯಂತೆ ಹೆಸರು ಸೂಚಿಸಿದ್ದ ಜನತೆ
23 ಕೋಟಿ ಜನ ಆಲಿಸುವ ಸೂಪರ್ ಹಿಟ್ ಭಾಷಣ
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದ ಎಲ್ಲಾ ಜನರನ್ನು ನೇರವಾಗಿ ತಲುಪಲು ಕಂಡುಕೊಂಡ ಸುಲಭ ಮಾರ್ಗವಾದ ‘ಮನ್ ಕೀ ಬಾತ್’ ಭಾಷಣ ಇಂದು ಭಾರತವಷ್ಟೇ ಅಲ್ಲ ಬೇರೆ ಬೇರೆ ದೇಶಗಳಲ್ಲೂ ಭಾರತೀಯರ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿದೆ.
- 23 ಕೋಟಿ ಜನ: ಇಷ್ಟು ಸರಾಸರಿ ಜನ ಪ್ರತಿ ಮನ್ ಕೀ ಬಾತ್ ಭಾಷಣವನ್ನು ಆಲಿಸುತ್ತಾರೆ
- 23 ಭಾಷೆ: ಇಷ್ಟು ಭಾರತೀಯ ಭಾಷೆಗಳಲ್ಲಿ ಮನ್ ಕೀ ಬಾತ್ ಪ್ರಸಾರವಾಗುತ್ತದೆ
- 29 ಉಪಭಾಷೆ: ಇಷ್ಟು ಭಾರತೀಯ ಉಪಭಾಷೆಗಳಲ್ಲಿ ಮನ್ ಕೀ ಬಾತ್ ಬಿತ್ತರಿಸಲಾಗುತ್ತದೆ
- 11 ವಿದೇಶಿ ಭಾಷೆ: ಇಷ್ಟು ವಿದೇಶಿ ಭಾಷೆಗಳಲ್ಲೂ ಮನ್ ಕೀ ಬಾತ್ ಪ್ರಸಾರವಾಗುತ್ತದೆ
- 500 ಸಾಧಕರು: ವಿವಿಧ ಕ್ಷೇತ್ರದ ಇಷ್ಟು ಸಾಧಕರ ಜೊತೆ ಮೋದಿ ಈವರೆಗೆ ಮಾತನಾಡಿದ್ದಾರೆ
- 19-34 ವರ್ಷ: ಮನ್ ಕೀ ಬಾತ್‌ನ ಶ್ರೋತೃಗಳಲ್ಲಿ 72% ಜನ ಈ ವಯೋಮಾನದವರು
ಇದನ್ನೂ ಓದಿ: ಅಂಗಾಂಗ ದಾನ ಮಾಡಿ: 99ನೇ ಮನ್ ಕೀ ಬಾತ್ ಭಾಷಣದಲ್ಲಿ ಜನತೆಗೆ ಮೋದಿ ಕರೆ
5 ರೂ. ಸ್ಟಾಂಪ್, 100 ರೂ. ನಾಣ್ಯ ಬಿಡುಗಡೆ
ಮನ್ ಕೀ ಬಾತ್ 100ನೇ ಕಂತು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅದರ ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ಹಾಗೂ ನಾಣ್ಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. 5 ರೂ. ವಿಶೇಷ ಅಂಚೆಚೀಟಿ ಹಾಗೂ 100 ರೂ. ‘ಸ್ಮರಣಾರ್ಥ ನಾಣ್ಯ’ವನ್ನು ಅವರು ಲೋಕಾರ್ಪಣೆ ಮಾಡಿದ್ದಾರೆ.
ಮನ್ ಕೀ ಬಾತ್ ಕಾರ್ಯಕ್ರಮವು ಸಮುದಾಯಗಳು ಮುನ್ನಡೆಸುವ ನೈರ್ಮಲ್ಯ, ಆರೋಗ್ಯ, ಮಹಿಳಾ ಆರ್ಥಿಕ ಸಬಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳಿಗೆ ಸಂಬಂಧಿಸಿದ ವಿಷಯಗಳ ಕಾರ್ಯಚಟುವಟಿಕೆಗಳಿಗೆ ಉತ್ತೇಜನ ನೀಡಿದೆ. ಪ್ರಧಾನಿ ಮೋದಿಗೆ 100ನೇ ಸಂಚಿಕೆಯ ಶುಭಾಶಯಗಳು.
- ಬಿಲ್‌ಗೇಟ್ಸ್, ಮೈಕ್ರೋಸಾಫ್ಟ್ ಸಂಸ್ಥಾಪಕ
ಇದನ್ನೂ ಓದಿ: Mann Ki Baat: ಉದಯಿಸುತ್ತಿರುವ ಭಾರತೀಯ ಶಕ್ತಿಯಲ್ಲಿ 'ನಾರಿ ಶಕ್ತಿ' ಮಹತ್ವದ ಪಾತ್ರ ವಹಿಸುತ್ತಿದೆ: ಮೋದಿ ಶ್ಲಾಘನೆ