Asianet Suvarna News Asianet Suvarna News

ಒಂದೇ ವೇದಿಕೆಯಲ್ಲಿ 16 ಇಲಾಖೆಗಳಿಗೆ ಶಕ್ತಿ: 100 ಲಕ್ಷ ಕೋಟಿಯ ಗತಿಶಕ್ತಿಗೆ ಮೋದಿ ಚಾಲನೆ!

* ದೇಶದ ಮೂಲಸೌಕರ‍್ಯ ಕ್ಷೇತ್ರದಲ್ಲಿ ಕ್ರಾಂತಿ: ಮೋದಿ

* ಒಂದೇ ವೇದಿಕೆಯಲ್ಲಿ 16 ಇಲಾಖೆಗಳಿಗೆ ಶಕ್ತಿ

* 100 ಲಕ್ಷ ಕೋಟಿಯ ಗತಿಶಕ್ತಿಗೆ ಪ್ರಧಾನಿ ಚಾಲನೆ

 

PM Modi launches GatiShakti to boost India infra development pod
Author
Bangalore, First Published Oct 14, 2021, 9:17 AM IST

ನವದೆಹಲಿ(ಅ.14): ಮೂಲಸೌಕರ‍್ಯ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ 16 ವಿವಿಧ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಹೆಚ್ಚಿಸಿ, ಈ ಯೋಜನೆಗಳನ್ನು ತ್ವರಿತವಾಗಿ ಮುಗಿಸಬಲ್ಲ 100 ಲಕ್ಷ ಕೋಟಿ ರು. ಮೌಲ್ಯದ ಗತಿಶಕ್ತಿ ಮಾಸ್ಟರ್‌ ಪ್ಲಾನ್‌ಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಬುಧವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮೋದಿ, ಈ ಯೋಜನೆಯಿಂದ ಸರಕು ಸಾಗಣೆ ವೆಚ್ಚ ತಗ್ಗಲಿದೆ. ಸರಕುಗಳ ಪೂರೈಕೆ ಸಾಮರ್ಥ್ಯ ಹೆಚ್ಚಲಿದೆ ಹಾಗೂ ಯೋಜನೆಗಳ ವಿಳಂಬ ತಗ್ಗುತ್ತದೆ. ಮೂಲಸೌಕರ‍್ಯಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳು ಒಂದಕ್ಕೊಂದು ಸಂಯೋಜನೆಯಾಗಲಿದ್ದು, ಒಂದೇ ವೇದಿಕೆ ಮೇಲೆ ಬರಲಿವೆ. ಒಂದೇ ದೂರದೃಷ್ಟಿಇರಿಸಿಕೊಂಡು ಯೋಜನೆಗಳ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.

ಗುಣಮಟ್ಟದ ಮೂಲಸೌಕರ‍್ಯ ಇಲ್ಲದೇ ಅಭಿವೃದ್ಧಿ ಸಾಧ್ಯವಿಲ್ಲ. ಈಗ ಗತಿಶಕ್ತಿಯಿಂದಾಗಿ ರೈಲ್ವೆ ಇಲಾಖೆ(Railway Department), ವಿಮಾನಯಾನ ಇಲಾಖೆಯಿಂದ ಹಿಡಿದು ಕೃಷಿ ಇಲಾಖೆಯವರೆಗೆ(Agriculture Department) ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಲಿವೆ. ನಿಗದಿತ ಅವಧಿಯಲ್ಲಿ ಮೂಲಸೌಕರ‍್ಯ ಯೋಜನೆ ಪೂರ್ಣಗೊಳಿಸಿ ಉದ್ದೇಶಿತ ಗುರಿ ತಲುಪಲು ಅವಿರತ ಯತ್ನ ಮಾಡಲಾಗುವುದು. ಗತಿಶಕ್ತಿಯಿಂದ ಭಾರತ ‘ವಾಣಿಜ್ಯ ರಾಜಧಾನಿ’ಯಾಗಲಿದೆ. ಆಧಾರ್‌(Aadhar), ಜನಧನ(Jandhan), ಮೊಬೈಲ್‌ ರೀತಿ ಗತಿಶಕ್ತಿಯು(Gatishakti) ಮೌಲಸೌಕರ‍್ಯ ವಲಯದಲ್ಲಿ ಇತಿಹಾಸ ರಚಿಸಲಿದೆ’ ಎಂದರು.

