ರೇಗಾಡಿದವರಿಗೆ ಟೀ ತಂದುಕೊಟ್ಟ 'ಹರಿವಂಶ್‌ಜೀ', ಉಪಸಭಾಪತಿಯ ನಡೆಗೆ ಭೇಷ್ ಎಂದ ಮೋದಿ!
ರಾಜ್ಯಸಭೆಯಲ್ಲಿ ಕೃಷಿ ಮಸೂದೆ ವಿರೋಧಿಸಿ ಕೋಲಾಹಲ, ಉಪಸಭಾಪತಿಗೆ ಅವಮಾನ| ದುರ್ವರ್ತನೆ ತೋರಿದ ಎಂಟು ಸದಸ್ಯರು ಅಮಾನತು| ಅಮಾನತುಗೊಂಡು ಪ್ರತಿಭಟಿಸುತ್ತಿದ್ದವರಿಗೆ ಟೀ ತಂದುಕೊಟ್ಟ ರಾಜ್ಯಸಭೆ ಉಪಸಭಾಪತಿ| ಹರಿವಂಶ್‌ಜೀ ನಡೆಗೆ ಮೋದಿ ಶ್ಲಾಘನೆ
ನವದೆಹಲಿ(ಸೆ.22): ಕೃಷಿ ಮಸೂದೆ ಸಂಬಂಧ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ ಹಾಗೂ ಉಪ ಸಭಾಪತಿಯನ್ನು ಅನುಚಿತವಾಗಿ ನಡೆಸಿಕೊಂಡ ಆರೋಪದಡಿ ಒಂದು ವಾರ ಅಮಾನತುಗೊಂಡು ಸಂಸತ್ ಆವರಣದಲ್ಲಿ ಪ್ರತಿಭಟಿಸುತ್ತಿದ್ದ ಸದಸ್ಯರಿಗೆ ಖುದ್ದು ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ತಮ್ಮ ಮನೆಯಲ್ಲಿ ತಯಾರಿಸಿದ್ದ ಚಹಾ ಕೊಟ್ಟಿದ್ದರು. ರಾಜ್ಯಸಭೆ ಉಪಸಭಾಪತಿಯ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಡೆಗೆ ಸೋಶಿಯಲ್ ಮಿಡಿಯಾ ಮಾತ್ರವಲ್ಲದೇ ಪಕ್ಷದ ನಾಯಕರೂ ಮನ ಸೋತಿದ್ದರು. ಇವೆಲ್ಲದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೂಡಾ ಅವರ ಭೇಷ್ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹರಿವಂಶ್ ಅವರ ನಡೆ ಸ್ಪೂರ್ತಿದಾಯಕವಾದದ್ದು, ಮುತ್ಸದ್ದಿ ನಡೆ ಎಂದು ಬಣ್ಣಿಸಿ, ಪ್ರತಿಯೊಬ್ಬ ಪ್ರಜಾಪ್ರಭುತ್ವದ ಪ್ರೇಮಿ ಹೆಮ್ಮೆಪಡುವಂಥದ್ದಾಗಿದೆ ಎಂದಿದ್ದಾರೆ.
ಪ್ರತಿಭಟನಾನಿರತ ರಾಜ್ಯಸಭಾ ಸದಸ್ಯರಿಗೆ ಖುದ್ದು ಟೀ ತಂದು ಕೊಟ್ಟ ಉಪಸಭಾಪತಿ!
ಅಲ್ಲದೇ ತಮ್ಮ ಮೇಲೆ ದಾಳಿ ನಡೆಸಲು ಮುಂದಾದ ಹಾಗೂ ಅವಮಾನ ಮಾಡಿದವರಿಗೆ ಸ್ವತಃ ತಾವೇ ಟೀ ಕೊಟ್ಟಿರುವುದು ಹರಿವಂಶ್ ಅವರ ಉದಾರ ಹಾಗೂ ವಿನಮ್ರ ಮನಸ್ಸನ್ನು ತೋರುತ್ತದೆ ಎಂದು ಹೇಳಿದ್ದಾರೆ. ಇಧೆ ವೇಳೆ ಬಿಹಾರಿಗರ ನಡವಳಿಕೆಯನ್ನೂ ಶ್ಲಾಘಿಸಿರುವ ಮೋದಿ ಶತಮಾನಗಳಿಂದ ಬಿಹಾರ ನಮಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸುತ್ತಿದೆ. ಈ ಅದ್ಭುತ ನೀತಿಗಳ ಸಾಲಿನಲ್ಲಿ ಹರಿವಂಶ್ ಅವರು ತಮ್ಮ ಮುತ್ಸದ್ದಿತನದಿಂದ ಪ್ರಜಾಪ್ರಭುತ್ವದ ಪ್ರೇಮಿಗಳು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಭಾನುವಾರ ನಡೆದದ್ದೇನು?
