'ಜಿಂದಗಿ ಕೆ ಸಾಥ್ ಬೀ, ಜಿಂದಗಿ ಕೆ ಬಾದ್ ಬೀ..' ಎಲ್‌ಐಸಿ ಸ್ಲೋಗನ್ ಹೇಳಿಕೆ ಕಾಂಗ್ರೆಸ್‌ಗೆ ತಿವಿದ ಮೋದಿ!
ಸಂಪತ್ತಿನ ಮರುಹಂಚಿಕೆ ಮಾಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ ಹೇಳಿಕೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಮತ್ತೊಂದು ಅಸ್ತ್ರ ನೀಡಿದೆ. ಪಿತ್ರಾರ್ಜಿತ ಆಸ್ತಿ ತೆರಿಗೆ ಪ್ರಸ್ತಾಪ ಮಾಡಿದ ಕಾಂಗ್ರೆಸ್‌ಅನ್ನು ನರೇಂದ್ರ ಮೋದಿ ತಮ್ಮ ಚುನಾವಣಾ ಸಮಾವೇಶದಲ್ಲಿ ಟೀಕೆ ಮಾಡಿದ್ದಾರೆ.
ನವದೆಹಲಿ (ಏ.24): ಸಂಪತ್ತಿನ ಮರುಹಂಚಿಕೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಬುಧವಾರದ ವೇಳೆ ಇನ್ನೊಂದು ಬ್ರಹ್ಮಾಸ್ತ್ರ ಸಿಕ್ಕಿದೆ. ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಪ್ರಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಮಾತನಾಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಇರುವಾಗಲೂ ನಿಮ್ಮ ಮೇಲೆ ತೆರಿಗೆ ಭಾರ ಹಾಕುತ್ತದೆ. ನೀವು ಸಾವು ಕಂಡ ಬಳಿಕ ನಿಮ್ಮ ಆಸ್ತಿಯ ಶೇ. 55ರಷ್ಟನ್ನು ತೆಗೆದುಕೊಳ್ಳುವ ಸಂಚು ರೂಪಿಸುತ್ತಿದೆ ಎಂದು ಹೇಳಿದ್ದರು. ಸ್ಯಾಮ್ ಪ್ರಿತ್ರೋಡಾ ಕೆಲ ದಿನಗಳ ಹಿಂದೆ ಸಂಪತ್ತಿನ ಮರುಹಂಚಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ವೇಳೆ, ಅಮೆರಿಕದಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ಇದೆ. ವ್ಯಕ್ತಿಯೊಬ್ಬ ಸಾವು ಕಂಡ ಬಳಿಕ ಆತನ ಆಸ್ತಿಯಲ್ಲಿ ಶೇ. 45ರಷ್ಟು ಮಾತ್ರವೇ ಆತನ ಮಕ್ಕಳಿಗೆ ಹೋಗುತ್ತದೆ. ಉಳಿದ ಶೇ. 55ರಷ್ಟು ಸರ್ಕಾರಕ್ಕೆ ಹೋಗಲಿದೆ. ಇಂಥ ಕಾನೂನು ತರುವ ಅಗತ್ಯವಿದೆ ಎಂದಿದ್ದರು. ಪ್ರಧಾನಿ ಮೋದಿ ಇದೇ ಹೇಳಿಕೆಯೊಂದಿಗೆ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಕಾಂಗ್ರೆಸ್‌ನ ಆತಂಕಕಾರಿ ಉದ್ದೇಶದ ಬಗ್ಗೆ ಛತ್ತೀಸ್‌ಗಢದ ಸರ್ಗುಜಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಎಲ್‌ಐಸಿಯ ಸ್ಲೋಗನ್ ಮೂಲಕ ಕಾಂಗ್ರೆಸ್ ಪಕ್ಷವನ್ನು ತಿವಿದರು. ಕಾಂಗ್ರೆಸ್ ಪಕ್ಷಕ್ಕೆ ಇರುವುದು ಒಂದೇ ಮಂತ್ರ.. ಜನರನ್ನು ಜಿಂದಗಿ ಕೆ ಸಾಥ್ ಬೀ, ಜಿಂದಗಿ ಕೆ ಬಾದ್ ಬೀ.. (ಜೀವನದ ಜೊತೆಯಲ್ಲೂ ಜೀವನದ ನಂತರವೂ) ಲೂಟಿ ಮಾಡುವುದು' ಎಂದು ಟೀಕೆ ಮಾಡಿದ್ದಾರೆ.
