ಶಿಕ್ಷಣ ಇಲಾಖೆ ಜವಾಬ್ದಾರಿಯನ್ನು ಪ್ರಲ್ಹಾದ್ ಜೋಶಿಗೆ ನೀಡಿದ ಹಿಂದೆ ಕಾರಣವಿದೆಯಾ? ದಿಢೀರ್ ಪ್ರಧಾನಿ ನರೇಂದ್ರ ಮೋದಿ ಔಟ್ ಆಫ್ ಸಿಲೆಬಸ್ ಆಯ್ಕೆ ಮಾಡಿ ಕೊಟ್ಟ ಸಂದೇಶವೇನು? ಪ್ರಧಾನ್ ರಾಜೀನಾಮೆ, ಜೋಶಿ ಜವಾಬ್ದಾರಿ ಸುತ್ತ ಮುತ್ತ.
ನವದೆಹಲಿ (ಜು.25) ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ, ವಿದ್ಯಾರ್ಥಿಗಳು, ವಿಪಕ್ಷಗಳು, ವಿವಿಧ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ, ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಶಿಕ್ಷಣ ಇಲಾಖೆ ಜವಾಬ್ದಾರಿಯನ್ನು ಪ್ರಲ್ಹಾದ್ ಜೋಶಿಗೆ ಹೆಗಲಿಗೆ ನೀಡಲಾಗಿದೆ. ಕೇಂದ್ರ ಅಹಾರ ಮತ್ತು ನಾಗರೀಕ, ನವೀಕರಿಸಬಹುದಾದ ಇಂಧನ ಸಚಿವರಾಗಿರುವ ಪ್ರಲ್ಹಾದ್ ಜೋಶಿಗೆ ಹೆಚ್ಚುವರಿಯಾಗಿ ಶಿಕ್ಷಣ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಇಡೀ ದೇಶವೇ ಶಿಕ್ಷಣ ಇಲಾಖೆ ಮೇಲೆ ಕಣ್ಣಿಟ್ಟಿರುವಾಗ ಈ ಜವಾಬ್ದಾರಿಯನ್ನು ಮೋದಿ ನೇರವಾಗಿ ಪ್ರಲ್ಹಾದ್ ಜೋಶಿಗೆ ನೀಡಿದ ಹಿಂದಿನ ಅಸಲಿ ಕಾರಣವೇನು?
ಪರೀಕ್ಷಾ ಅಕ್ರಮಗಳಿಗೆ ತಡೆ
ನೀಟ್ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಇಡೀ ದೇಶಾದ್ಯಂತ ಭಾರಿ ಸದ್ದು ಮಾಡಿದೆ. ಈ ಘಟನೆಯಿಂದ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ, ಪಾರದರ್ಶಕತೆ, ಭ್ರಷ್ಟಾಚಾರ, ಅಕ್ರಮ ಮುಕ್ತ ಮಾಡಬೇಕು ಅನ್ನೋ ಕೂಗು ಜೋರಾಗಿ ಕೇಳಿಸುತ್ತಿದೆ. ದೇಶದಲ್ಲೆ ಕೋಲಾಹಲ ಎದ್ದಿರುವ ಸಮಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಮರಳಿ ಹಳಿಗೆ ತರುವುದು ಹಾಗೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ವ್ಯವಸ್ಥೆಯನ್ನು ಸಂಪೂರ್ಣವಾಗಿ ಶುದ್ಧೀಕರಿಸುವುದು ನೂತನ ಸಚಿವರ ಮೊದಲ ಆದ್ಯತೆಯಾಗಿದೆ. ಜೀರೊ ಪೇಪರ್ ಲೀಕ್ , ಪ್ರಶ್ನೆಪತ್ರಿಕೆ ಸೋರಿಕೆ ತಡೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಹಾಗೂ ನೀಟ್ ಪರೀಕ್ಷೆಯನ್ನು ಓಎಂಆರ್ (OMR) ಮಾದರಿಯಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (CBT) ಹಂತ-ಹಂತವಾಗಿ ಬದಲಾಯಿಸುವಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ದೃಢ ನಾಯಕತ್ವದ ಅಗತ್ಯವಿತ್ತು. ಇದಕ್ಕೆ ಅನುಭವಿ ಜೋಶಿ ಸೂಕ್ತ ಅನ್ನೋ ಕಾರಣದಿಂದ ಸದ್ದು ಗದ್ದಲವಿಲ್ಲದೆ ಆಯ್ಕೆ ನಡೆದಿದೆ.
