ಸಿಎಂ ಜೊತೆಗೆ ಮೋದಿ ಮೀಟಿಂಗ್: ಯೋಗಿ ಸೇರಿ ಮೂವರು ಮುಖ್ಯಮಂತ್ರಿ ಗೈರು!
ಮೋದಿ ಜೊತೆ ಮುಖ್ಯಮಂತ್ರಿಗಳ ಮೀಟಿಂಗ್| ಕೊರೋನಾ ಸೋಂಕು ಹೆಚ್ಚಳ, ನಿಯಂತ್ರಣ ಬಗ್ಗೆ ಚರ್ಚೆ| ಮೋದಿ ಸಭೆಗೆ ಮಮತಾ, ಯೋಗಿ ಸೇರಿ ಮೂವರು ಸಿಎಂ ಗೈರು
ನವದೆಹಲಿ(ಮಾ.17):ದೇಶದ ಕೆಲ ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಪಿಎಂ ಮೋದಿ ಸಿಎಂಗಳ ಸಭೆ ಕರೆದಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಈ ಸಭೆಯಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸಿಲ್ಲ. ಇನ್ನು ಮಾಧ್ಯಮಗಳಿಗೂ ತಾವು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವುದರಿಂದ ಭಾಗಿಯಾಗುತ್ತಿಲ್ಲ ಎಂದಿದ್ದಾರೆ.
ಇನ್ನುಳಿದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಛತ್ತೀಸ್‌ಗಢದ ಸಿಎಂ ಭೂಪೇಶ್ ವಘೇಲಾ ಕೂಡಾ ಈ ಸಭೆಗೆ ಗೈರಾಗಿದ್ದಾರೆ. ಯೋಗಿ ಆದಿತ್ಯನಾಥ್ ಅಸ್ಸಾಂ ಪ್ರವಾಸದಲ್ಲಿದ್ದಾರೆ. ಹೀಗಾಗಿ ಅವರ ಬದಲು ಉತ್ತರ ಪ್ರದೇಶದ ಆರೋಗ್ಯ ಸಚಿವ ಜಯ್ ಪ್ರತಾಪ್ ಸಿಂಗ್ ಈ ಸಭೆಯಲ್ಲಿ ಪಾಲ್ಗೊಂಡು ಪರಿಸ್ಥಿತಿ ವಿವರಿಸಲಿದ್ದಾರೆ.
ಇನ್ನು ಬಿಜೆಪಿ ನಾಯಕ ಅಮಿತ್ ಮಾಳವೀಯ ಈ ಸಭೆಯಲ್ಲಿ ಪಾಲ್ಗೊಳ್ಳದ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದ್ದಾರೆ. ಆಡಳಿತ ಎಂಬುವುದು ಮಮತಾ ಬ್ಯಾನರ್ಜಿಯ ಪ್ರಾಥಮಿಕತೆಯಲ್ಲಿ ಇಲ್ಲವೇ ಇಲ್ಲ. ಅವರು ಪ್ರತಿ ಬಾರಿ ಕೇಂದ್ರದ ಜೊತೆ ಸಹಕರಿಸುವ ಬದಲು ಸೆಣಸಾಡುವುದನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಕೊರೋನಾ ಮಹಾಮಾರಿ ವಿರುದ್ಧದ ಹೋರಾಟ ಹಾಗೂ ಲಸಿಕೆ ಅಭಿಯಾನ ಸಂಬಂಧಿ ಚರ್ಚೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಯೊಬ್ಬರು ಹೇಗೆ ಹೇಳಲು ಸಾಧ್ಯ ಎಂದಿದ್ದಾರೆ.