ಅಂಗಾಂಗ ದಾನ ಮಾಡಿ: 99ನೇ ಮನ್ ಕೀ ಬಾತ್ ಭಾಷಣದಲ್ಲಿ ಜನತೆಗೆ ಮೋದಿ ಕರೆ
ಅಂಗಾಂಗ ದಾನಿಗಳು ದೇವರ ಸಮಾನ, ದಾನ ಪ್ರಕ್ರಿಯೆ ಸರಳಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ‘ಮನ್ ಕೀ ಬಾತ್’ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ನವದೆಹಲಿ (ಮಾರ್ಚ್ 27, 2023): ಅಂಗಾಂಗ ದಾನದಂಥ ಮಾನವೀಯ ಕೆಲಸ ಮಾಡಬೇಕು ಎಂದು ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಅಲ್ಲದೇ ‘ಈ ನಿಟ್ಟಿನಲ್ಲಿ ನಮ್ಮ ಏಕರೂಪ ನೀತಿಯನ್ನು ರೂಪಿಸುತ್ತಿದ್ದು, ಅಂಗಾಂಗ ದಾನ ಪ್ರಕ್ರಿಯೆ ಇದರಿಂದ ಸರಳವಾಗಲಿದೆ’ ಎಂದಿದ್ದಾರೆ.
ಭಾನುವಾರ ‘ಮನ್ ಕೀ ಬಾತ್’ ರೇಡಿಯೋ ಭಾಷಣದ 99ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ‘ಮರಣಾನಂತರ ಅಂಗಾಂಗ ದಾನ ಮಾಡುವವರು ಅದನ್ನು ಸ್ವೀಕರಿಸುವವರಿಗೆ ‘ದೇವರ ಸಮಾನ’ ಆಗಿರುತ್ತಾರೆ. ಇತ್ತೀಚೆಗೆ ದೇಶದಲ್ಲಿ ಅಂಗಾಂಗ ದಾನದ ಕುರಿತು ಹೆಚ್ಚಿನ ಜಾಗೃತಿ ಮೂಡಿದ್ದು ತೃಪ್ತಿದಾಯಕವಾಗಿದೆ’ ಎಂದರು. ಅಲ್ಲದೇ ತಮ್ಮ ಮೃತ ಕುಟುಂಬ ಸದಸ್ಯರ ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡ ಕುಟುಂಬಸ್ಥರ ನಿರ್ಧಾರವನ್ನು ಮೋದಿ ಶ್ಲಾಘಿಸಿದರು.
ಇದನ್ನು ಓದಿ: Mann Ki Baat: ಉದಯಿಸುತ್ತಿರುವ ಭಾರತೀಯ ಶಕ್ತಿಯಲ್ಲಿ 'ನಾರಿ ಶಕ್ತಿ' ಮಹತ್ವದ ಪಾತ್ರ ವಹಿಸುತ್ತಿದೆ: ಮೋದಿ ಶ್ಲಾಘನೆ
ಕೊರೋನಾ ಬಗ್ಗೆ ಎಚ್ಚರ:
ಕೆಲವೆಡೆ ಕೊರೋನಾ ಹೆಚ್ಚಾಗುತ್ತಿದ್ದು ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ ದೇಶದ ಸೋಲಾರ್ ಶಕ್ತಿ ಅಭಿವೃದ್ಧಿಯನ್ನು ಪ್ರಶಂಸಿಸಿದ ಅವರು ದೇಶದಲ್ಲಿ ‘ಮಹಿಳಾ ಶಕ್ತಿ’ ದೊಡ್ಡ ಪಾತ್ರ ವಹಿಸುತ್ತಿದೆ ಎಂದರು. ಈ ವೇಳೆ ಆಸ್ಕರ್ ವಿಜೇತ ಭಾರತೀಯ ಚಿತ್ರಗಳ ಬಗ್ಗೆಯೂ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು.
