'ಭಾರತದ ಸಂಕಲ್ಪವನ್ನು ಇಂಥ ಕೃತ್ಯ ದುರ್ಬಲ ಮಾಡೋದಿಲ್ಲ..' ಕೆನಡಾ ಹಿಂದೂ ದೇವಾಲಯ ದಾಳಿಗೆ ಮೋದಿ ಖಂಡನೆ
ಕೆನಡಾದಲ್ಲಿ ಹಿಂದೂ ಮಂದಿರದ ಮೇಲೆ ನಡೆದ ದಾಳಿ ಮತ್ತು ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ ಹಾಕಿರೋದನ್ನ ಪ್ರಧಾನಿ ಮೋದಿ ಖಂಡಿಸಿದ್ದಾರೆ. ಕೆನಡಾ ಸರ್ಕಾರ ನ್ಯಾಯ ಒದಗಿಸಬೇಕು ಅಂತಲೂ ಮೋದಿ ಆಗ್ರಹಿಸಿದ್ದಾರೆ.
ನವದೆಹಲಿ (ನ.4): ಭಾರತ-ಕೆನಡಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಹೇಳಿಕೆ ನೀಡಿದ್ದಾರೆ. ಕೆನಡಾದಲ್ಲಿ ಹಿಂದೂ ಮಂದಿರದ ಮೇಲೆ ಉದ್ದೇಶಪೂರ್ವಕವಾಗಿ ನಡೆಸಿದ ಹಿಂಸಾಚಾರ ಮತ್ತು ಭಾರತೀಯ ರಾಜತಾಂತ್ರಿಕರನ್ನು ಬೆದರಿಸುವ ಪ್ರಯತ್ನಗಳನ್ನು ಪ್ರಧಾನಿ ಮೋದಿ ಖಂಡಿಸಿದ್ದಾರೆ. ಕೆನಡಾ ಸರ್ಕಾರ ನ್ಯಾಯ ಖಚಿತಪಡಿಸಿಕೊಳ್ಳಬೇಕು ಮತ್ತು ಅಂತರರಾಷ್ಟ್ರೀಯ ಕಾನೂನುಗಳನ್ನು ಪಾಲಿಸಬೇಕು ಎಂದು ಮೋದಿ ಸಂದೇಶ ರವಾನಿಸಿದ್ದಾರೆ. ಕೆನಡಾದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪ್ರಧಾನಿ ಮೋದಿ ಎಕ್ಸ್ (ಟ್ವಿಟರ್) ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. “ಕೆನಡಾದಲ್ಲಿ ಹಿಂದೂ ಮಂದಿರದ ಮೇಲೆ ಉದ್ದೇಶಪೂರ್ವಕವಾಗಿ ನಡೆಸಿದ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ನಮ್ಮ ರಾಜತಾಂತ್ರಿಕರನ್ನು ಬೆದರಿಸುವ ಹೇಡಿತನದ ಪ್ರಯತ್ನಗಳು ಅಷ್ಟೇ ಭಯಾನಕವಾಗಿವೆ. ಇಂತಹ ಹಿಂಸಾಚಾರಗಳು ಭಾರತದ ಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ. ಕೆನಡಾ ಸರ್ಕಾರ ನ್ಯಾಯ ಖಚಿತಪಡಿಸಿಕೊಳ್ಳುತ್ತದೆ ಮತ್ತು ಕಾನೂನು ಪಾಲನೆ ಮಾಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಮೋದಿ ಬರೆದಿದ್ದಾರೆ.
ಕೆನಡಾದಲ್ಲಿ ಖಲಿಸ್ತಾನಿ ಪರ ಬೆಂಬಲಿಗರಿಂದ ಭಾರತೀಯರ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಪ್ರಧಾನಿ ಮೋದಿಯವರ ಮೊದಲ ಅಧಿಕೃತ ಹೇಳಿಕೆ ಇದಾಗಿದೆ.
ಭಾರತ ಸರ್ಕಾರವು "ಉಗ್ರವಾದಿಗಳು ಮತ್ತು ಪ್ರತ್ಯೇಕತಾವಾದಿಗಳಿಂದ ನಡೆಸಲಾದ ಹಿಂಸಾಚಾರವನ್ನು ಖಂಡಿಸುತ್ತದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಣೆ ನೀಡಿದ ಗಂಟೆಗಳ ನಂತರ ಪ್ರಧಾನಿ ಈ ಕೃತ್ಯವನ್ನು ಖಂಡಿಸಿದ್ದಾರೆ. ಪೂಜಾ ಸ್ಥಳಗಳನ್ನು ಸಮರ್ಪಕವಾಗಿ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಜಸ್ಟಿನ್ ಟ್ರುಡೊ ನೇತೃತ್ವದ ಕೆನಡಾ ಸರ್ಕಾರಕ್ಕೆ ಆಗ್ರಹಿಸಿದೆ.
ಅಮಿತ್ ಶಾ ವಿರುದ್ಧ ಸುಳ್ಳು ಆರೋಪ; ಕೆನಾಡಕ್ಕೆ ಎಚ್ಚರಿಕೆ ನೀಡಿದ ಭಾರತ
"ಎಲ್ಲಾ ಪೂಜಾ ಸ್ಥಳಗಳನ್ನು ಇಂತಹ ದಾಳಿಗಳಿಂದ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಕೆನಡಾ ಸರ್ಕಾರಕ್ಕೆ ಕರೆ ನೀಡುತ್ತೇವೆ. ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣದೀರ್ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೊಲೆ ತನಿಖೆಯಲ್ಲಿ ರಾಯಭಾರಿಯ ಹೆಸರು, ಕೆನಡಾ ವಿರುದ್ಧ ಭಾರತ ಗರಂ!