ಹೆಚ್ಚಿನ ತೆರಿಗೆಗಳನ್ನು ವಿಧಿಸುವ ಮೂಲಕ ತನ್ನ ಖಜಾನೆಯನ್ನು ತುಂಬಿಸಿಕೊಳ್ಳಲು ಕಾಂಗ್ರೆಸ್ ಬಯಸಿದೆ. ಜೀವನಪೂರ್ತಿ ಜನರು ತಮ್ಮ ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ತಮ್ಮ ಮಕ್ಕಳಿಗೆ ವರ್ಗಾಯಿಸಲು ಬಿಡುವುದಿಲ್ಲ ಎಂದು ನೇರ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ನ ರಾಜಕುಮಾರ ಹಾಗೂ ರಾಜಕುಟುಂಬದ ಸಲಹೆಗಾರ (ಸ್ಯಾಮ್ ಪಿತ್ರೋಡಾ) ಮಧ್ಯಮ ವರ್ಗದ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸಬೇಕೆಂದು ಕೆಲವು ಸಮಯದ ಹಿಂದೆ ಹೇಳಿದ್ದರು' ಎನ್ನುವುದನ್ನೂ ಮೋದಿ ನೆನಪಿಸಿದ್ದಾರೆ. ಪಿತ್ರಾರ್ಜಿತ ತೆರಿಗೆ ವಿಧಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ, ತಂದೆ-ತಾಯಿಯಿಂದ ಪಡೆದ ಆಸ್ತಿಗೂ ತೆರಿಗೆ ವಿಧಿಸುತ್ತೇವೆ, ನಿಮ್ಮ ಶ್ರಮದಿಂದ ಕೂಡಿದ ಸಂಪತ್ತು ನಿಮ್ಮ ಮಕ್ಕಳಿಗೆ ಸಿಗುವುದಿಲ್ಲ, ಬದಲಿಗೆ ಕಾಂಗ್ರೆಸ್‌ನ ಹಣದಾಹದ ಉಗುರುಗಳು ಅದನ್ನು ನಿಮ್ಮಿಂದ ಕಸಿದುಕೊಳ್ಳುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಕುಟುಂಬದ ಯಾರ ಹೆಸರನ್ನೂ ಹೇಳದೇ ಪ್ರಧಾನಿ ಮೋದಿ ಗಾಂಧಿ ಕುಟುಂಬವನ್ನು ಟೀಕಿಸಿದರು. 'ಇಡೀ ಕಾಂಗ್ರೆಸ್ ಪಕ್ಷವನ್ನು ತಮ್ಮ ಪೂರ್ವಜರ ಆಸ್ತಿ ಎಂದು ಪರಿಗಣಿಸಿ ಅದನ್ನು ತಮ್ಮ ಮಕ್ಕಳಿಗೆ ಒಪ್ಪಿಸಿದ ಜನರು ಈಗ ಭಾರತೀಯರು ತಮ್ಮ ಆಸ್ತಿಯನ್ನು ತಮ್ಮ ಮಕ್ಕಳಿಗೆ ವರ್ಗಾಯಿಸಲು ಬಯಸುವುದಿಲ್ಲ' ಎಂದು ಹೇಳಿದ್ದಾರೆ.
ಪಿತ್ರಾರ್ಜಿತ ಆಸ್ತಿಯಲ್ಲಿ ಶೇ.45 ಮಕ್ಕಳಿಗೆ, ಶೇ.55 ಸರ್ಕಾರಕ್ಕೆ, ಸ್ಯಾಮ್ ಪಿತ್ರೋಡಾ ಸಂಪತ್ತಿನ ಮರು ಹಂಚಿಕೆ ವಿವಾದ
ಆಗಿದ್ದೇನು: ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಸಂಪತ್ತಿನ ಮರುಹಂಚಿಕೆ ಕುರಿತು ತಮ್ಮ ಪಕ್ಷದ ನಿಲುವನ್ನು ಬೆಂಬಲಿಸಿದರು ಮತ್ತು ಕೆಲವು ಅಮೇರಿಕನ್ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಪಿತ್ರಾರ್ಜಿತ ತೆರಿಗೆಯ ಪರಿಕಲ್ಪನೆಯನ್ನು ಉಲ್ಲೇಖಿಸಿ ಅದೇ ಥರದ ನೀತಿಯನ್ನು ಭಾರತದಲ್ಲೂ ಬರಬೇಕು ಎಂದು ಹೇಳಿದ್ದರು.
'ತಾಯಂದಿರೇ.. ನಿಮ್ಮ ಮಂಗಳಸೂತ್ರ ಕೂಡ ಸೇಫ್ ಆಗಿರೋಕೆ ಬಿಡೋದಿಲ್ಲ..' ಮೋದಿ ಮಾತಿಗೆ ಕಾಂಗ್ರೆಸ್ ಕೊತಕೊತ!
"ಅಮೆರಿಕದಲ್ಲಿ, ಪಿತ್ರಾರ್ಜಿತ ತೆರಿಗೆ ಇದೆ. ಒಬ್ಬನು $ 100 ಮಿಲಿಯನ್ ಮೌಲ್ಯದ ಸಂಪತ್ತನ್ನು ಹೊಂದಿದ್ದರೆ ಮತ್ತು ಅವನು ಸತ್ತಾಗ, ಅವನು ಬಹುಶಃ 45% ಅನ್ನು ತನ್ನ ಮಕ್ಕಳಿಗೆ ವರ್ಗಾಯಿಸಬಹುದು ಮತ್ತು 55% ಸರ್ಕಾರಕ್ಕೆ ವರ್ಗಾಯಿಸಬೇಕು. ಇದು ಬಹಳ ವಿಶೇಷ ಕಾನೂನು. ಇದರ ಅರ್ಥ ಇಷ್ಟೇ. ನಿಮ್ಮ ಯುಗದಲ್ಲಿ ನೀವು ಆಸ್ತಿ ಮಾಡಿರುತ್ತೀರಿ. ನಿಮ್ಮ ಸಾವಿನ ಬಳಿಕ, ಈ ಆಸ್ತಿಯನ್ನು ಸಾರ್ವಜನಿಕರಿಗೆ ಬಿಟ್ಟು ಹೋಗಬೇಕು. ಹಾಗಂಥ ಪೂರ್ತಿ ಆಸ್ತಿಯಲ್ಲ. ಅರ್ಧದಷ್ಟಾದರೂ ಜನರಿಗೆ ನೀಡಬೇಕು. ಇದು ನ್ಯಾಯೋಚಿತ ಎಂದು ನನಗೆ ಅನಿಸುತ್ತದೆ ಎಂದಿದ್ದರು.