ಶೃಂಗೇರಿ ಶಾರದಾ ದೇವಿ ಸ್ಮರಿಸಿದ ಮೋದಿ
ಇದೇ ವೇಳೆ, ಇತ್ತೀಚೆಗೆ ಕಾಶ್ಮೀರದ ಕುಪ್ವಾರಾದಲ್ಲಿ ಕರ್ನಾಟಕದ ಶೃಂಗೇರಿಯಿಂದ ಕಳುಹಿಸಲ್ಪಟ್ಟ ಶಾರದಾ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶಾರದಾ ಮಂದಿರವನ್ನು ಉದ್ಘಾಟಿಸಲಾಗಿತ್ತು. ಈ ಬಗ್ಗೆ ಮನ್ ಕೀ ಬಾತ್‌ನಲ್ಲಿ ಮಾತನಾಡಿದ ಮೋದಿ, ‘ಕಾಶ್ಮೀರದ ಕಮಲ, ಹೂವು, ಸುಗಂಧ ಎಂದು ಮಾತನಾಡುವಾಗ ಅದೇ ಕಮಲದಲ್ಲಿ ಕುಳಿತ ಶಾರದೆ ನೆನಪಾಗುವುದು ಸಹಜ. ಕೆಲ ದಿನಗಳ ಹಿಂದೆ ಕುಪ್ವಾರಾದಲ್ಲಿ ತಾಯಿ ಶಾರದೆಯ ದೇವಸ್ಥಾನವನ್ನು ಉದ್ಘಾಟಿಸಲಾಯಿತು. ಶಾರದಾ ಪೀಠಕ್ಕೆ ಹೋಗುವ ಮಾರ್ಗದಲ್ಲಿಯೇ ಈ ದೇವಾಲಯ ನಿರ್ಮಿಸಲಾಗಿದೆ. ನಿರ್ಮಾಣ ಕಾರ್ಯದಲ್ಲಿ ಸ್ಥಳೀಯರು ಸಾಕಷ್ಟು ಸಹಾಯ ಮಾಡಿದ್ದಾರೆ. ಈ ಶುಭ ಕಾರ್ಯಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ನಾನು ಅಭಿನಂದಿಸುತ್ತೇನೆ’ ಎಂದರು.
ಇದನ್ನೂ ಓದಿ: Mann Ki Baat: ಏಕತಾ ದಿನದ ಸ್ಪರ್ಧೆ ವಿಜೇತ ಚಾಮರಾಜನಗರ ಜಿಲ್ಲೆಯ ಮಂಜುನಾಥ್‌ಗೆ ಪ್ರಧಾನಿ ಮೋದಿ ಶ್ಲಾಘನೆ
ಮುಂದಿನ ತಿಂಗಳು 100ನೇ ಮನ್ ಕೀ ಬಾತ್
ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ರೇಡಿಯೋ ಕಾರ‍್ಯಕ್ರಮ 100ನೇ ಸಂಚಿಕೆ ಪೂರೈಸಲಿದೆ. ಈ ಬಗ್ಗೆ ತಮ್ಮ 99ನೇ ‘ಮನ್ ಕೀ ಬಾತ್’ನಲ್ಲಿ ಮಾತನಾಡಿದ ಮೋದಿ, ‘100ನೇ ಸಂಚಿಕೆ ಮುಂದಿನ ತಿಂಗಳು (ಏಪ್ರಿಲ್ 30ಕ್ಕೆ) ಪ್ರಸಾರ ಆಗಲಿದೆ. ನಾನು ಅಂದು ಪ್ರಸ್ತಾಪಿಸಬಹುದಾದ ವಿಷಯಗಳ ಕುರಿತು ಸಲಹೆ ನೀಡಿ’ ಎಂದು ಜನರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: Mann Ki Baat: ಪರಿಸರ ಕಾಳಜಿ ಜತೆಗೆ ಕನ್ನಡದ ಅರಿವು ಮೂಡಿಸುತ್ತಿರುವ ಸುರೇಶ್ ಕುಮಾರ್ ಶ್ಲಾಘಿಸಿದ ಮೋದಿ