ಇದೇ ವೇಳೆ ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿ ಹಿಂದಿನ ಕಾಂಗ್ರೆಸ್‌ ಸರ್ಕಾರವನ್ನು ಪರೋಕ್ಷವಾಗಿ ಚುಚ್ಚಿದ ಅವರು, ‘ಸ್ವಾತಂತ್ರ್ಯ ದೊರೆತು 70 ವರ್ಷ ಆದ ಬಳಿಕ ಭಾರತಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಈಗ ಅಭಿವೃದ್ಧಿ ಚಟುವಟಿಕೆ ನಡೆಯುತ್ತಿವೆ. ಇಷ್ಟೊಂದು ಚಟುವಟಿಕೆಯನ್ನು ಸ್ವತಂತ್ರ ಭಾರತ ಈವರೆಗೂ ಕಂಡಿರಲಿಲ್ಲ’ ಎಂದರು. ಇದಕ್ಕೆ ಉದಾಹರಣೆ ನೀಡಿದ ಅವರು, ‘1987ರಲ್ಲಿ ಮೊದಲ ಅಂತರ್‌ ರಾಜ್ಯ ಅನಿಲ ಕೊಳವೆ ಮಾರ್ಗ ಯೋಜನೆಗೆ ಚಾಲನೆ ಸಿಕ್ಕಿತ್ತು. 15 ಸಾವಿರ ಕಿ.ಮೀ. ದೂರದ ಈ ಯೋಜನೆ ಸಾಕಾರಗೊಂಡಿದ್ದು 2014ರಲ್ಲಿ. ಆದರೆ ಈಗ ಕೇವಲ 7 ವರ್ಷದಲ್ಲಿ 16 ಸಾವಿರ ಕಿ.ಮೀ. ಅನಿಲ ಕೊಳವೆ ಮಾರ್ಗ ಹಾಕಲಾಗಿದೆ. 2014ಕ್ಕಿಂತ ಮುಂಚೆ 9 ಸಾವಿರ ಕಿ.ಮೀ. ರೈಲು ಮಾರ್ಗ ಡಬ್ಲಿಂಗ್‌ ಮಾಡಲಾಗಿತ್ತು. ಆದರೆ ನಾವು 7 ವರ್ಷದಲ್ಲಿ 24 ಸಾವಿರ ಕಿ.ಮೀ. ಜೋಡಿ ಮಾರ್ಗ ನಿರ್ಮಿಸಿದ್ದೇವೆ ಎಂದು ವಿವರಿಸಿದರು. 2015ರಲ್ಲಿ ಕೇವಲ 250 ಕಿ.ಮೀ. ಮೆಟ್ರೋ ರೈಲು ಮಾರ್ಗ ಇತ್ತು. ಈಗ ಕೇವಲ 6 ವರ್ಷದಲ್ಲಿ 700 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣವಾಗಿದೆ. 1.5 ಲಕ್ಷ ಹಳ್ಳಿಗಳಿಗೆ ಆಪ್ಟಿಕಲ್‌ ಫೈಬರ್‌ ಕೇಬಲ್‌ ಅನ್ನು 7 ವರ್ಷದಲ್ಲಿ ಹಾಕಲಾಗಿದೆ. 2014ಕ್ಕಿಂತ ಮುನ್ನ ಕೇವಲ 60 ಗ್ರಾಮಗಳಿಗೆ ಈ ಸೌಲಭ್ಯ ಇತ್ತು ಎಂದರು.

ಏನಿದು ಗತಿಶಕ್ತಿ ಮಾಸ್ಟರ್‌ ಪ್ಲಾನ್‌?

- ಯೋಜನೆಗಳ ಜಾರಿಯಲ್ಲಿ ಸಮನ್ವಯಕ್ಕಾಗಿ ಆರಂಭಿಸಿದ ಹೊಸ ವೆಬ್‌ಸೈಟ್‌

- ಇದರಲ್ಲಿ ಇಡೀ ದೇಶದ 3ಡಿ ಮ್ಯಾಪಿಂಗ್‌, 16 ಸಚಿವಾಲಯಗಳ ಮಾಹಿತಿ

- ಈ ಸಚಿವಾಲಯಗಳ 2025ರವರೆಗಿನ ಹೊಸ ಯೋಜನೆಗಳ ಮಾಹಿತಿ ಲಭ್ಯ

- ಇದರಿಂದ ಸಚಿವಾಲಯ, ರಾಜ್ಯಗಳ ನಡುವೆ ಯೋಜನೆ ಜಾರಿಯಲ್ಲಿ ಸಮನ್ವಯ

ಯಾವ ಇಲಾಖೆಗಳ ನಡುವೆ ಸಮನ್ವಯ?

ಮೂಲಸೌಕರ‍್ಯ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ರೈಲ್ವೆ, ಹೆದ್ದಾರಿ, ಟೆಲಿಕಾಂ, ಹಡಗು, ಇಂಧನ, ಪೆಟ್ರೋಲಿಯಂ, ವಿಮಾನಯಾನ ಹಾಗೂ ಕೃಷಿ ಸೇರಿದಂತೆ 16 ಇಲಾಖೆಗಳ ನಡುವೆ ಸಮನ್ವಯ ಏರ್ಪಡಲಿದೆ. ಇವುಗಳೊಂದಿಗೆ ರಾಜ್ಯ ಸರ್ಕಾರಗಳೂ ಸಮನ್ವಯ ಸಾಧಿಸಲಿವೆ.

Follow Us:
Download App:
  • android
  • ios