ಕೇವಾಡಿಯಾ (ಗುಜರಾತ್‌): ತವರು ರಾಜ್ಯ ಗುಜರಾತ್‌ನಲ್ಲಿ 2 ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಏಕತಾ ಪ್ರತಿಮೆ ಸನಿಹದ 4 ಪ್ರವಾಸಿ ತಾಣಗಳನ್ನು ಉದ್ಘಾಟಿಸಿದರು. ಆರೋಗ್ಯ ವನ, ಏಕತಾ ಮಾಲ್‌, ಮಕ್ಕಳ ಪೌಷ್ಟಿಕ ಉದ್ಯಾನ ಹಾಗೂ ಸರ್ದಾರ್‌ ಪಟೇಲ್‌ ಜೈವಿಕ ಪಾರ್ಕ್/ಜಂಗಲ್‌ ಸಫಾರಿ- ಇವು ಮೋದಿ ಅವರ ಹಸ್ತದಿಂದ ಉದ್ಘಾಟನೆಗೊಂಡ ಪ್ರವಾಸಿ ತಾಣಗಳು. ಶನಿವಾರವೂ ಮೋದಿ ಉದ್ಘಾಟನಾ ಪರ್ವ ಮುಂದುವರಿಸಲಿದ್ದು, ಎರಡೂ ದಿನ 17 ಹೊಸ ಯೋಜನೆಗಳನ್ನು ಉದ್ಘಾಟಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ.

ಆರೋಗ್ಯ ವನ:
17 ಎಕರೆ ವ್ಯಾಪ್ತಿಯಲ್ಲಿ ಆರೋಗ್ಯ ವನ ಇದೆ. 380 ಪ್ರಭೇದಗಳ 5 ಲಕ್ಷ ಔಷಧದ ಸಸ್ಯಗಳನ್ನು ಇಲ್ಲಿ ಬೆಳೆಸಲಾಗೊದೆ. ಉದ್ಯಾನವು ಆಯುರ್ವೇದ, ಯೋಗದ ಮಹತ್ವ ಸಾರಿ ಹೇಳುತ್ತದೆ. ಪ್ರತ್ಯೇಕ ‘ಯೋಗ-ಆಯುರ್ವೇದ’ ಗಾರ್ಡನ್‌ ಕೂಡ ಒಳಗೊಂಡಿದೆ.

ದೇಶದ ಮೊದಲ ಸೀಪ್ಲೇನ್‍‌ಗಿಂದು ಮೋದಿ ಚಾಲನೆ

ಏಕತಾ ಮಾಲ್‌:
ಪ್ರವಾಸಿಗರು ತಮಗೆ ಬೇಕಾದ ಕೈಮಗ್ಗ ಉತ್ಪನ್ನಗಳನ್ನು ಖರೀದಿಸಬಹುದಾದ 2 ಅಂತಸ್ತಿನ ಹವಾನಿಯಂತ್ರಿತ ಸಂಕೀರ್ಣ ಇದು.

ಏಕತಾ ಪಾರ್ಕ್ ಬಳಿ ಮೊಸಳೆ ಸ್ಥಳಾಂತರವೇಕೆ?

ಮಕ್ಕಳ ಪೌಷ್ಟಿಕ ಪಾರ್ಕ್:
35 ಸಾವಿರ ಚದರಡಿಯಲ್ಲಿ ಇರುವ ಈ ಪಾರ್ಕ್ ವಿಶ್ವದ ಮೊದಲ ತಂತ್ರಜ್ಞಾನ ಆಧರಿತ ಪಾರ್ಕ್ ಎನ್ನಿಸಿಕೊಂಡಿದೆ. ಮಕ್ಕಳಿಗೆ ಪೌಷ್ಟಿಕ ಆಹಾರದ ಅರಿವು ಮೂಡಿಸುತ್ತದೆ.

ಜಂಗಲ್‌ ಸಫಾರಿ:
ಇಲ್ಲಿನ ಜಂಗಲ್‌ ಸಫಾರಿ ಜೈವಿಕ ಪಾರ್ಕ್ 375 ಎಕರೆ ವಿಸ್ತಾರ ಹೊಂದಿದೆ. 100 ವಿವಿಧ ತಳಿಗಳ 1,100 ದೇಶೀಯ ಹಾಗೂ ವಿದೇಶಿ ಪ್ರಾಣಿ-ಪಕ್ಷಿಗಳು (ಹುಲಿ, ಝೀಬ್ರಾ, ಚಿರತೆ ಸೇರಿ) ಇಲ್ಲಿವೆ.

ಗಿಳಿಗಳ ಜತೆ ಮೋದಿ ಆಟ!
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದಿಲ್ಲಿಯ ತಮ್ಮ ನಿವಾಸದಲ್ಲಿ ನವಿಲುಗಳ ಜತೆ ಕಾಣಿಸಿಕೊಂಡು ಸುದ್ದಿ ಆಗಿದ್ದರು. ಈಗ ಗುಜರಾತ್‌ನ ಕೇವಾಡಿಯಾದ ಜಂಗಲ್‌ ಸಫಾರಿ ಪಾರ್ಕ್ಗೆ ಹೋದಾಗ ಕೈ ಮೇಲೆ ಗಿಳಿಗಳನ್ನು ಕೂಡಿಸಿಕೊಂಡು ಆನಂದಿಸಿದರು. ಮೋದಿ ಅವರು ಪಾರ್ಕ್ಗೆ ಬಂದಾಗ ಅವರ ಕೈ ಮೇಲೆ ಸಿಬ್ಬಂದಿಯು 2 ಗಿಳಿಗಳನ್ನು ಇರಿಸಿದರು. ಅದರಲ್ಲಿ ಒಂದು ಗಿಳಿ ಮೋದಿ ಭುಜವನ್ನೂ ಏರಿತು. ಈ ವಿಡಿಯೋ ಹಾಗೂ ಫೋಟೋಗಳು ವೈರಲ್‌ ಆಗಿವೆ.