ಭಾನುವಾರದಂದು ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ(ಎಪಿಎಂಸಿ)ಯಿಂದ ಹೊರಗೆ, ದೇಶದ ಯಾವುದೇ ಭಾಗದಲ್ಲಾದರೂ ಉತ್ಪನ್ನ ಮಾರಲು ರೈತರಿಗೆ ಅವಕಾಶ ಕಲ್ಪಿಸುವ ಹಾಗೂ ಸಗಟು ವ್ಯಾಪಾರಿಗಳ ಜತೆ ಗುತ್ತಿಗೆ ಕರಾರು ಮಾಡಿಕೊಳ್ಳಲು ಅನ್ನದಾತರಿಗೆ ಅನುಮತಿ ನೀಡುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ 2 ಮಸೂದೆಗಳು ರಾಜ್ಯಸಭೆಯಲ್ಲಿ ತೀವ್ರ ವಿರೋಧದ ನಡುವೆ ಅಂಗೀಕಾರ ಪಡೆದಿವೆ. ಹೀಗಿರುವಾಗ ಹಿರಿಯರು ಹಾಗೂ ವಿಚಾರವಾದಿಗಳ ಸದನವಾಗಿರುವ ಸಂಸತ್ತಿನ ಮೇಲ್ಮನೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ರಾಜ್ಯಸಭೆ ಉಪಸಭಾಪತಿಯತ್ತ ನಿಯಮಾವಳಿ ಪುಸ್ತಕವನ್ನು ತೂರಿದ್ದರು.
'ಹಾಸಿಗೆ-ದಿಂಬು ಇಟ್ಟುಕೊಂಡು ಸಂಸದರ ಧರಣಿ' ಕರ್ನಾಟಕದಲ್ಲೂ ಆಗಿತ್ತು!
ಇದರ ಬೆನ್ನಲ್ಲೇ ಸೋಮವಾರದಂದು ಉಪ ಸಭಾಪತಿ ಹರಿವಂಶ್ ಎಲ್ಲ ನಿಯಮಗಳನ್ನು,ಸಂಸದೀಯ ಪ್ರಕ್ರಿಯೆಗಳನ್ನು ಉಲ್ಲಂಘಿಸಿದ್ದಾರೆ. ಕೃಷಿ ಮಸೂದೆಯನ್ನು ವಿರೋಧಿಸುತ್ತಿರುವ ವಿವಿಧ ರಾಜಕೀಯ ಪಕ್ಷಗಳ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಿಲ್ಲ. ಉಪಸಭಾಪತಿಯನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿಲುವಳಿಯನ್ನು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಸೋಮವಾರ ತಿರಸ್ಕರಿಸಿದ್ದರು ಹಾಗೂ ಕೋಲಾಹಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ ಹಾಗೂ ಉಪ ಸಭಾಪತಿಯನ್ನು ಅನುಚಿತವಾಗಿ ನಡೆಸಿಕೊಂಡ ಆರೋಪದಡಿ ಎಂಟು ಮಂದಿಯನ್ನು ಒಂದು ವಾರ ಅಮಾನತುಗೊಳಿಸಿದ್ದರು. ಹೀಗಿರುವಾಗ ಈ ಅಮಾನತ್ತನ್ನು ವಿರೋಧಿಸಿ ಸದಸ್ಯರು ಸಂಸತ್ ಆವರಣದಲ್ಲಿರುವ ಗಾಂಧೀ ಪ್ರತಿಮೆ ಎದುರು ಅಹೋ ರಾತ್ರಿ ಧರಣಿ ಹೂಡಿದ್ದರು.