ಮೋದಿಯ ವಿಶ್ವಾಸಾರ್ಹ ನಾಯಕ
ಪ್ರಲ್ಹಾದ್ ಜೋಶಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ 5 ಬಾರಿ ಗೆದ್ದು ಸಂಸದರಾಗಿದ್ದಾರೆ. ಮೋದಿ ಕ್ಯಾಬಿನೆಟ್‌ನಲ್ಲಿ ಹಲವು ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಹೈಕಮಾಂಡ್‌ನ ಅತ್ಯಂತ ವಿಶ್ವಾಸಾರ್ಹ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇತ್ತ ಆರ್‌ಎಸ್‌ಎಸ್ ಕಟ್ಟಾಳುವಾಗಿರುವ ಕಾರಣ ಸಂಘ ಪರಿವಾರದ ಸಂಪೂರ್ಣ ಬೆಂಬಲ ಪ್ರಲ್ಹಾದ್ ಜೋಶಿಗಿದೆ. ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಜೋಶಿ, ವಿರೋಧ ಪಕ್ಷಗಳ ಕಠಿಣ ಸವಾಲುಗಳನ್ನು ಮತ್ತು ಬಿಕ್ಕಟ್ಟುಗಳನ್ನು ಜಾಣ್ಮೆಯಿಂದ ಎದುರಿಸುವಲ್ಲಿ ಎತ್ತಿದ ಕೈ . ಕೇಂದ್ರ ಸರ್ಕಾರ ಹಾಗೂ ವಿದ್ಯಾರ್ಥಿ ಸಂಘಟನೆಗಳ ನಡುವೆ ವಿಶ್ವಾಸವನ್ನು ಮರುಸ್ಥಾಪಿಸಲು ಜೋಶಿ ಅವರಂತಹ ಅನುಭವಿ ಸಚಿವರೇ ಸೂಕ್ತ ಎಂಬುದು ಮೋದಿ ಸೇರಿದಂತೆ ಬಿಜೆಪಿ ಹೈಕಮಾಂಡ್ ನಿರ್ಧಾರವಾಗಿತ್ತು.
ಹೊಸ ವ್ಯವಸ್ಥೆ, ಕಠಿಣ ಅಭ್ಯಾಸ ಮಾಡಿದವರು ಮಾತ್ರ ಪಾಸ್
ದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗೆ ಆಗ್ರಹಿಸಿದ ಪ್ರತಿಯೊಬ್ಬರಿಗೂ ಪ್ರಧಾನಿ ಮೋದಿ ಗಿಫ್ಟ್ ನೀಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಎಲ್ಲಾ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತಷ್ಟು ಕಠಿಣ ವಾಗಲಿದೆ. ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ 'ರಾಷ್ಟ್ರೀಯ ಶಿಕ್ಷಣ ನೀತಿ' (NEP 2020)ದೇಶಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಸಂಯೋಜಿಸುವುದು ನೂತನ ಸಚಿವರ ಮುಂದಿರುವ ಪ್ರಮುಖ ಸವಾಲು. ಶೈಕ್ಷಣಿಕ ಸುಧಾರಣೆಗಳು ಹಾಗೂ ಇಲಾಖೆಯ ಆಡಳಿತಾತ್ಮಕ ಕೆಲಸಗಳಿಗೆ ಹೊಸ ವೇಗ ನೀಡಲು ಜೋಶಿ ಅವರ ಶಿಸ್ತುಬದ್ಧ ಕಾರ್ಯವೈಖರಿ ನೆರವಾಗಲಿದೆ ಎಂಬುದು ಹೈಕಮಾಂಡ್ ಲೆಕ್ಕಾಚಾರವಾಗಿದೆ.


